ಹೊಸದಿಲ್ಲಿ: ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ ೧೭ಕ್ಕೆ ಚುನಾವಣೆ ನಿಗದಿಯಾಗಿದೆ ಎಂದು ಭಾನುವಾರ ವರದಿಯಾಗಿದೆ.
ಅಕ್ಟೋಬರ್ ೧೭ರಂದು ಚುನಾವಣೆ ನಡೆಯಲಿದ್ದು, ೧೯ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ‘ಎಎನ್ಐ’ ವರದಿ ಮಾಡಿದೆ.
ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯುಸಿ) ಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೊಂದಿಗೆ ಆರೋಗ್ಯ ತಪಾಸಣೆಗಾಗಿ ಲಂಡನ್ಗೆ ತೆರಳಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಲ್ಲಿಂದಲೇ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದಾರೆ.
ಒಮ್ಮತದ ಅಭ್ಯರ್ಥಿ ಆಯ್ಕೆ ವಿಫಲವಾದ ಕಾರಣ ಚುನಾವಣೆ ಮತ್ತೆ ಸುಮಾರು ಮೂರು ವಾರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು.
ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗಬೇಕು: ಖರ್ಗೆ
ರಾಹುಲ್ ಗಾಂಧಿಯವರು ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು. ಅಧ್ಯಕ್ಷರಾಗಬೇಕು ಎಂಬುದು ಎಲ್ಲ ಕಾರ್ಯಕರ್ತರಂತೆ ನನ್ನ ಅಭಿಪ್ರಾಯವೂ ಆಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಖರ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಬೇಕು. ಅವರು ಪಕ್ಷವನ್ನು ಒಗ್ಗೂಡಿಸುವುದರ ಜತೆಗೆ ಇನ್ನಷ್ಟು ಬಲಪಡಿಸಬಲ್ಲರು ಎಂದು ಖರ್ಗೆ ಹೇಳಿರುವುದಾಗಿ ವರದಿಯಾಗಿದೆ.
ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಲಾಗುವುದು. ಪಕ್ಷವನ್ನು ಮುನ್ನಡೆಸಲು ಬಯಸುವವರು ದೇಶದಾದ್ಯಂತ ಪರಿಚಿತರಾಗಿರಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಬಂಗಾಳದಿಂದ ಗುಜರಾತ್ವರೆಗೆ ಬೆಂಬಲ ಹೊಂದಿರಬೇಕು ಎಂದು ಖರ್ಗೆ ಹೇಳಿದ್ದಾರೆ.