ಕೇರಳ : ಮಳೆ, ಪ್ರವಾಹ, ಭೂಕುಸಿತ : ಸತ್ತವರ ಸಂಖ್ಯೆ 29ಕ್ಕೇರಿಕೆ

ತಿರುವನಂತಪುರಂ: ದೇವರನಾಡು ಕೇರಳ ಪ್ರಕೃತಿ ವಿಕೋಪದಿಂದ ತತ್ತರಿಸಿದ್ದು, ಭಾರಿ ಮಳೆ, ಪ್ರಹಾತ ಮತ್ತು ಭೂಕುಸಿತದಿಂದ ಸತ್ತವರ ಸಂಖ್ಯೆ 29ಕ್ಕೇರಿದೆ. ನಾಪತ್ತೆಯಾಗಿರುವ ಹಲವರಿಗಾಗಿ ಶೋಧ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಭಾನುವಾರ ಸಂಜೆ ವೇಳೆಗೆ ವರುಣನ ಆರ್ಭಟ ಕಡಿಮೆಯಾಗಿದ್ದರೂ, ಹಲವೆಡೆ ಭೂಕುಸಿತಗಳು ಮರುಕಳಿಸುತ್ತಿವೆ. ಪರ್ವತಮಯ ಪ್ರದೇಶಗಳಲ್ಲಿ ಬೆಟ್ಟಗುಡ್ಡಗಳ ಭಾಗಗಳು ಕುಸಿದಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಪಟ್ಟಣಂತಿಟ್ಟ, ಕೋಟಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರಿ ಮಳೆ ಸುರಿಯುತ್ತಿರುವ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಾಲಕ್ಕಾಡು, ಮಲಪ್ಪುರಂ, ಕೋಯಿಕೋಡ್ ಮತ್ತು ವಯನಾಡು ಜಿಲ್ಲೆಗಳಲ್ಲೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭೂಕುಸಿತದ ಅಪಾಯಕ್ಕೆ ಸಿಲುಕಿರುವವರ ರಕ್ಷಣೆ ಮತ್ತು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೇರಳದ 11 ಜಿಲ್ಲೆಗಳಲ್ಲಿ ಅಕ್ಟೋಬರ್ 21ರವರೆಗೂ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

× Chat with us