ಬೆಂಗಳೂರು: ಮುಂದಿನ 7 ವರ್ಷದೊಳಗೆ ಕರ್ನಾಟಕದಲ್ಲಿ ವಿವಿಧ ವಲಯದಲ್ಲಿ ಒಂದು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಎಂದು ಅದಾನಿ ಗ್ರೂಪ್ನ ಸಿಇಒ ಕರಣ್ ಗೌತಮ್ ಅದಾನಿ ತಿಳಿಸಿದರು.
ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾದ ಜಾಗತಿಕ ಹೂಡಿಕೆದಾರರ ಸಮಾವೇಶ-2022ನಲ್ಲಿ ಮಾತನಾಡಿದ ಅವರು, ಕರ್ನಾಟಕ ಎಲ್ಲ ವಲಯಗಳಲ್ಲೂ ಸಾಕಷ್ಟು ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳು ಇಲ್ಲಿ ಸಿಗುತ್ತವೆ. ಹೀಗಾಗಿ ನಾವು ಮುಂದಿನ 7 ವರ್ಷದೊಳಗೆ ಒಂದು ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕವು ವೈಮಾನಿಕ, ರಕ್ಷಣೆ , ಕೈಗಾರಿಕೆ, ಐಟಿಬಿಟಿ ಸೇರಿದಂತೆ ಎಲ್ಲಾ ವಲಯಗಳಲ್ಲೂ ಸಾಕಷ್ಟು ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಇಂಥ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವುದು ನಮ್ಮ ಸೌಭಾಗ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಪವರ್ ಸ್ಟೇಷನ್ ,ಮಂಗಳೂರು ವಿಮಾನ ನಿಲ್ದಾಣ ನಿಲ್ದಾಣ ನಮ್ಮ ಅದಾನಿ ಗ್ರೂಪ್ ನಿಂದ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ 20 ಸಾವಿರ ಕೋಟಿ ಬಂಡವಾಳ ರಾಜ್ಯದಲ್ಲಿ ಹೂಡಿಕೆ ಮಾಡಿದ್ದೇವೆ. ರಿನ್ಯೂವೆಬಲ್ ಎನರ್ಜಿ ಕ್ಷೇತ್ರ, ಸೋಲಾರ್ ಪವರ್ ಕ್ಷೇತ್ರದಲ್ಲೂ ಹೂಡಿಕೆ ಮಾಡಲಿದ್ದೇವೆ. ಜಲ ಸಾರಿಗೆ, ಲಾಜಿಸ್ಟಿಕ್ ಕ್ಷೇತ್ರದಲ್ಲೂ ಹೂಡಿಕೆ ಮಾಡುವುದಾಗಿ ತಿಳಿಸಿದರು.
ಅದಾನಿ ಪೋಟ್೯, ಅಡುಗೆ ಎಣ್ಣೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗಿದೆ. ಮಲ್ಟಿಪಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಪಡಿಸುತ್ತೇವೆ, ಅಹಾರ ಸಂಸ್ಕರಣೆ ಮತ್ತು ಇಂದನ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತೇವೆ. ಇದರಿಂದ ಉದ್ಯೋಗಾವಕಾಶಗಳು ಕೂಡ ಲಭ್ಯವಾಗಲಿದೆ ಎಂದು ಕರಣ್ ಅದಾನಿ ಹೇಳಿದರು.