ನವದೆಹಲಿ : ಭಾರತದ 15 ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ಭಾರತ ದೇಶದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ದ್ರೌಪದಿ ಮುರ್ಮು ಅವರಿಂದು ಬೆಳಗ್ಗೆ ರಾಜ್ ಘಾಟ್ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಕಳೆದ ಗುರುವಾರ ಮತ ಎಣಿಕೆಯ ಬಳಿಕ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ದೇಶದ 15ನೇ ರಾಷ್ಟ್ರಪತಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. 1997ರಲ್ಲಿ ಬಿಜೆಪಿ ಸೇರುವ ಮೂಲಕ ಇವರು ರಾಜಕೀಯ ಕ್ಷೇತ್ರದಲ್ಲಿ ತನ್ನ ಪ್ರಯಾಣ ಪ್ರಾರಂಭಿಸಿದ್ದರು. 2015ರಲ್ಲಿ ಜಾರ್ಖಂಡ್ನ ಮೊದಲ ಮಹಿಳಾ ಗವರ್ನರ್ ಆದರು. ಒಡಿಶಾದಿಂದ ರಾಜ್ಯವೊಂದರ ಗವರ್ನರ್ ಆಗಿ ನೇಮಕಗೊಂಡ ಮೊದಲ ಮಹಿಳಾ ಬುಡಕಟ್ಟು ನಾಯಕಿ ಎಂಬ ಹೆಗ್ಗಳಿಕೆಗೂ ಮುರ್ಮು ಪಾತ್ರರಾಗಿದ್ದಾರೆ.
ಮಾಜಿ ರಾಷ್ಟ್ಪತಿ ರಾಮನಾಥ್ ಕೋವಿಂದ್ ಅವರು ಕೂಡ ಜೊತೆಯಲ್ಲಿದ್ದರು.ನ್ಯಾಯಮೂರ್ತಿ ಎನ್.ವಿ.ರಮಣ ಅವರು ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಾತನಾಡಿದ ಮುರ್ಮು ಅವರು
” ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ಸ್ವತಂತ್ರ ಭಾರತದ ನಾಗರಿಕರೊಂದಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ.” ಎಂದರು
ಮುಂದುವರಿದು ರಾಷ್ಟ್ರಪತಿ ಹುದ್ದೆಯನ್ನು ತಲುಪುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
.ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗೆ. ನನ್ನ ನಾಮನಿರ್ದೇಶನದ ಹಿಂದೆ ಬಡವರ ಆಶೀರ್ವಾದವಿದೆ, ಇದು ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿದೆ ಎಂದರು.
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ರಾಜತಾಂತ್ರಿಕ ಕಾರ್ಯಗಳ ಮುಖ್ಯಸ್ಥರು, ಸಂಸದರು ಮತ್ತು ಸರ್ಕಾರದ ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.