ನವದೆಹಲಿ : ಕೆನಡಾದಲ್ಲಿ ನಿಗೂಢವಾಗಿ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿರುವ ಕೆನಡಾ ಸರ್ಕಾರ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾಗೊಳಿಸಿತ್ತು. ಕೆನಡಾದ ಈ ನಿರ್ಧಾರಕ್ಕೆ ಭಾರತವೂ ಈಗ ಎದುರೇಟು ನೀಡಿದ್ದು, ಭಾರತದಲ್ಲಿರುವ ಕೆನಡಾ ರಾಯಭಾರಿಗೆ ಐದು ದಿನದೊಳಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಿದೆ. ಈ ಬೆಳವಣಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ.
ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಅಲ್ಲಿನ ಪಾರ್ಲಿಮೆಂಟ್ನಲ್ಲಿ ನೀಡಿರುವ ಈ ಹೇಳಿಕೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ಅಲ್ಲಿನ ಸಂಸತ್ನಲ್ಲಿ ನೀಡಿರುವ ಹೇಳಿಕೆಯನ್ನು ನಾವು ಗಮನಿಸಿದ್ದು, ಈ ಹೇಳಿಕೆಯನ್ನು ತಿರಸ್ಕರಿಸುತ್ತಿದ್ದೇವೆ. ಕೆನಡಾದಲ್ಲಿ ನಡೆದ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರ ಪಾಲ್ಗೊಂಡಿದೆ ಎಂಬ ಆರೋಪಗಳು ಅಸಂಬದ್ಧ ಮತ್ತು ರಾಜಕೀಯ ಪ್ರೇರಿತವಾಗಿವೆ. ಇದೇ ರೀತಿಯ ಆರೋಪಗಳನ್ನು ಕೆನಡಾದ ಪ್ರಧಾನಿ ನಮ್ಮ ಪ್ರಧಾನ ಮಂತ್ರಿಯವರ ಮೇಲೆ ಮಾಡಿದ್ದು, ಅದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ. ನಾವು ಕಾನೂನಿನ ಮೇಲೆ ನಂಬಿಕೆ ಇಟ್ಟಿರುವ ಬಲವಾದ ಬದ್ಧತೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಜಕೀಯವನ್ನು ಹೊಂದಿದ್ದೇವೆ.
ಇಂತಹ ಆಧಾರರಹಿತ ಆರೋಪಗಳು ಕೆನಡಾದಲ್ಲಿ ಆಶ್ರಯ ಪಡೆದಿರುವ ಮತ್ತು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುತ್ತಿರುವ ಖಲಿಸ್ತಾನಿ ಭಯೋತ್ಪಾದಕರ ಮತ್ತು ಉಗ್ರಗಾಮಿಗಳ ಚಟುವಟಿಕೆಗಳನ್ನು ಮತ್ತಷ್ಟು ಚಿಗುರಲು ಪ್ರೇರಿತಗೊಳ್ಳಲು ಸಹಾಯ ಮಾಡುತ್ತವೆ. ಖಲಿಸ್ತಾನಿಗಳ ವಿಚಾರದಲ್ಲಿ ಕೆನಡಾ ಸರ್ಕಾರದ ಧೀರ್ಘಕಾಲದ ನಿಷ್ಕ್ರಿಯತೆ ಕಳವಳಕ್ಕೆ ಕಾರಣವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ನಡೆದ ಜಿ-20 ಶೃಂಗ ಸಭೆಗೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋಗೆ ಪ್ರಧಾನಿ ನರೇಂದ್ರ ಮೋದಿ ಖಲಿಸ್ತಾನ್ ಉಗ್ರರನ್ನು ಮಟ್ಟ ಹಾಕುವಂತೆ ಕೇಳಿದ್ದರು. ಖಲಿಸ್ತಾನಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ತಮ್ಮ ಮತಬ್ಯಾಂಕ್ಗಾಗಿ ಖಲಿಸ್ತಾನ ಪರ ಹೇಳಿಕೆ ನೀಡುತ್ತಾ, ಭಾರತವನ್ನು ದೂಷಿಸುವ ಜಸ್ಟಿನ್ ಟ್ರುಡೋ, ಭಾರತದ ಪ್ರಧಾನಿ ಎಚ್ಚರಿಕೆ ಬಳಿಕವೂ ಮೃಧು ಧೋರಣೆ ತಳೆದಿದ್ದರು. ಅವರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಗದು ಎಂದು ಹೇಳುತ್ತಾ ಖಲಿಸ್ತಾನಿಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದರು.
ಇದಾದ ಬಳಿಕ ಇತ್ತ ಸಭೆ ಮುಗಿಸಿ ಕೆನಡಾ ತೆರಳಲು ಮುಂದಾದ ಜಸ್ಟಿನ್ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತ ಏರ್ ಇಂಡಿಯಾ ವಿಮಾನ ಸೇವೆ ಒದಗಿಸಲು ಮುಂದಾಗಿತ್ತು. ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡುವಂತೆ ಭಾರತ ಸೂಚಿಸಿತ್ತು. ಆದರೆ ದರ್ಪದಿಂದಲೇ ನಿರಾಕರಿಸಿದ ಜಸ್ಟಿನ್ ಟ್ರುಡೋ, ನಮ್ಮ ಕೆನಡಾದ ತಾಂತ್ರಿಕ ತಂಡ ಕೆಲವೇ ಸಮಯದಲ್ಲಿ ದುರಸ್ಥಿ ಮಾಡಲಿದ್ದಾರೆ ಎಂದಿದ್ದರು. ಆದರೆ ಇದಕ್ಕೆ ಬರೋಬ್ಬರಿ 36 ಗಂಟೆ ತೆಗೆದುಕೊಂಡಿತ್ತು. ಇದರಿಂದ ಟ್ರುಡೋ ಮತ್ತಷ್ಟು ಮುಜುಗರಕ್ಕೆ ಒಳಗಾಗಿದ್ದರು.
ಈಗ ಜಸ್ಟೀನ್ ಟ್ರುಡೋ ಅವರ ಸರ್ಕಾರ ಈಗ ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಲ್ಲಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾ ಮಾಡಿದೆ. ಭಾರತದ ಮೋಸ್ಟ್ ವಾಂಟೆಂಡ್ ಲಿಸ್ಟ್ನಲ್ಲಿದ್ದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಳೆದ ಜೂನ್ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಜ್ಜರ್ನ ಹತ್ಯೆಯಾಗಿದ್ದು, ಈ ಹತ್ಯೆಯಲ್ಲಿ ಭಾರತದ ಪ್ರಮುಖ ಪಾತ್ರವಿದೆ ಎಂದು ಕೆನಡಾ ಆರೋಪಿಸಿದೆ. ಇದಕ್ಕೆ ಪ್ರತೀಕಾರವಾಗಿ ಒಟ್ಟವಾದಲ್ಲಿರುವ ಭಾರತದ ಗುಪ್ತಚರ ಇಲಾಖೆ ಮುಖ್ಯಸ್ಥನ್ನು ತೆಗೆದು ಹಾಕಿದೆ. ಜಿ-20 ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈ ಮಧ್ಯೆ ಕೆನಡಾದ ಈ ನಿರ್ಧಾರ ಈಗ ಈ ಸಂಬಂಧವನ್ನು ಮತ್ತಷ್ಟು ಕೆಡಿಸಿದೆ. ಜಿ-20 ಶೃಂಗಸಭೆಯ ನಂತರ ಕೆನಡಾ ಹಾಗೂ ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಈ ಮಧ್ಯೆ ಕೆನಡಾದ ಈ ನಿರ್ಧಾರ ಈಗ ಈ ಸಂಬಂಧವನ್ನು ಮತ್ತಷ್ಟು ಕೆಡಿಸಿದೆ.
ಕಳೆದ ಜೂನ್ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದಿತ್ತು. ಈ ಹತ್ಯೆಗೂ ಭಾರತೀಯ ಏಜೆಂಟರಿಗೆ ಸಂಬಂಧವಿದೆ ಎಂದು ತಮ್ಮ ಸರ್ಕಾರವು ವಿಶ್ವಾಸಾರ್ಹ ಮೂಲಗಳಿಂದ ಆರೋಪಗಳನ್ನು ಹೊಂದಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೆನಡಾ ಸಂಸತ್ತಿನ ವಿರೋಧ ಪಕ್ಷದ ತುರ್ತು ಅಧಿವೇಶನದಲ್ಲಿ ಹೇಳಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಭಾರತ ತನ್ನ ನಿಲುವು ಸ್ಪಷ್ಟಪಡಿಸುವಂತೆ ಅವರು ಪ್ರಬಲವಾಗಿ ಆಗ್ರಹಿಸಿದ್ದರು.
ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಟ್ರುಡೊ ಸರ್ಕಾರವು ಈ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ. ಇಂದು ನಾವು ಕೆನಡಾದಲ್ಲಿರುವ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕಿತ್ತು ಹಾಕಿದ್ದೇವೆ ಎಂದು ಹೇಳಿದ ಮೆಲಾನಿ ಅಧಿಕಾರಿಯ ಹೆಸರು ಹೇಳಿಲ್ಲ. ಸೇವೆಯಿಂದ ತೆಗೆದು ಹಾಕಲ್ಪಟ್ಟ ಭಾರತೀಯ ಅಧಿಕಾರಿ ಕೆನಡಾದಲ್ಲಿ ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನ ಮುಖ್ಯಸ್ಥರಾಗಿದ್ದಾರೆ ಎಂದು ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.
ಇತ್ತ ಜೂನ್ನಲ್ಲಿ ಹತ್ಯೆಯಾದ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಭಾರತವೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪ್ರಮುಖ ಸಿಖ್ ಸಮುದಾಯದ ನೆಲೆಯಾಗಿರುವ ವ್ಯಾಂಕೋವರ್ನ ಉಪನಗರವಾದ ಸರ್ರೆಯಲ್ಲಿ ಜೂನ್ 18 ರಂದು ಈತನ ಹತ್ಯೆ ನಡೆದಿತ್ತು. ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಿದ ಆರೋಪ ಈತನ ಮೇಲಿತ್ತು.
ಭಾರತ ಮತ್ತು ಕೆನಡಾ ನಡುವೆ ಈ ಹತ್ಯೆ ಉದ್ವಿಗ್ನತೆಗೆ ಕಾರಣವಾಗಿದೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರರನ್ನು ಕೆನಡಾ ಸರ್ಕಾರ ಬೆಂಬಲಿಸುತ್ತಿರುವ ಬಗ್ಗೆ ಭಾರತೀಯರು ಅಸಮಾಧಾನಗೊಂಡಿದ್ದಾರೆ. ಖಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಭಾರತದ ಆರೋಪವಾಗಿದೆ.