ಕಾಂಗ್ರೆಸ್‌ನಿಂದ ದೇಶದ ವೈವಿದ್ಯತೆಯ ರಕ್ಷಣೆ: ಸೋನಿಯಾ

ಹೊಸದಿಲ್ಲಿ: ಭಾರತದ ಶ್ರೀಮಂತ ಪರಂಪರೆಯನ್ನು ಅಳಿಸಿ ಹಾಕಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣೆಯಲ್ಲಿ ಸೋಲು ಗೆಲುವುಗಳು ಅಪ್ರಸ್ತುತ. ಆದರೆ ಭಾರತದ ವೈವಿದ್ಯತೆಯ ರಕ್ಷಣೆಯಲ್ಲಿ ಕಾಂಗ್ರೆಸ್‌ನ ಬದ್ಧತೆ ಪ್ರಶ್ನಾತೀತ ಎಂದಿದ್ದಾರೆ.

137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಭಜಕ ಸಿದ್ಧಾಂತಗಳು ದ್ವೇಷಿಯ ಮತ್ತು ಪೂರ್ವಾಗ್ರಹ ಪೀಡಿತ ಪರಿಸ್ಥಿತಿಯನ್ನು ನಿರ್ಮಿಸುತ್ತಿವೆ. ಜೊತೆಗೆ ಶಕ್ತಿಶಾಲಿ ಭಾರತ ಭದ್ರ ಬುನಾದಿಯನ್ನು ದುರ್ಬಲಗೊಳಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇತಿಹಾಸವನ್ನು ಸುಳ್ಳು ಮಾಡಲು ಅಸಹ್ಯಕರ ಪ್ರಯತ್ನಗಳು ನಡೆಯುತ್ತಿವೆ. ಗಂಗಾ-ಜಮುನಾ ಸಂಸ್ಕೃತಿಯನ್ನು ಅಳಿಸಿ ಹಾಕುವ ಹುನ್ನಾರಗಳು ನಡೆದಿವೆ. ಇದನ್ನೆಲ್ಲಾ ನೋಡಿಕೊಂಡು ಕಾಂಗ್ರೆಸ್ ಮೂಕ ಪ್ರೇಕ್ಷಕನಂತೆ ಉಳಿಯುವುದಿಲ್ಲ. ಭಾರತದ ಭವ್ಯ ಪರಂಪರೆಯನ್ನು ಅಳಿಸಿ ಹಾಕಲು ಕಾಂಗ್ರೆಸ್ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ನಿರ್ವಹಿಸದವರು ವಿಭಜಕ ಸಿದ್ಧಾಂತದ ಮೇಲೆ ದ್ವೇಷ ಹರಡುತ್ತಿದ್ದಾರೆ. ನಮ್ಮ ಸಮಾಜದ ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ.

ಅರ್ಹತೆಯಿಲ್ಲದಿದ್ದರೂ ತಮ್ಮ ಪಾತ್ರವನ್ನು ಮೇಳೈಸುವ ರಿತಿಯಲ್ಲಿ ಇತಿಹಾಸವನ್ನು ಮತ್ತೆ ಬರೆಯುತ್ತಿದ್ದಾರೆ. ಭಾವೋದ್ರೇಕಗಳನ್ನು ಪ್ರಚೋದಿಸುತ್ತಿದ್ದಾರೆ. ದ್ವೇಷವನ್ನು ಹರಡುತ್ತಿದ್ದಾರೆ. ನಮ್ಮ ಅತ್ಯುತ್ತಮ ಸಂಸದೀಯ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಹಾನಿಗೊಳಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಹಿಂದು ಧಾರ್ಮಿಕ ಮುಖಂಡರ ಒಂದು ಗುಂಪು ಮಹಾತ್ಮ ಗಾಂಧಿಯವರನ್ನು ನಿಂದಿಸುತ್ತಿದೆ. ಗಾಂಧಿಜೀ ಹಂತಕ ನಾಥೋರಾಮ್ ಗೋಡ್ಸೆಯನ್ನು ಸತ್ಯ ಮತ್ತು ಧರ್ಮದ ಸಂಕೇತವೆಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

× Chat with us