ಅಹಮದಾಬಾದ್ : ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವುದು ಬಗೆಹರಿಯದ ಯಕ್ಷಪ್ರಶ್ನೆ. ಆದರೆ ಈ ಕೋಳಿಗಳ ಕುರಿತಾದ ಬಿಡಿಸಲಾಗದ ಒಗಟಿಗೆ ಇನ್ನೊಂದು ಹೊಸ ಸೇರ್ಪಡೆಯಾಗಿದೆ. ಅದು ಕೋಳಿ ಒಂದು ಪ್ರಾಣಿಯೇ ಎನ್ನುವುದು!
ಪ್ರಾಣಿವಧಾ ಸ್ಥಳಗಳ ಬದಲು ಚಿಕನ್ ಶಾಪ್ಗಳಲ್ಲಿ ಪೌಲ್ಟ್ರಿ ಪಕ್ಷಿಗಳನ್ನು ವಧಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗುಜರಾತ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಗಿದೆ. ಈ ಕುರಿತಾದ ವಿಚಾರಣೆಯಲ್ಲಿ, ಕೋಳಿಯನ್ನು ಪ್ರಾಣಿ ಎಂದು ಪರಿಗಣಿಸಬೇಕೇ ಜಿಜ್ಞಾಸೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಾಗಿ ಹೈಕೋರ್ಟ್ ತಮ್ಮ ಅಹವಾಲುಗಳನ್ನು ಆಲಿಸಲಿದೆ ಮತ್ತು ತಮ್ಮ ಅಂಗಡಿಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಿದೆ ಎಂಬ ಆಶಯದೊಂದಿಗೆ ಕುಕ್ಕಟೋತ್ಪನ್ನ ಮಾರಾಟಗಾರರು ಮತ್ತು ಚಿಕನ್ ಅಂಗಡಿ ಮಾಲೀಕರು ಕಾತರದಿಂದ ಕಾಯುತ್ತಿದ್ದಾರೆ. ನಿಯಮಗಳ ಉಲ್ಲಂಘನೆ ಹಾಗೂ ನೈರ್ಮಲ್ಯ ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದ ಕಾರಣಕ್ಕೆ ಮಾಂಸ ಮತ್ತು ಪೌಲ್ಟ್ರಿ ಅಂಗಡಿಗಳನ್ನು ಮುಚ್ಚುವಂತೆ ಹೈಕೋರ್ಟ್ ಆದೇಶ ನೀಡಿತ್ತು.
ಮಾಂಸದ ಅಂಗಡಿಗಳಿಗೆ ಬೀಗ : ಪ್ರಾಣಿಗಳನ್ನು ಕಸಾಯಿಖಾನೆಗಳಲ್ಲಿ ಕೊಲ್ಲಬೇಕೇ ವಿನಾ ಅಂಗಡಿಗಳಲ್ಲಿ ಅಲ್ಲ ಎಂದು ಪ್ರತಿಪಾದಿಸಿರುವ ಸೂರತ್ ನಗರ ಪಾಲಿಕೆ ಸೇರಿದಂತೆ ಅನೇಕ ನಗರ ಸಂಸ್ಥೆಗಳು ಹಲವು ಅಂಗಡಿಗಳನ್ನು ಮುಚ್ಚಿದ್ದವು. ಕಸಾಯಿಖಾನೆಗಳ ಸಮರ್ಪಕ ಕಾರ್ಯ ನಿರ್ವಹಣೆ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನಗಳು ಹಾಗೂ ವಿವಿಧ ಕಾನೂನುಗಳ ಜಾರಿಗಾಗಿ ಕೋರಿ ಹೈಕೋರ್ಟ್ಗೆ ಎರಡು ಪಿಐಎಲ್ಗಳು ದಾಖಲಾಗಿದ್ದವು. ಅದರ ಬಳಿಕ ನಗರ ಸಂಸ್ಥೆಗಳು ಕ್ರಮ ಕೈಗೊಂಡಿದ್ದವು.ಅರ್ಜಿದಾರ ಎನ್ಜಿಒಗಳಾದ ಪ್ರಾಣಿ ದಯಾ ಸಂಸ್ಥೆ ಮತ್ತು ಅಹಿಂಸ ಮಹಾ ಸಂಘ, ಅಂಗಡಿಗಳನ್ನು ಕೋಳಿಗಳನ್ನು ಕತ್ತರಿಸುವುದರ ವಿರುದ್ಧದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದವು. ಜತೆಗೆ ಈ ಬಗ್ಗೆ ಪ್ರತಿಭಟನೆ ಕೂಡ ನಡೆಸಿದ್ದವು.
ಹುಂಜ ಪ್ರಾಣಿಯಾಗುತ್ತದೆಯೇ? : ಕೋಳಿಗಳನ್ನು ‘ಪ್ರಾಣಿಗಳು’ ಎಂದು ಪರಿಗಣಿಸಬೇಕು ಮತ್ತು ಮಾಂಸದ ಅಂಗಡಿಗೆ ಅವುಗಳನ್ನು ತರುವ ಮುನ್ನ ಕಸಾಯಿಖಾನೆಗೆ ಕೊಂಡೊಯ್ಯಬೇಕು ಎಂದು ಸಂಘಟನೆಗಳು ವಾದಿಸಿದ್ದವು.
“ಹಕ್ಕಿಗಳನ್ನು ಕಸಾಯಿಖಾನೆಗಳಿಗೆ ಸಾಗಿಸುವ ಅಗತ್ಯವಿಲ್ಲ… ಹುಂಜವನ್ನು ಪ್ರಾಣಿ ಎಂದು ಪರಿಗಣಿಸಲು ಸಾಧ್ಯವೇ? ಇನ್ನು ಚಿಕನ್ ವಿಚಾರದಲ್ಲಿ, ಯಾವುದು ಒಳ್ಳೆಯ ಚಿಕನ್ ಮತ್ತು ಯಾವುದು ಕೆಟ್ಟ ಚಿಕನ್ ಎಂದು ನೀವು ಹೇಗೆ ವರ್ಗೀಕರಿಸುತ್ತೀರಿ?” ಎಂದು ಹೈಕೋರ್ಟ್ ಜನವರಿಯಲ್ಲಿ ಪ್ರಶ್ನಿಸಿತ್ತು.
ಪ್ರಾಣಿಗಳ ಮೇಲಿನ ಕ್ರೌರ್ಯ (ಕಸಾಯಿಖಾನೆ) ತಡೆ ಕಾಯ್ದೆಯ ಮೂರನೇ ನಿಯಮವನ್ನು ಉಲ್ಲೇಖಿಸಿದ ಅರ್ಜಿದಾರರ ಪರ ವಕೀಲ ನಿಸರ್ಗ್ ಮೆಹ್ತಾ, ಪರವಾನಗಿ ಇರುವ ಕಸಾಯಿಖಾನೆಯ ಹೊರತಾಗಿ ಬೇರೆ ಕಡೆ ‘ಪ್ರಾಣಿ’ಗಳನ್ನು ವಧಿಸಬಾರದು ಎಂದು ಪ್ರತಿಪಾದಿಸಿದ್ದರು.ಹುಂಜವನ್ನು ಪ್ರಾಣಿ ಎಂದು ಪರಿಗಣಿಸಬಹುದೇ ಎಂದು ಹೈಕೋರ್ಟ್ ಕೇಳಿತು. ಅದಕ್ಕೆ ಕಾಯ್ದೆಯ ಸೆಕ್ಷನ್ 2 (a) ರಲ್ಲಿ “ಮನುಷ್ಯರನ್ನು ಹೊರತುಪಡಿಸಿ ಜೀವ ಇರುವ ಯಾವುದೇ ಸೃಷ್ಟಿ”ಯನ್ನು ಪ್ರಾಣಿ ಎಂದು ವ್ಯಾಖ್ಯಾನಿಸಿರುವುದನ್ನು ವಕೀಲರು ಮುಂದಿಟ್ಟರು. ಇದೇ ವೇಳೆ ಹೈಕೋರ್ಟ್, ಮಾಂಸದ ಅಂಗಡಿ ಆವರಣದಲ್ಲಿ ಯಾವುದೇ ಸಜೀವ ಪ್ರಾಣಿಯನ್ನು ಇರಿಸಲು ಅವಕಾಶವಿಲ್ಲ ಎಂಬ ಆಹಾರ ಸುರಕ್ಷತಾ ಮತ್ತು ಮಾನದಂಡ ಕಾಯ್ದೆ, 2006ರ ನಿಯಮಗಳನ್ನು ಕೂಡ ಉಲ್ಲೇಖಿಸಿತ್ತು.ಅಂಗಡಿಗಳಿಗೆ ತಾಜಾ ಮೀನುಗಳನ್ನು ಕೂಡ ತರಲಾಗುತ್ತದೆ. ಹೀಗಾಗಿ ಅವುಗಳನ್ನೂ ಕಸಾಯಿಖಾನೆಗೆ ತೆಗೆದುಕೊಂಡು ಹೋಗಬೇಕು ಎಂದು ಆಗಿನ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದರು.