ಚಂಡೀಗಢ : ‘ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹವಾಗಲು ಅರ್ಹ. ಯುವಕರು 21 ವರ್ಷಕ್ಕೆ ವಿವಾಹಕ್ಕೆ ಅರ್ಹರಾಗುತ್ತಾರೆ’ ಎಂದು ಪಂಜಾಬ್-ಹರ್ಯಾಣಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಠಾಣ್ಕೋಟ್ ಮೂಲದ ಮುಸ್ಲಿಂ ಜೋಡಿಯ ವಿವಾಹಕ್ಕೆ ಸಂಬಂಧಿಸಿದ ಅರ್ಜಿ ಇತ್ಯರ್ಥಗೊಳಿಸಿದ ನ್ಯಾ| ಜಸ್ಜೀತ್ ಸಿಂಗ್ ಬೇಡಿ ಅವರ ಏಕಸದಸ್ಯ ಪೀಠ, ‘ಈ ಜೋಡಿಯು ಕೇವಲ ಕುಟುಂಬದ ಸದಸ್ಯರ ಇಚ್ಛೆಯ ವಿರುದ್ಧ ವಿವಾಹವಾಗಿದೆ ಎಂದರೆ ವಿವಾಹವನ್ನು ಅಮಾನ್ಯ ಮಾಡಲು ಆಗದು. ಸಂವಿಧಾನದತ್ತ ಹಕ್ಕನ್ನು ಅವರಿಂದ ಕಸಿದುಕೊಳ್ಳಲು ಆಗದು’ ಎಂದು ಗೇಳಿದೆ.
ಇಸ್ಲಾಮಿಕ್ ಶರಿಯಾ ನಿಯಮಗಳ ಪ್ರಕಾರ, ಮುಸ್ಲಿಂ ಬಾಲಕಿಯರ ವೈವಾಹಿಕ ನಿಯಮಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ನಿರ್ಧರಿಸುತ್ತದೆ. ‘ಮೊಹಮ್ಮಡನ್ ಕಾನೂನು ತತ್ವ’ ಪುಸ್ತಕದ 195ನೇ ಪರಿಚ್ಛೇದದ ಪ್ರಕಾರ ಬಾಲಕಿಯು 16ನೇ ವಯಸ್ಸಿನಲ್ಲಿ ಮದುವೆಗೆ ಅರ್ಹಳಾಗುತ್ತಾಳೆ. ಯುವಕನಿಗೆ 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಈ ವಯಸ್ಸಿನಲ್ಲಿ ಪರಸ್ಪರ ಒಪ್ಪಿದವರನ್ನು ವಿವಾಹವಾಗಲು ಬಾಲಕಿ ಹಾಗೂ ಯುವಕ ಹಕ್ಕು ಹೊಂದಿರುತ್ತಾರೆ’ ಎಂದು ಪೀಠ ಹೇಳಿದೆ.
ಅಲ್ಲದೆ, ಮದುವೆ ಆಗಿರುವ ಬಾಲಕಿ-ಯುವಕಗೆ ಪೊಲೀಸ್ ಭದ್ರತೆ ನೀಡಬೇಕು ಎಂದೂ ಪಠಾಣ್ಕೋಟ್ ಪೊಲೀಸರಿಗೆ ಸೂಚಿಸಿದೆ.
‘2022ರ ಜೂ.8ರಂದು ನಾವು ಮದುವೆ ಆಗಿದ್ದೆವು. ಆದರೆ ಮದುವೆಗೆ ವಿರುದ್ಧವಾಗಿರುವ ಕುಟುಂಬದಿಂದ ನಮಗೆ ಬೆದರಿಕೆ ಬರುತ್ತಿದೆ’ ಎಂದು ನವವಿವಾಹಿತ ಜೋಡಿ ಅರ್ಜಿ ಸಲ್ಲಿಸಿತ್ತು. 16ನೇ ವಯಸ್ಸಿಗೇ ವಯಸ್ಕ ಮಾನ್ಯತೆ ಲಭಿಸುತ್ತದೆ ಎಂದು ಮುಸ್ಲಿಂ ಕಾನೂನನ್ನು ಉಲ್ಲೇಖಿಸಿ ಜೋಡಿಯು ವಾದ ಮಂಡಿಸಿತ್ತು.