ಕ್ಷಮೆ ಯಾಚಿಸಿದರೆ 12 ಸಂಸದರ ಸಸ್ಪೆಂಡ್ ವಾಪಸ್ : ಪ್ರಹ್ಲಾದ್ ಜೋಷಿ

ಹೊಸದಿಲ್ಲಿ: ಕ್ಷಮೆಯಾಚಿಸಿದರೆ 12 ಮಂದಿ ರಾಜ್ಯಸಭಾ ಸಂಸದರ ಅಮಾನತನ್ನು ವಾಪಸ್ ಪಡೆಯಲು ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಸಂಸದರ ಅಮಾನತು ನಿರ್ಧಾರ ವಾಪಸ್ ಪಡೆಯುವಂತೆ ಪ್ರತಿಪಕ್ಷಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಸಂಸದರನ್ನು ಏಕೆ ಅಮಾನತು ಮಾಡಲಾಗಿದೆ ಎಂಬುದನ್ನು ನಾವು ಈಗಾಗಲೇ ತಿಳಿಸಿದ್ದೇವೆ. ಸದನದಲ್ಲಿ ಏನು ನಡೆದಿತ್ತು ಎಂಬುದಕ್ಕೆ ದೇಶವೇ ಸಾಕ್ಷಿಯಾಗಿದೆ. ಅದು ದಾಖಲೆಗಳಲ್ಲಿಯೂ ಇದೆ. ಇವತ್ತಾದರೂ ಸರಿ, ಅವರು ಕ್ಷಮೆ ಯಾಚಿಸಿದರೆ ಅಮಾನತು ನಿರ್ಧಾರ ವಾಪಸ್ ಪಡೆಯಲು ಸಿದ್ಧರಿದ್ದೇವೆ ಎಂದು ಜೋಶಿ ಹೇಳಿದ್ದಾರೆ.

ಈ ಮಧ್ಯೆ, ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಮಂಗಳವಾರವೂ ಸಂಸತ್‌ನಲ್ಲಿ ಧರಣಿ ನಡೆಸಿವೆ. ಈ ವಿಚಾರವಾಗಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಮಧ್ಯಾಹ್ನ ಪ್ರತಿಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ.
ಅಮಾನತುಗೊಂಡ ೧೨ ಮಂದಿ ರಾಜ್ಯಸಭಾ ಸಂಸದರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನಾದ ತಲಾ ಇಬ್ಬರು, ಸಿಪಿಐ ಮತ್ತು ಸಿಪಿಎಂನ ತಲಾ ಒಬ್ಬರು ಇದ್ದಾರೆ.

× Chat with us