ನವದೆಹಲಿ: ಗದ್ದಲದ ಕಾರಣದಿಂದಾಗಿ ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಮೇಯರ್, ಉಪಮೇಯರ್ ಚುನಾವಣೆ ಹಾಗೂ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಮೂರನೇ ಬಾರಿಗೆ ಮುಂದೂಡಿಕೆ ಮಾಡಲಾಗಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೌನ್ಸಿಲರ್ಗಳ ನಡುವಿನ ಗದ್ದಲದಿಂದಾಗಿ ಸದನವನ್ನು ಮುಂದೂಡಲಾಗಿದೆ.
ಎಂಸಿಡಿಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ನಿಯಮಗಳನ್ನು ಮಾಡಲಾಗಿದೆ. ಇವು ಬಿಜೆಪಿಯ ಪರವಾಗಿವೆ ಎಂದು ಆರೋಪಿಸಿ ಎಎಪಿ ಸದಸ್ಯರು ಗದ್ದಲ ಮಾಡಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೌನ್ಸಿಲರ್ಗಳು ಕೂಡ ಗಲಾಟೆ ಮಾಡಿದ್ದರಿಂದ ಸದನ ಮುಂದೂಡಲಾಯಿತು.
ಇದರೊಂದಿಗೆ ಮೂರನೇ ಬಾರಿಗೆ ದೆಹಲಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಂದೂಡಿದಂತಾಗಿದೆ. ದೆಹಲಿ ಮೇಯರ್ ಸ್ಥಾನಕ್ಕೆ ಚುನಾವಣೆಯನ್ನು ಕಾಲಮಿತಿಯಲ್ಲಿ ನಡೆಸುವಂತೆ ಕೋರಿ ಎಎಪಿ ಪಕ್ಷ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.