ನವದೆಹಲಿ: ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದಾಗಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ನಡೆದ ಸಂಸತ್ತಿನ ಸಮಿತಿ ಸಭೆಯಲ್ಲಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಲಂಡನ್ನಿಂದ ಹಿಂದಿರುಗಿದ ನಂತರ ರಾಹುಲ್ ಗಾಂಧಿ ಅವರು ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದು, ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಅವರು ದೇಶದ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ರಾಹುಲ್ಗೆ ಬೆಂಬಲ ಸೂಚಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ, ಪರ –ವಿರೋಧದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆ ‘ಐಎಎನ್ಎಸ್’ ವರದಿ ಮಾಡಿದೆ.
ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿರುವುದಾಗಿ ಲಂಡನ್ನಲ್ಲಿ ಟೀಕಿಸಿದ್ದ ರಾಹುಲ್ ಕ್ಷಮೆ ಕೇಳಬೇಕೆಂದು ಬಿಜೆಪಿ ಮುಂದುವರಿಸಿದ ಪ್ರತಿಭಟನೆಗೆ ಪ್ರತಿಯಾಗಿ, ಅದಾನಿ ವಿಷಯ ಜೆಪಿಸಿ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಸಂಸತ್ತಿನ ಸುತ್ತ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ್ದರು. ಇದರಿಂದ ಸಂಸತ್ನ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಅವಕಾಶ ನೀಡಿದರೆ ಮಾತನಾಡುತ್ತೇನೆ: ರಾಹುಲ್
ಲಂಡನ್ನಲ್ಲಿ ತಾವು ನೀಡಿರುವ ಹೇಳಿಕೆ ವಿವಾದ ಹುಟ್ಟು ಹಾಕಿರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸದಿಂದ ವಾಪಾಸ್ ಆದ ಬಳಿಕ ಸಂಸತ್ತಿಗೆ ಆಗಮಿಸಿರುವ ಸಂಸದ ರಾಹುಲ್ ಗಾಂಧಿ, ಅವಕಾಶ ನೀಡಿದರೆ ಮಾತನಾಡುತ್ತೇನೆ ಎಂದಿದ್ದರು.
ನಾನು ಸಂಸತ್ತಿನಲ್ಲಿ ಮಾತನಾಡುವುದನ್ನು ಬಿಜೆಪಿ ಇಷ್ಟಪಡುವುದಿಲ್ಲ. ಸಂಸತ್ತಿನಲ್ಲಿ ಅವಕಾಶ ಸಿಗದಿದ್ದರೆ ಸಂಸತ್ ಹೊರಗಡೆ ಮಾತನಾಡುತ್ತೇನೆ ಎಂದು ಹೇಳಿದ್ದರು.
ರಾಹುಲ್ ದೇಶ ವಿರೋಧಿ ಟೂಲ್ಕಿಟ್ನ ಶಾಶ್ವತ ಭಾಗ: ನಡ್ಡಾ ಟೀಕೆ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಟೂಲ್ಕಿಟ್ನ ಶಾಶ್ವತ ಭಾಗವಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ.
‘ನಮ್ಮ ದೇಶದ ವ್ಯವಹಾರದಲ್ಲಿ ಅನ್ಯ ದೇಶಗಳು ಮಧ್ಯ ಪ್ರವೇಶಿಸಬೇಕೆಂದು ರಾಹುಲ್ ನೀಡಿದ ಹೇಳಿಕೆ ನಾಚಿಕೆಗೇಡು. ದೇಶವು ಪದೇ ಪದೇ ತಿರಸ್ಕರಿಸಿದ ಬಳಿಕ ರಾಹುಲ್ ಗಾಂಧಿ, ದೇಶ ವಿರೋಧಿ ಟೂಲ್ಕಿಟ್ನ ಶಾಶ್ವತ ಭಾಗವಾಗಿದ್ದಾರೆ’ ಎಂದು ಅವರು ಕುಟುಕಿದ್ದಾರೆ.