ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರರಣದಲ್ಲಿ ಜಾಮೀನು ಕೋರಿ ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಸಲ್ಲಿಸಿದ ಅರ್ಜಿಯನ್ನು ಚೆನ್ನೈ ನ್ಯಾಯಾಲಯ ತಿರಸ್ಕರಿಸಿದೆ.
ತನ್ನ ಆಪ್ತರು ಶಿಫಾರಸು ಮಾಡಿದ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಲು ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಸೇರಿ ಪಿತೂರಿ ನಡೆಸಿದ ಆರೋಪದಲ್ಲಿ ಬಾಲಾಜಿ ಅವರನ್ನು ಜೂನ್ 14ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಈ ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ಬಾಲಾಜಿ ಅವರು ಉದ್ಯೋಗ ನೀಡುವುದಾಗಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚ ಸ್ವೀಕರಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
2017ರಲ್ಲಿ ಎಐಎಡಿಎಂಕೆ ವಿಭಜನೆಯಾದ ಬಳಿಕ ಬಾಲಾಜಿ ಅವರು ಎದುರಾಳಿ ಪಕ್ಷವಾದ ಡಿಎಂಕೆಗೆ ಸೇರಿದ್ದರು. ಬಾಲಾಜಿ ವಿರುದ್ಧದ ಆರೋಪ ಭ್ರಷ್ಟಾಚಾರದ ಪ್ರಕರಣದಲ್ಲಿ ಖಂಡಿತವಾಗಿ ಅವರ ಪಾತ್ರವಿದೆ ಎಂಬುದನ್ನು ತೋರಿಸಿದೆ ಎಂಬುದನ್ನು ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಲಿ ಅವರು ಗಮನಿಸಿದರು.