ಕೋಟಾ: ಬಿಜೆಪಿ-ಆರ್ಎಸ್ಎಸ್ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂದು ಶುಕ್ರವಾರ ಆರೋಪಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿ-ಆರ್ಎಸ್ಎಸ್ ದಲಿತರನ್ನು ಅಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಗೆಹ್ಲೋಟ್ ಅವರು ಬರಾನ್ ಜಿಲ್ಲೆಯಲ್ಲಿ ಹಿಂದೂ ಸಮುದಾಯದ 2,111 ಹಾಗೂ ಮುಸ್ಲಿಂ ಸಮುದಾಯದ 111 ಜೋಡಿಗಳು ಸೇರಿದಂತೆ 2,222 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.
ನಂತರ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, ಬಿಜೆಪಿ ಹಾಗೂ ಆರ್ಎಸ್ಎಸ್ ನವರು ಭಿನ್ನಾಭಿಪ್ರಾಯ ಮತ್ತು ತಾರತಮ್ಯವನ್ನು ಸೃಷ್ಠಿಸುತ್ತಾರೆ ಹಾಗೂ ಹರಡುತ್ತಾರೆ. ದೇಶದ ಜನರಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಾರೆ ಎಂದು ಆರೋಪಿಸಿದರು.
ಅಸ್ಪೃಶ್ಯತೆ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಈಗಲೂ ಇದೆ. ಕೆಳ ವರ್ಗದವರ ವಿರುದ್ಧ ತಾರತಮ್ಯವಿದೆ. ಇದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದಲಿತರ ಕಲ್ಯಾಣಕ್ಕಾಗಿ ತಮ್ಮ ಅಲ್ಪಾವಧಿ ಹಾಗೂ ದೀರ್ಘಕಾಲಿನ ಯೋಜನೆಗಳನ್ನು ಬಹಿರಂಗಪಡಿಸಬೇಕು ಎಂದು ಗೆಹ್ಲೋಟ್ ಒತ್ತಾಯಿಸಿದರು.
ದಲಿತರನ್ನು ಯಾರು ನೋಡಿಕೊಳ್ಳುತ್ತೀರಾ? ನೀವು (ಆರ್ಎಸ್ಎಸ್-ಬಿಜೆಪಿ) ಅವರಿಗಾಗಿ ಏನು ಮಾಡುತ್ತಿದ್ದೀರಿ? ನೀವು ದಲಿತರನ್ನು ಅಪ್ಪಿಕೊಳ್ಳುತ್ತೀರಾ. ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಪ್ರಶ್ನಿಸಿದರು.