ಮೇಡ್ ಇನ್ ಇಂಡಿಯಾ ರಾಷ್ಟ್ರೀಯ ಅಭಿಯಾನವಾಗಬೇಕು : ಪ್ರಧಾನಿ

ಹೊಸದಿಲ್ಲಿ : ನಾವು ಹಿಂದೆ ವಿದೇಶಗಳ ಉತ್ಪನ್ನಗಳ ಬಗೆಗೆ ಆಕರ್ಷಿತರಾಗುತ್ತಿದ್ದೆವು. ಆದರೆ, ಈಗ ದೇಶೀಯವಾಗಿ ಸಾಕಷ್ಟು ಉತ್ತಮ ತಯಾರಿಕೆ ನಡೆಯುತ್ತಿದೆ. ಎಲ್ಲರೂ ದೇಶೀಯ ವಸ್ತುಗಳನ್ನು ಖರೀದಿಸಿ, ಅದರಿಂದ ಸಣ್ಣ ಸಣ್ಣ ವ್ಯಾಪಾರಿಗಳು, ಉದ್ಯಮಿಗಳಿಗೆ ಸಹಾಯವಾಗುತ್ತದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಈಗ ಎಲ್ಲ ನಾಗರಿಕರು ಮೇಡ್ ಇನ್ ಇಂಡಿಯಾದ ಸಾಮರ್ಥ್ಯವನ್ನು ಕಾಣುತ್ತಿದ್ದಾರೆ. ಸ್ವಚ್ಛ ಭಾರತದ ರೀತಿಯಲ್ಲಿ ಮೇಡ್ ಇನ್ ಇಂಡಿಯಾ ಸಹ ರಾಷ್ಟ್ರೀಯ ಅಭಿಯಾನವಾಗಬೇಕು ಎಂಬ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದರು.

ಭಾರತವು ಗುರುವಾರ ೧೦೦ ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳ ದಾಖಲೆಯ ಹಂತವನ್ನು ದಾಟಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

ಕಳೆದ ದೀಪಾವಳಿಯಲ್ಲಿ ಆತಂಕವಿತ್ತು, ಈ ದೀಪಾವಳಿ ವೇಳೆಗೆ ನಮ್ಮೊಂದಿಗೆ 100 ಕೋಟಿ ಕೋವಿಡ್-19 ಲಸಿಕೆ ಡೋಸ್‌ಗಳ ವಿಶ್ವಾಸವಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ 100 ಕೋಟಿ ಲಸಿಕೆ ಎಂಬುದು ಕೇವಲ ಲೆಕ್ಕಾಚಾರವಲ್ಲ, ಅದು ಹೊಸ ಭಾರತದ ಹೆಗ್ಗುರುತು. ನಾವು ಅತ್ಯಂತ ಕಠಿಣ ಗುರಿಯನ್ನು ತಲುಪಿದ್ದೇವೆ, ಅದು ಅಸಾಮಾನ್ಯವಾದುದು ಮೋದಿ ಬಣ್ಣಿಸಿದರು.
ಕಳೆದ ವರ್ಷ ಭಾರತೀಯರು ತಟ್ಟೆಗಳನ್ನು ಬಡಿದು ದೀಪಗಳನ್ನು ಹಚ್ಚಿದರ ಬಗ್ಗೆ ಹಲವು ಮಂದಿ ವ್ಯಂಗ್ಯವಾಡಿದರು. ಆದರೆ, ಅದು ಭಾರತದ ಒಗ್ಗಟ್ಟನ್ನು ಸಾರುವ ಸಂದರ್ಭವಾಗಿತ್ತು ಎಂದು ಪ್ರಧಾನಮಂತ್ರಿ ಸಮರ್ಥಿಸಿಕೊಂಡರು.

× Chat with us