ಪಣಜಿ: ಗೋವಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕರ್ನಾಟಕಕ್ಕೆ ಮತದಾನಕ್ಕೆ ತೆರಳಲು ಮೇ 10 ರಂದು ವೇತನ ಸಹಿತ ರಜೆ ಘೋಷಿಸಿ ಗೋವಾ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿದೆ.
ಗೋವಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದು, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕರ್ನಾಟಕದಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಗೋವಾ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಗೋವಾ ಸರ್ಕಾರ ಕೈಗಾರಿಕಾ ಕಾರ್ಮಿಕರು, ಸರ್ಕಾರಿ ಇಲಾಖೆಗಳಲ್ಲಿ ದಿನನಿತ್ಯದ ಕೆಲಸಗಾರರು, ರಾಜ್ಯ ಸರ್ಕಾರದ ಕೈಗಾರಿಕಾ ಇಲಾಖೆಗಳು, ವೃತ್ತಿಪರರು ಮತ್ತು ಖಾಸಗಿ ಸಂಸ್ಥೆಗಳ ಕೈಗಾರಿಕಾ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಿದೆ.