ಮುಂಬೈ : ಮಹಾರಾಷ್ಟ್ರದಲ್ಲಿ ಚಿರತೆ ಹಾವಳಿ ಜೋರಾಗಿದೆ. ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಆಗಮಿಸುವ ಚಿರತೆಗಳು ತೆರೆದ ಬಾವಿಗಳಿಗೆ ಬೀಳುವ ಮೂಲಕ ತಮ್ಮ ಪ್ರಾಣಗಳನ್ನು ಅಪಾಯಕ್ಕೊಡುತ್ತಿವೆ. ಇತ್ತೀಚೆಗೆ ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಚ ಇಳಿಸಿ ರಕ್ಷಿಸಿದ ಘಟನೆ ನಡೆದಿತ್ತು. ಇದೇ ತರಹದ ಹಲವು ಪ್ರಕರಣಗಳು ಇತ್ತೀಚೆಗೆ ಸಾಕಷ್ಟು ನಡೆದಿವೆ. ಈಗ ಮುಂಬೈನ ಗೋರೆಗಾಂವ್ ಪ್ರದೇಶಕ್ಕೆ ಚಿರತೆಯೊಂದು ಭೇಟಿ ನೀಡಿ ಜನರನ್ನು ಆತಂಕಕ್ಕೀಡು ಮಾಡಿದ ಘಟನೆ ನಡೆದಿದೆ.
ಮಂಗಳವಾರ (ಜೂನ್ 28) ಈ ಘಟನೆ ನಡೆದಿದ್ದು, ಚಿರತೆ ಸೆರೆ ಹಿಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ಗೋರಗಾಂವ್ ಪ್ರದೇಶದ ಶಾಲೆಯೊಂದಕ್ಕೆ ಚಿರತೆ ಆಗಮಿಸಿದ್ದು, ನಂತರ ಅದು ಶಾಲೆಯ ಶೌಚಾಲಯದಲ್ಲಿ ಸೇರಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ.
ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಗುರುರಾಜ್ ದೇಸಾಯಿ ಮಾತನಾಡಿದ್ದು, ಚಿರತೆಯೂ ಶೌಚಾಲಯದಲ್ಲಿ ಬಂಧಿಯಾಗಿತ್ತು. ಶಾಲೆಯ ಸಮೀಪ ಕಾಡಿದ್ದು ಅಲ್ಲಿಂದ ರಾತ್ರಿ ಶಾಲಾ ಆವರಣ ಪ್ರವೇಶಿಸಿದ ಚಿರತೆ ನಂತರ ಶೌಚಾಲಯದಲ್ಲಿ ಬಂಧಿಯಾಗಿದೆ ಎಂದರು. ಥಾಣೆ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ (ಎನ್ಜಿಒ) ವನ್ಯಜೀವಿ ಕಲ್ಯಾಣ ಸಂಘ (ಡಬ್ಲ್ಯುಡಬ್ಲ್ಯುಎ) ತನ್ನ ಫೇಸ್ಬುಕ್ ಪುಟದಲ್ಲಿ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದೆ, ಇದರಲ್ಲಿ ಶಾಲೆಯ ಶೌಚಾಲಯದಿಂದ ಅರಣ್ಯ ಇಲಾಖೆಯ ವಾಹನಕ್ಕೆ ಚಿರತೆ ಸ್ಥಳಾಂತರಗೊಳ್ಳುವುದನ್ನು ವಿಡಿಯೋ ತೋರಿಸುತ್ತಿದೆ.
‘ಬುಧವಾರದ ಬೆಳ್ಳಂಬೆಳಗ್ಗೆ, ಮುಂಬೈ ಅರಣ್ಯ ಇಲಾಖೆ, SGNP ರಕ್ಷಣಾ ತಂಡ ಮತ್ತು ವನ್ಯಜೀವಿ ಕಲ್ಯಾಣ ಸಂಘದ ತಂಡವು ಗೋರೆಗಾಂವ್ ಪೂರ್ವದ ಬಿಂಬಿಸಾರ್ ನಗರದ BMC ಶಾಲೆಯಲ್ಲಿ ವಯಸ್ಕ ಗಂಡು ಚಿರತೆಯನ್ನು ಯಶಸ್ವಿಯಾಗಿ ರಕ್ಷಿಸಿದೆ. ಚಿರತೆ ಗೇಟ್ ಮೇಲಿಂದ ಜಿಗಿಯುತ್ತಿರುವುದನ್ನು ಕಂಡ ಶಾಲೆಯ ಕಾವಲುಗಾರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಸ್ಥಳವು ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯಿಂದ 100 ರಿಂದ 200 ಮೀ ದೂರದಲ್ಲಿದೆ ಎಂದು WWA ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದೆ.
ಚಿರತೆ ಮರ ಹತ್ತುವುದರಲ್ಲಿ ನಿಪುಣತನಕ್ಕೆ ಹೆಸರಾದ ಪರಭಕ್ಷಕ ಪ್ರಾಣಿ. ಹಾಗೆಯೇ ಭಾರಿ ಎತ್ತರದ ಮರವೊಂದಕ್ಕೆ ಏರಿ ಕುಳಿತ ಚಿರತೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೃಹತ್ ಮಾವಿನ ಮರದ ತುದಿ ಏರಿ ಕುಳಿತ ಚಿರತೆಯನ್ನು ಕಂಡು ಜನರು ಭಯಭೀತರಾದರಲ್ಲದೇ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಚಿರತೆ ನೋಡಲು ಆಗಮಿಸಿದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕ ಕೂಡಲೇ ರಕ್ಷಣಾ ತಂಡ ಚಿರತೆಯನ್ನು ರಕ್ಷಿಸಲು ಸ್ಥಳಕ್ಕಾಗಮಿಸಿತ್ತು. ಬಳಿಕ ಸುಮಾರು 8 ಗಂಟೆಗಳ ಪ್ರಯತ್ನದ ಬಳಿಕ ಚಿರತೆಯನ್ನು ಕೆಳಗೆ ಇಳಿಸಲಾಯಿತು. . ಪಶ್ಚಿಮ ಬಂಗಾಳದ ಅಲಿಪುರದಾರ್ನಲ್ಲಿ ಈ ಘಟನೆ ನಡೆದಿತ್ತು.
ಈ 14 ಸೆಕೆಂಡುಗಳ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ಜೀವನದಲ್ಲಿ ಈ ಮಟ್ಟದ ಪ್ರೇರಣೆ ಬೇಕು ಎಂದು ಬರೆದುಕೊಂಡಿದ್ದಾರೆ. 51 ಸಾವಿರಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.