60 ವರ್ಷ ಮೇಲ್ಪಟ್ಟು, ಇನ್ನಿತರ ಕಾಯಿಲೆಗಳಿರುವವರು ಲಸಿಕೆ 3ನೇ ಡೋಸ್ ಪಡೆಯಲು ಮೆಡಿಕಲ್​ ಸರ್ಟಿಫಿಕೇಟ್​ ಬೇಕಾಗಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

60 ವರ್ಷ ಮೇಲ್ಪಟ್ಟು, ಇನ್ನಿತರ ಯಾವುದೇ ರೋಗದಿಂದ ಬಳಲುತ್ತಿದ್ದವರಿಗೆ ಕೊವಿಡ್​ 19 ಲಸಿಕೆ ಮೂರನೇ ಡೋಸ್​​ (ಬೂಸ್ಟರ್​ ಡೋಸ್​ ಅಥವಾ ಮುಂಜಾಗರೂಕತೆ ಡೋಸ್​) ನೀಡಲು ಯಾವುದೇ ವೈದ್ಯಕೀಯ ಸರ್ಟಿಫಿಕೇಟ್​ ಆಗಲಿ, ವೈದ್ಯರ ಶಿಫಾರಸ್ಸು ಆಗಲೀ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಹೇಳಿದೆ. ಇಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್​ ಅವರು, ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಮುಂಜಾಗರೂಕತೆ ಡೋಸ್ ನೀಡಲು ಯಾವುದೇ ಪ್ರಮಾಣ ಪತ್ರ ಬೇಡ. ಆದರೆ ಇತರ ಕೆಲವು ರೋಗಗಳಿಂದ ಬಳಲುತ್ತಿರುವವರು ಲಸಿಕೆಯ ಮೂರನೇ ಡೋಸ್ ಪಡೆಯುವುದಕ್ಕೂ ಮೊದಲು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರೊಟ್ಟಿಗೆ ಒಮ್ಮೆ ಸಮಾಲೋಚನೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಡಿಸೆಂಬರ್​ 25ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಮೂರನೇ ಡೋಸ್ ಅಥವಾ ಮುನ್ನೆಚ್ಚರಿಕಾ ಡೋಸ್ ನೀಡಲಾಗುವುದು ಎಂದು ಹೇಳಿದ್ದರು. ಅದಾದ ನಂತರ ಈ ಬಗ್ಗೆ ಒಂದೊಂದೇ ಬೆಳವಣಿಗೆ ಆಗುತ್ತಿದೆ. ಎರಡನೇ ಡೋಸ್​ ಪಡೆದು 9 ತಿಂಗಳು ಆದವರಷ್ಟೇ ಈ ಮೂರನೇ ಡೋಸ್​ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊವಿಡ್​ 19 ಲಸಿಕೆ ನೋಂದಣಿ ವೇದಿಕೆ ಕೊವಿನ್​ ವೆಬ್​ಸೈಟ್​ ಕಾರ್ಯಕಾರಿ ಮುಖ್ಯಸ್ಥರಾಗಿದ್ದ ಡಾ. ಆರ್​.ಎಸ್​.ಶರ್ಮಾ ಈ ಹಿಂದೆ ಮೂರನೇ ಡೋಸ್ ಬಗ್ಗೆ ಮಾತನಾಡಿ, 60 ವರ್ಷ ಮೇಲ್ಪಟ್ಟು, ಇನ್ನಿತರ ರೋಗಗಳಿಂದ ಬಳಲುತ್ತಿರುವವರು ಕೊವಿಡ್​ 19 ಬೂಸ್ಟರ್​ ಡೋಸ್ ಪಡೆಯಬೇಕೆಂದರೆ, ಅವರು ಸಂಬಂಧಪಟ್ಟ ವೈದ್ಯರಿಂದ ಸರ್ಟಿಫಿಕೇಟ್​ ಹೊಂದಿರಬೇಕು. ಈ ವೈದ್ಯಕೀಯ ಪ್ರಮಾಣಪತ್ರವಿಲ್ಲದೆ ಇದ್ದರೆ ಲಸಿಕೆ ನೀಡಲು ಆಗುವುದಿಲ್ಲ. ಅವರಿಗೆ ಯಾವೆಲ್ಲ ಸಮಸ್ಯೆ ಇದೆ ಎಂಬುದನ್ನು ಡಾಕ್ಟರ್ ಸರ್ಟಿಫಿಕೇಟ್​​ ಮೂಲಕ ತಿಳಿದು, ಮೂರನೇ ಡೋಸ್ ನೀಡಲಾಗುತ್ತದೆ. ಉಳಿದಂತೆ ಇನ್ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದರು.ಇದೀಗ ಯಾವುದೇ ಸರ್ಟಿಫಿಕೇಟ್​ ಬೇಡವೆಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಂದಹಾಗೆ, ಈ ಬಾರಿ ಮೂರನೇ ಡೋಸ್​ ಆಗಿ ಬೇರೆಯದ್ದೇ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೆ ಯಾವ ಲಸಿಕೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಮಧ್ಯೆ ಇಂದು ಕೊವಾವ್ಯಾಕ್ಸ್, ಕಾರ್ಬೆವ್ಯಾಕ್ಸ್ ಕೊವಿಡ್ 19 ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ದೇಶದಲ್ಲಿ ಮುನ್ನೆಚ್ಚರಿಕಾ ಡೋಸ್ ಆಗಿ ಕೊವಾವ್ಯಾಕ್ಸ್ ಲಸಿಕೆ ನೀಡುವುದು ಉತ್ತಮ ಎಂಬ ಶಿಫಾರಸ್ಸುಗಳನ್ನೂ ಕೆಲವು ಆರೋಗ್ಯ ತಜ್ಞರು ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

× Chat with us