ಮುಂಬೈ- : ಬಂಡಾಯ ಚಟುವಟಿಕೆಗಳ ಮೂಲಕ ಅಧಿಕಾರಕ್ಕೆ ಬಂದ ಶಿವಸೇನೆಯ ಪ್ರತ್ಯೇಕ ಗುಂಪಿನ ನಾಯಕ ಮುಖ್ಯಮಂತ್ರಿ ಏಕನಾಥ ಶಿಂಧೆ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದೆ.
ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದ್ದು, ಆಗಸ್ಟ್ 18ರಂದು ಚುನಾವಣೆ ನಡೆಸುವುದಾಗಿ ತಿಳಿಸಿದೆ. ಆದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ ಚುನಾವಣೆ ನಡೆಸಬಾರದು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಈ ಹಿಂದೆ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ ಸ್ಥಳಿಯ ಸಂಸ್ಥೆಗಳ ಚುನಾವಣೆ ನಡೆಸಬಾರದು ಎಂದು ಒತ್ತಾಯಿಸಿತ್ತು. ಚುನಾವಣಾ ವೇಳಾ ಪಟ್ಟಿ ಪ್ರಕಟಗೊಂಡ ತಕ್ಷಣವೇ ಟ್ವೀಟ್ ಮಾಡಿರುವ ಎನ್ಸಿಪಿ ನಾಯಕರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡದೆ ಚುನಾವಣೆ ನಡೆಸಬಾರದು ಎಂದು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ 92 ನಗರ ಪರಿಷತ್, ನಾಲ್ಕು ನಗರ ಪಂಚಾಯತ್ಗಳಿಗೆ ಆಗಸ್ಟ್ 18 ರಂದು ಚುನಾವಣೆ ನಡೆಯಲಿದೆ. ಪುಣೆ, ಸಾಂಗ್ಲಿ, ಸೊಲ್ಲಾಪುರ, ಕೊಲ್ಲಾಪುರ, ನಾಸಿಕ್, ಧುಲೆ, ನಂದೂರ್ಬಾರ್, ಜಲಗಾಂವ್, ಅಹ್ಮದ್ನಗರ, ಔರಂಗಾಬಾದ್, ಜಲ್ನಾ, ಬೀಡ್, ಒಸ್ಮಾನಾಬಾದ್, ಲಾತೂರ್, ಅಮರಾವತಿ ಮತ್ತು ಬುಲ್ಧಾನ ಜಿಲ್ಲೆಗಳ ಸ್ಥಳೀಯ ನಗರ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ಸಾಮಾಜಿಕ ನ್ಯಾಯದ ಮಾಜಿ ಸಚಿವ ಧನಂಜಯ ಮುಂಡೆ, ಒಬಿಸಿ ಮೀಸಲಾತಿ ಕೋಟಾ ನೀಡಲು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಸಿದ್ಧಪಡಿಸಿತ್ತು. ಅದನ್ನು ಆಧರಿಸಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ದೃಢ ನಿಲುವು. ಮೀಸಲಾತಿ ಇಲ್ಲದೆ ನಾಗರಿಕ ಸಂಸ್ಥೆಗಳಿಗೆ ರಾಜ್ಯದಲ್ಲಿ ಚುನಾವಣೆ ನಡೆಸಬಾರದು ಎಂದು ಒತ್ತಾಯಿಸಿದ್ದಾರೆ.
ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಬಾಕಿ ಇದೆ. ಈಗಾಗಲೇ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿರುವುದರಿಂದ ಮೀಸಲಾತಿ ರಹಿತವಾಗಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಎನ್ಸಿಪಿ ಮೂಲಗಳು ಶಂಕೆ ವ್ಯಕ್ತ ಪಡಿಸಿವೆ.
ದೇಶದಲ್ಲಿ ಎಸ್ಸಿ/ಎಸ್ಟಿಗಳಿಗೆ ಶೇ.18ರಷ್ಟು, ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ರಾಜಕೀಯ ಮೀಸಲಾತಿ ಶಾಸನ ಸಭೆಗಳಿಂತ ಕೆಳ ಹಂತದಲ್ಲಿ ಜಾರಿಯಲ್ಲಿತ್ತು. ಒಟ್ಟು ಶೇ.50ರಷ್ಟು ಈ ಮೀಸಲಾತಿಯನ್ನು ಪ್ರಾಯೋಗಿಕ ದತ್ತಾಂಶದ ಕೊರತೆಯಿಂದಾಗಿ ಮರುಸ್ಥಾಪಿಸಲು ಸುಪ್ರಿಂಕೋರ್ಟ್ ನಿರಾಕರಿಸಿತ್ತು.
ಕಳೆದ ವರ್ಷ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಭಾರೀ ಚರ್ಚೆಗಳು ನಡೆದಿವೆ. ಆಗ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದಲ್ಲಿದ್ದ ಬಿಜೆಪಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಆಗ್ರಹಿಸಿತ್ತು. ಅದೇ ಬಿಜೆಪಿ ಈಗ ಸರ್ಕಾರದ ಭಾಗವಾಗಿದೆ. ಹಿಂದಿನ ತನ್ನ ನಿಲುವಿಗೆ ಬದ್ಧವಾಗಿರಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಏಕನಾಥ್ ಶಿಂಧೆ ನೇತೃತ್ವದ ಬಣ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯ ಸಾರಿ ಹೊರ ಬಂದಿದ್ದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದೆ. ದೇವೇಂದ್ರ ಪಡ್ನಾವೀಸ್ ಉಪಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಶಿಂಧೆ ಸರ್ಕಾರಕ್ಕೆ ಇದು ಮೊದಲ ಅಗ್ನಿ ಪರೀಕ್ಷೆ ಎಂದು ಬಿಂಬಿಸಲಾಗಿದೆ.
ಸುಪ್ರೀಂಕೋರ್ಟ್ನ ತೀರ್ಪು ದೇಶಾದ್ಯಂತ ಸಂಚಲನವನ್ನೇ ಸೃಷ್ಟಿದೆ. ಬಹುತೇಕ ರಾಜ್ಯ ಸರ್ಕಾರಗಳು ಅಡ್ಡಕತ್ತರಿಗೆ ಸಿಲುಕಿವೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ರಾಜಕೀಯ ವಾಕ್ಸಮರಗಳು ನಡೆದಿದ್ದವು. ಹಿಂದುಳಿದ ವರ್ಗಗಳ ಮೀಸಲಾತಿ ರದ್ದುಗೊಳ್ಳಲು ದೇವೇಂದ್ರ ಪಡ್ನಾವೀಸ್ ಮುಖ್ಯಮಂತ್ರಿಯಾಗಿದ್ದಾಗಿನ ಬಿಜೆಪಿ ಆಡಳಿತ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಗಳು ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleನನ್ನ ಕುಟುಂಬದ ಕನಸು ನನಸು ಮಾಡಿದ್ದೇನೆ…
Next Article ಶ್ರೀಲಂಕಾ : ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸದಿಂದ ಪರಾರಿ