ಭಾರತದ ಹರ್ನಾಜ್ ಕೌರ್‌ಗೆ ಭುವನ ಸುಂದರಿ ಕಿರೀಟ

ಇಲಾಟ್(ಇಸ್ರೇಲ್) : ಎರಡು ದಶಕದ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದೆ. ಚಂಡೀಗಢ ಮೂಲದ 21ರ ಹರೆಯದ ರೂಪದರ್ಶಿ ಮತ್ತು ನಟಿ ಹರ್ನಾಜ್ ಕೌರ್ ಸಂಧು, 70ನೇ ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ನೇ ಇಸವಿಯಲ್ಲಿ ಲಾರಾ ದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೆನ್ ಪ್ರಶಸ್ತಿಯನ್ನು ಗೆದ್ದಿದ್ದರು. 70ನೇ ಮಿಸ್ ಯುನಿವರ್ಸ್ ಸ್ಪರ್ಧೆಯು ಇಸ್ರೇಲ್ ಇಲಾಟ್‌ನಲ್ಲಿ ಆಯೋಜಿಸಲಾಗಿತ್ತು.

ಭುವನ ಸುಂದರಿ ಹರ್ನಾಜ್ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಪರಾಗ್ವೆಯ 22ವರ್ಷದ ನಾಡಿಯಾ ಫೆರೆರಾ ಎರಡನೇ ಸ್ಥಾನ ಹಾಗೂ ದಕ್ಷಿಣ ಆಫ್ರಿಕಾದ 24 ವರ್ಷದ ಲಲೇಲಾ ಸ್ವಾನ್ ಮೂರನೇ ಸ್ಥಾನ ಪಡೆದರು.

ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರು, ಪೋಷಕರು ಹಾಗೂ ಮಿಸ್ ಇಂಡಿಯಾ ಸಂಸ್ಥೆಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಗೆಲುವಿಗಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಪ್ರತಿಯೊಬ್ಬರಿಗೂ ಅಪಾರ ಪ್ರೀತಿಯನ್ನು ಸಲ್ಲಿಸುತ್ತಿದ್ದೇನೆ. 21 ವರ್ಷಗಳ ಬಳಿಕ ಭಾರತಕ್ಕೆ ಕಿರೀಟದ ವೈಭವ ಮರಳಿ ತರಲು ಸಾಧ್ಯವಾಗಿರುವುದು ಹೆಮ್ಮೆಯ ಕ್ಷಣ ಎಂದು ಹರ್ನಾಜ್ ಕೌರ್ ಸಂಧು ಪ್ರತಿಕ್ರಿಯಿಸಿದ್ದಾರೆ.

× Chat with us