ಮುಂಬೈ : ಸೌಂದರ್ಯ ಪ್ರಸಾಧನಗಳ ಇ-ಕಾಮರ್ಸ್ ಕಂಪನಿ ನೈಕಾದ ಸಂಸ್ಥಾಪಕಿ ಫಲ್ಗುಣಿ ನಾಯರ್ ‘ಭಾರತದ ಶ್ರೀಮಂತ ಮಹಿಳೆ’ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಬುಧವಾರ ಬಿಡುಗಡೆಯಾದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾದ ಶ್ರೀಮಂತರ ಪಟ್ಟಿ 2022ರ ಪ್ರಕಾರ ಫಲ್ಗುಣಿ ನಾಯರ್ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರನ್ನು ಹಿಂದಿಕ್ಕಿ ಸ್ವಶ್ರಮದಿಂದ ಏಳ್ಗೆ ಸಾಧಿಸಿದ ಭಾರತದ ಶ್ರೀಮಂತ ಮಹಿಳೆ’ ಎಂಬ ಪಟ್ಟ ಅಲಂಕರಿಸಿದ್ದಾರೆ.
ನಾಯರ್ ಹಾಗೂ ಅವರ ಕುಟುಂಬ ಒಡೆತನದ ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳ ಕಂಪನಿ ನೈಕಾ ಕಳೆದ ವರ್ಷ ಶೇ.345ರಷ್ಟು ಅಭಿವೃದ್ಧಿ ಸಾಧಿಸಿ ಪ್ರಸ್ತುತ ಅವರ ಸಂಪತ್ತು 38,700 ಕೋಟಿ ರೂ.ಗೆ ಏರಿಕೆಯಾಗಿದೆ. 59 ವರ್ಷದ ಫಲ್ಗುಣಿ ನಾಯರ್ ಅವರ ನಂತರದ ಸ್ಥಾನದಲ್ಲಿ ಇತ್ತೀಚೆಗಷ್ಟೇ ನಿಧನ ಹೊಂದಿದ ಭಾರತದ ಪ್ರಸಿದ್ಧ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ವಾಲಾ ಇದ್ದಾರೆ. ರೇಖಾ ಜುಂಜುನ್ವಾಲಾ ಅವರ ಸಂಪತ್ತು 37,200 ಕೋಟಿ ರೂ. ಇದೆ. ಇನ್ನು32,000 ಕೋಟಿ ರೂ. ಸಂಪತ್ತು ಹೊಂದಿರುವ ಸ್ಮಿತಾ ವಿ. ಕೃಷ್ಣ, ಝೋಹೊ ಕಾರ್ಪೋರೇಷನ್ ನ ರಾಧಾ ವೆಂಬು ( 30,500 ಕೋಟಿ ರೂ.) ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (24,800 ಕೋಟಿ ರೂ.) ಈ ಪಟ್ಟಿಯಲ್ಲಿರುವ ಇತರ ಪ್ರಮುಖ ಮಹಿಳೆಯರು.
ಸಂಪತ್ತಿನಲ್ಲಿ ಭಾರೀ ಹೆಚ್ಚಳ ಕಂಡ ಟಾಪ್ 10 ಉದ್ಯಮಿಗಳ ಪಟ್ಟಿಯಲ್ಲಿ ಕೂಡ ಫಲ್ಗುಣಿ ನಾಯರ್ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತಿನಲ್ಲಿ 30,000 ಕೋಟಿ ರೂ. ಏರಿಕೆಯಾಗಿದ್ದು, ಈ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಗೌತಮ್ ಅದಾನಿ, ಮುಖೇಶ್ ಅಂಬಾನಿ ಹಾಗೂ ಸೈರಸ್ ಪೂನಾವಾಲಾ ಅವರಂತಹ ಉದ್ಯಮಿಗಳಿರುವ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಫಲ್ಗುಣಿ ನಾಯರ್ ಅವರದ್ದು.
ಗುಜರಾತ್ ಮೂಲದ, ಮುಂಬೈನಲ್ಲಿ ಬೆಳೆದ ಫಲ್ಗುಣಿ ಮ್ಯಾನೇಜ್ಮೆಂಟ್ ಪದವಿ ಪಡೆದು ಹಲವು ವರ್ಷಗಳ ಕಾಲ ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದರು. 2012ರಲ್ಲಿ 50ನೇ ವರ್ಷಕ್ಕೆ ಕಾಲಿಡುವುದಕ್ಕೆ ಕೆಲವೇ ದಿನಗಳ ಮೊದಲು, ಉದ್ಯೋಗ ತೊರೆದ ಫಲ್ಗುಣಿ, ನಾಯಿಕಾ ಎಂಬ ಕಂಪನಿ ಸ್ಥಾಪಿಸಿದ್ದರು. ಶೃಂಗಾರ ಸಾಮಗ್ರಿಗಳಾದ ನೇಲ್ ಪಾಲಿಷ್ , ಲಿಪ್ಸ್ಟಿಕ್, ಪೌಡರ್, ಕ್ರೀಮ್, ವಿವಾಹ ಸೌಂದರ್ಯ ಸಾಮಗ್ರಿ, ಕೇಶ ಸಾಮಗ್ರಿಗಳನ್ನು ಈ ಕಂಪನಿ ಉತ್ಪಾದಿಸುತ್ತಿದೆ. ಸಂಸ್ಕೃತದಲ್ಲಿ ನಾಯಕಿಗೆ ನೈಕಾ ಎಂಬ ಪದವಿದ್ದು, ಅದನ್ನೇ ಮಹಿಳೆಯರ ಶೃಂಗಾರ ಸಾಮಗ್ರಿಗಳ ಕುರಿತ ತಮ್ಮ ಕಂಪನಿಯ ಹೆಸರನ್ನಾಗಿ ಫಲ್ಗುಣಿ ಇಟ್ಟಿದ್ದರು. ಅವರ ಈ ಉದ್ಯಮ ಅಲ್ಪಾವಧಿಯಲ್ಲೇ ಭಾರೀ ಯಶಸ್ಸು ಸಾಧಿಸುವ ಜೊತೆಗೆ ಆಗರ್ಭ ಶ್ರೀಮಂತರ ಪಟ್ಟಕ್ಕೇರಿಸಿದೆ.
ಅಮೆರಿಕ ಮೂಲದ ಪ್ರಖ್ಯಾತ ನಿಯತಕಾಲಿಕಾ ಫೋಬ್ಸ್ ಪ್ರಕಟಿಸಿರುವ 2021ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಫಲ್ಗುಣಿ ನಾಯರ್ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಪಟ್ಟಿಯಲ್ಲಿ ಅವರು 88ನೇ ಸ್ಥಾನದಲ್ಲಿದ್ದರು. ಇನ್ನು ಪಲ್ಗುಣಿ ನಾಯರ್ ಅವರ ನೈಕಾ ಕಂಪನಿ ಸ್ಟಾಕ್ ಎಕ್ಸ್ ಚೇಂಜ್ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ನೇತೃತ್ವದ ಕಂಪನಿ ಎಂಬ ಹೆಗ್ಗಳಿಕೆ ಕೂಡ ಗಳಿಸಿದೆ.