ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಗಾಂಧಿ ಪರಿವಾರಕ್ಕೆ ತೀವ್ರ ತಲೆನೋವು ತಂದಿದೆ. ಇಡಿ ಅಧಿಕಾರಿಗಳ ಸತತ ವಿಚಾರಣೆಯಿಂದ ರಾಹುಲ್ ಗಾಂಧಿ ಬಳಲಿ ಬೆಂಡಾಗಿದ್ದಾರೆ. ಇತ್ತ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಡಿ ನೋಟಿಸ್ ಪ್ರಕಾರ ನಾಳೆ ವಿಚಾರಣೆ ಹಾಜರಾಗಬೇಕಿದೆ. ಆದರೆ ಆರೋಗ್ಯ ಚೇತರಿಕೆಯಲ್ಲಿರುವ ಕಾರಣ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ರಾಹುಲ್ ಗಾಂಧಿ ವಿಚಾರಣೆ ಎದುರಿಸಿದ್ದಾರೆ. ಆದರೆ ಸೋನಿಯಾ ಗಾಂಧಿಗೆ ಕೊರೋನಾ ಕಾಣಿಸಿಕೊಂಡಿತ್ತು. ಕೊರೋನಾದಿಂದ ಚೇತರಿಸಿಕೊಂಡರೂ ಆರೋಗ್ಯ ಸಮಸ್ಯೆ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 21 ರಂದು ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ವಿಶ್ರಾಂತಿಯಲ್ಲಿರುವ ಸೋನಿಯಾ ಗಾಂಧಿ ಆರೋಗ್ಯ ಚೇತರಿಕೆ ಕಾಣುತ್ತಿದೆ. ಹೀಗಾಗಿ ವಿಚಾರಣೆಯನ್ನು ಕನಿಷ್ಠ ಎರಡು ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ. ಸೋನಿಯಾ ಗಾಂಧಿ ಮನವಿಯನ್ನು ಇಡಿ ಅಧಿಕಾರಿಗಳು ಪುರಸ್ಕರಿಸುವ ಸಾಧ್ಯತೆ ಹೆಚ್ಚಿದೆ.
ಸೋಮವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್ಡ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗುರುವಾರ ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದೆ. ಆದರೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವುದರಿಂದ ಇದೀಗ ಸೋನಿಯಾ ಗಾಂಧಿ ಮನವಿಯನ್ನು ಇಡಿ ಅಧಿಕಾರಿಗಳು ಪುಸ್ಕರಿಸುವ ಸಾಧ್ಯತೆ ಇದೆ.
ಕೋವಿಡೋತ್ತರ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಮೊದಲು ಜೂ.2ರಂದು ಹಾಜರಾಗಲು ಸೋನಿಯಾಗೆ ಸೂಚಿಸಲಾಗಿತ್ತು. ಅದರೆ ಕೋವಿಡ್ ಹಿನ್ನೆಲೆಯಲ್ಲಿ ಅವರು ಹೊಸ ದಿನಾಂಕ ಕೋರಿದ್ದರು. ಹೀಗಾಗಿ ಜೂ.23ರ ದಿನಾಂಕ ನೀಡಲಾಗಿತ್ತು.