ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ರಾಷ್ಟ್ರೀಯ ಪಕ್ಷದ ಘೋಷಣೆ ಮಾಡಿದ್ದು, ತಮ್ಮ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಎಂದು ಹೆಸರಿಟ್ಟಿದ್ದಾರೆ. ತಮ್ಮ ಟಿಆರ್ಎಸ್ ಪಕ್ಷವನ್ನೇ ಬಿಆರ್ಎಸ್ ಎಂದು ಮರುನಾಮಕರಣ ಮಾಡಿದ್ದಾರೆ. ತೆಲಂಗಾಣ ಭವನದಲ್ಲಿ ಕೆಸಿಆರ್ ತಮ್ಮ ಹೊಸ ಪಕ್ಷ ಬಿಆರ್ಎಸ್ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ 280ಕ್ಕೂ ಹೆಚ್ಚು ಟಿಆರ್ಎಸ್ ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್ಎಸ್ ಅನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್)ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಈ ವೇಳೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ 2024ರ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಪಕ್ಷವನ್ನು ಘೋಷಿಸಿದ್ದಾರೆ. ತಮ್ಮ ಪಕ್ಷದ ಹೊಸ ಆವೃತ್ತಿಯಾದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಅನ್ನು ಇಂದು ಮಧ್ಯಾಹ್ನ ಘೋಷಣೆ ಮಾಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಈಗ ಬಿಆರ್ಎಸ್ ಆಗಿದೆ ಎಂದು ಕೆಸಿಆರ್ ಘೋಷಿಸಿದ್ದಾರೆ.
ವಿಜಯದಶಮಿಯ ದಿನವಾದ ಇಂದು ಶುಭ ಮುಹೂರ್ತದಲ್ಲಿ ತಮ್ಮ ಹೊಸ ಪಕ್ಷಕ್ಕೆ ಚಾಲನೆ ಮಾಡಿದ್ದಾರೆ. 2024 ರಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಉದ್ದೇಶಿಸಿರುವುದಾಗಿ ಕೆಸಿಆರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಮಿಷನ್ನಲ್ಲಿ ತನ್ನೊಂದಿಗೆ ಸೇರಲು ಹಲವಾರು ವಿರೋಧ ಪಕ್ಷಗಳನ್ನು ಆಹ್ವಾನಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರನ್ನು ಬೆಂಬಲಿಸಲು ಹಿರಿಯ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ತಮ್ಮ ಪಕ್ಷದ 20 ಶಾಸಕರೊಂದಿಗೆ ನಿನ್ನೆ (ಮಂಗಳವಾರ) ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳಿದ್ದಾರೆ. ಇಂದು ಕೆಸಿಆರ್ ಅವರ ಹೊಸ ರಾಷ್ಟ್ರೀಯ ಪಕ್ಷ ಘೋಷಣೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಶಾಸಕರು ಪಾಲ್ಗೊಳ್ಳುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ನ ದ್ವಿಪಕ್ಷೀಯ ನಾಯಕ ಹೆಚ್ಡಿ ಕುಮಾರಸ್ವಾಮಿ ಹಾಗೂ ಶಾಸಕರು ಮಂಗಳವಾರ ವಿಶೇಷ ವಿಮಾನದ ಮೂಲಕ ಹೈದರಾಬಾದ್ಗೆ ತೆರಳಿದ್ದಾರೆ. ಇಂದು ಸಂಜೆ ಹೆಚ್ಡಿ ಕುಮಾರಸ್ವಾಮಿ ತಮ್ಮ ಶಾಸಕರೊಂದಿಗೆ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಜೊತೆ ಜೆಡಿಎಸ್ ಶಾಸಕರಾದ ಎಚ್ ಡಿ ರೇವಣ್ಣ, ಸಾ.ರಾ ಮಹೇಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮುಂತಾದವರು ಹೈದರಾಬಾದ್ಗೆ ತೆರಳಿದ್ದಾರೆ. ಟಿಆರ್ಎಸ್ ಅಧ್ಯಕ್ಷ ಕೆಸಿಆರ್ ಕಳೆದ ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಮತ್ತು ಅವರ ಪುತ್ರ ಹೆಚ್ಡಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ತಮ್ಮ ಹೊಸ ಪಕ್ಷದ ಬಗ್ಗೆ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿ ಅವರು ಕೂಡ ಇತ್ತೀಚೆಗೆ ಹೈದರಾಬಾದ್ಗೆ ಭೇಟಿ ನೀಡಿ ಕೆಸಿಆರ್ ಜೊತೆ ಸಂವಾದ ನಡೆಸಿದ್ದರು.