ವಾಹಿನಿಗಳ ಕಾರ್ಯಸೂಚಿ ಬಗ್ಗೆ ಸುಪ್ರೀಂ ತೀವ್ರ ಅಸಮಾಧಾನ
ಹೊಸದಿಲ್ಲಿ: ಟಿವಿ ವಾಹಿನಿಗಳು ನಿರ್ದಿಷ್ಟ ಕಾರ್ಯಸೂಚಿ (ಅಜೆಂಡಾ) ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಸುದ್ದಿಯನ್ನು ರೋಚಕಗೊಳಿಸುವ ಸ್ಪರ್ಧೆಗೆ ಇಳಿದಿವೆ. ತಮ್ಮ ಹೂಡಿಕೆದಾರರ ಮೂಗಿನ ನೇರಕ್ಕೆ ನಡೆಯುತ್ತಿದ್ದು, ಭಾರತದಲ್ಲಿ ವಿಭಜನೆ ಉಂಟು ಮಾಡುತ್ತಿವೆ ಎಂದು ಸವೋಚ್ಚ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದ್ವೇಷ ಭಾಷೆ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ನಡೆಸಿ, ಇಂಥ ದ್ವೇಷ ಭಾಷಣ ಕಾರ್ಯಕ್ರಮಗಳ ಪ್ರಸಾರವನ್ನು ಹೇಗೆ ನಿಯಂತ್ರಿಸುವಿರಿ ಎಂದು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟ್ಯಾಂಡರ್ಸ್ ಅಥಾರಿಟಿ) ಮತ್ತು ಕೇಂದ್ರ ಸರ್ಕಾರವನ್ನು ಪೀಠವು ಪ್ರಶ್ನಿಸಿತು.
‘ವಾಸ್ತವದಲ್ಲಿ ಚಾನೆಲ್ಗಳು ಪ್ರತಿಸ್ಪರ್ಧೆಗೆ ಇಳಿದಿವೆ. ಅವುಗಳು ಎಲ್ಲವನ್ನೂ ರೋಚಕಗೊಳಿಸುತ್ತಿವೆ. ಇದನ್ನು ಹೇಗೆ ನಿಯಂತ್ರಿಸುವಿರಿ? ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ ಅದು ವೀಕ್ಷಕರಿಗೆ ಸಂಬಂಧಿಸಿರುವುದು. ಜನರಿಗೆ ವಾಹಿನಿಗಳ ಕಾರ್ಯಸೂಚಿ ಅರಿವಾಗಬಲ್ಲದೇ ಎನ್ನುವುದು ಪ್ರಶ್ನೆ. ಈ ಕಾರ್ಯಸೂಚಿಗಳು ಮತ್ತಾರನ್ನೋ ಪೊರೆಯುತ್ತಿರುತ್ತದೆ. ಅಲ್ಲದೇ, ಚಾನೆಲ್ಗಳಲ್ಲಿ ಹಣದ ಹೂಡಿಕೆಯಾಗಿರುತ್ತದೆ. ಯಾರು ಹಣ ಹಾಕುತ್ತಾರೋ ಅವರು ಅಣತಿ ನೀಡುತ್ತಾರೆ,‘ ಎಂದು ನ್ಯಾ.ಜೋಸೆಫ್ ವಿವರಿಸಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು, ‘ದ್ವೇಷ ಭಾಷಣ ನಿಯಂತ್ರಿಸಲು ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯೆ ಸಂಹಿತೆಗೆ (ಸಿಆರ್ಪಿಸಿ) ಸಮಗ್ರ ತಿದ್ದುಪಡಿಗಳನ್ನು ತರುವ ಯೋಜನೆಯನ್ನು ಹೊಂದಿದೆ’ ಎಂದು ತಿಳಿಸಿದರು. ಸಿಆರ್ಪಿಸಿ ತಿದ್ದುಪಡಿ ತರುವ ಚಿಂತನೆಯಲ್ಲಿ ನಾವಿದ್ದೇವೆ. ಇದು ಒಕ್ಕೂಟ ಸರ್ಕಾರದ ನಿಲುವಾಗಿದೆ ಎಂದು ಹೇಳಿದರು
ಚಾನೆಲ್ಗಳು ಸಮಾಜದಲ್ಲಿ ಬಿರುಕು ಉಂಟು ಮಾಡುತ್ತಿವೆ. ನೀವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುವಾಗ ಅದಕ್ಕೆ ನೀವು ಅರ್ಹರು ಎಂಬಂತೆ ನಡೆದುಕೊಳ್ಳಬೇಕು. ಇಲ್ಲವಾದರೆ ಯಾವ ರೀತಿಯ ಘನತೆ ತಾನೆ ನಮಗೆ ಉಳಿಯುತ್ತದೆ ಎಂದರು.