ಬೆಂಗಳೂರು: ಕೆಎಸ್ಡಿಎಲ್ ಟೆಂಡರ್ ಲಂಚ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿತು.
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲಿಂ ಅಹ್ಮದ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿದ್ದರಾಮಯ್ಯ ಸೂಟ್ಕೇಸ್ ಹಿಡಿದುಕೊಂಡು ಮುಖ್ಯಮಂತ್ರಿ ಮನೆಯತ್ತ ಮೆರವಣಿಗೆ ನಡೆಸಿದರು. ಮಾಡಾಳ್ ವಿರುಪಾಕ್ಷಪ್ಪ ಅವರ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಹಣವನ್ನು ತುಂಬಿದ್ದ ಬ್ಯಾಗ್ಗಳ ಹಾಗೂ ನೋಟುಗಳ ಅಣುಕು ಪ್ರದರ್ಶನ ನಡೆಸಲಾಯಿತು. ಬಿಜೆಪಿಯದು ರೂಲ್ಕಾಲ್ ಮಾಡೇಲ್, ಜನ ವಿರೋಧಿ ಬಿಜೆಪಿ, ಶೇ.40ರಷ್ಟು ಕಮಿಷನ್ ಸರ್ಕಾರ ಎಂಬ ಹಲವು ರೀತಿಯ ಬರಹಗಳಿದ್ದ ಸೂಟ್ಕೇಸ್ ಮಾದರಿಯ ಪೋಸ್ಟರ್ಗಳನ್ನು ಕಾರ್ಯಕರ್ತರು ಪ್ರದರ್ಶನ ಮಾಡಿದರು. ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಪೋಸ್ಟ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯುದ್ಧಕ್ಕೂ ಬಿಜೆಪಿ ವಿರುದ್ದ ಘೋಷಣೆ ಕೂಗಲಾಯಿತು. ಚುನಾವಣೆ ಕಾಲದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿರುವ ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧದ ಎಲ್ಲಾ ಭ್ರಷ್ಟಾಚಾರದ ಆರೋಪಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ, ಆದರೆ ನಮ್ಮ ಸರ್ಕಾರದ ಅವಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಿದ್ದರು, ನಾನು ಜಾರ್ಜ್ ಅವರಿಗೆ ನೀವು ರಾಜೀನಾಮೆ ಕೊಡುವುದು ಬೇಡ ಎಂದು ಹೇಳಿದ್ದೆ, ಆದರೂ ಅವರು ನೈತಿಕತೆ ಆಧಾರದಲ್ಲಿ ರಾಜೀನಾಮೆ ನೀಡಿದ್ದರು. ದೇವೇಗೌಡರು ನಮ್ಮ ವಿರುದ್ಧ ಒಂದಂಕಿ ಲಾಟರಿ ಆರೋಪ ಮಾಡಿದಾಗ ಕೂಡಲೇ ಪತ್ರಿಕಾಗೋಷ್ಠಿ ಕರೆದು ಅದನ್ನು ಸಿಬಿಐ ಗೆ ವಹಿಸಿದ್ದೆ, ಪರೇಶ್ ಮೇಸ್ತಾ ಎಂಬ ಯುವಕ ಕಾಲುಜಾರಿ ಬಿದ್ದು ಸತ್ತಾಗ ಅದನ್ನು ಕೊಲೆ ಎಂದು ದೊಂಬಿ, ಗಲಾಟೆ ಎಬ್ಬಿಸಿದರು, ಅದನ್ನು ಕೂಡ ಸಿಬಿಐ ತನಿಖೆಗೆ ವಹಿಸಿದ್ದೆ, ಈ ಯಾವುದೇ ಪ್ರಕರಣದಲ್ಲಿ ನಾವು ಬಿಜೆಪಿಯವರಿಂದ ದಾಖಲೆ ಕೇಳಿಲ್ಲ, ನಮ್ಮ ಸರ್ಕಾರದ ಅವಯಲ್ಲಿ ಒಟ್ಟು 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಇಂದು ಆ ಎಲ್ಲಾ ಪ್ರಕರಣಗಳಲ್ಲಿ ಸಿಬಿಐ ಬಿ ರಿಪೋರ್ಟ್ ನೀಡಿದೆ. ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಈ ಬಸವರಾಜ ಬೊಮ್ಮಾಯಿಗೆ ಮಾನ ಮರ್ಯಾದೆ ಇದೆಯಾ? ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಒಂದನ್ನಾದರೂ ತನಿಖೆ ಮಾಡಿಸಿದ್ದಾರಾ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿಕೊಂಡು ಮಂತ್ರಿಗಳು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು ಇಂತಿಷ್ಟು ಲಂಚ ಕಲೆಕ್ಷನ್ ಮಾಡಿಕೊಡಬೇಕು ಎಂದು ನಿಗದಿ ಮಾಡಿದ್ದಾರೆ. ಅವರಿಗೆ ಈ ಬಾರಿ ಜಾತಿ, ಧರ್ಮಗಳ ಆಧಾರದಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ. ಮುಂದಿನ ಚುನಾವಣೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಕನಿಷ್ಠ 100 ಕೋಟಿ ಖರ್ಚು ಮಾಡಿದರೂ ಆಶ್ಚರ್ಯ ಇಲ್ಲ. ಬೊಮ್ಮಾಯಿಗೆ ಮಾನ ಮರ್ಯಾದೆ ಇದ್ದರೆ ಮಾಡಾಳ್ ವಿರೂಪಾಕ್ಷಪ್ಪನನ್ನು ಈ ಕೂಡಲೇ ಬಂಧಿಸಬೇಕು ಮತ್ತು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಇದಕ್ಕಿಂತ ದಾಖಲೆ ಬೇರೆ ಬೇಕಾ? 8 ಕೋಟಿಗೂ ಅದಿಕ ಮೊತ್ತದ ಹಣ, ಆಭರಣಗಳನ್ನು ಲೋಕಾಯುಕ್ತದವರು ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಿಂದ ಜಪ್ತಿ ಮಾಡಿದ್ದಾರೆ. ನನ್ನ ಪ್ರಕಾರ ಬೊಮ್ಮಾಯಿ ಈಗಾಗಲೇ ರಾಜೀನಾಮೆ ಕೊಟ್ಟುಬಿಡಬೇಕಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ಎಐಸಿಸಿಗೆ ಎಟಿಎಂ ಆಗಿತ್ತು ಎಂದು ಅಮಿತ್ ಶಾ ಅವರು ನೇರ ಆರೋಪ ಮಾಡಿದ್ದಾರೆ, ಇದಕ್ಕೇನು ಹೇಳ್ತೀರಿ ಶಾ? ಗಡಿಪಾರಾಗಿದ್ದ, ಜೈಲಿಗೆ ಹೋಗಿದ್ದ ಶಾ ಅವರಿಂದ ನಾವು ಪಾಠ ಕಲಿಯಬೇಕಾ ? ದೇಶದ ದುರಂತ ನೋಡಿ ಎಂದು ಲೇವಡಿ ಮಾಡಿದರು.
ಸಾಕಪ್ಪ ಸಾಕು 40% ಸರ್ಕಾರ ಎಂದು ಇಂದು ಜನ ಹೇಳುತ್ತಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಶೇ.40ರಷ್ಟು ಕಮಿಷನ್ ಹಗರಣದ ಬಗ್ಗೆ ಮಾತನಾಡಿ ಸರ್ ಎಂದು ಜನರೇ ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು, ರುಪ್ಸಾ ಅಧ್ಯಕ್ಷರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದ ಉದಾಹರಣೆ ಹಿಂದೆ ಇದೆಯಾ? ಮಠಗಳಿಗೆ ನೀಡುವ ಅನುದಾನಕ್ಕೂ ಲಂಚ ಕೊಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಇಷ್ಟೊಂದು ಲಜ್ಜೆಗೆಟ್ಟು ಲಂಚ ತಿನ್ನುವ ಸರ್ಕಾರವನ್ನು ನಾನು ನೋಡಿಯೇ ಇರಲಿಲ್ಲ ಎಂದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾವು, ಕೂಡಲೇ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡುವಂತೆ ಮನವಿ ಮಾಡಿದ್ದೆ, ಚುನಾವಣಾ ನೀತಿ ಸಂಹಿತೆ ಘೋಷಣೆಯಾದರೆ ಇವರು ಲಂಚ ಹೊಡೆಯುವುದಾದರೂ ನಿಲ್ಲುತ್ತೆ, ಗುತ್ತಿಗೆದಾರರ ಸುಲಿಗೆ ನಿಲ್ಲುತ್ತೆ. ನೂರಕ್ಕೆ ನೂರು ಮುಂದೆ ನಾವು ಅಕಾರಕ್ಕೆ ಬರುತ್ತೇವೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಕೊನೆಯ 6 ತಿಂಗಳಿಂದ ಟೆಂಡರ್ ನೀಡಿರುವ ಕಾಮಗಾರಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸುತ್ತೇವೆ. ಯಾವುದೇ ಗುತ್ತಿಗೆದಾರರು ಈಗ ಲಂಚ ನೀಡಿ ಗುತ್ತಿಗೆ ಕೆಲಸ ಹಿಡಿಯಬೇಡಿ, ಕಾರಣ ನಾವು ಬಂದ ಮೇಲೆ ಆ ಎಲ್ಲಾ ಕಾಮಗಾರಿಗಳನ್ನು ರದ್ದು ಮಾಡುತ್ತೇವೆ ಎಂದರು.
ತಮ್ಮ ರಾಜಕೀಯ ಜೀವನನದಲ್ಲಿ ಇಂತಹ ಭ್ರಷ್ಟಸರ್ಕಾರವನ್ನು ನೋಡಿಯೇ ಇರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರನ್ನೂ ಮೀರಿಸುವಷ್ಟು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿಯನ್ನೇ ಸ್ಥಾಪನೆ ಮಾಡಿಕೊಂಡಿದ್ದಾರೆ. ಪ್ರತಿಬಾರಿಯೂ ಬೊಮ್ಮಾಯಿ, ಹಿಂದೆಯೂ ಭ್ರಷ್ಟಚಾರ ನಡೆದಿದೆ ಎಂದು ಹೇಳುವ ಮೂಲಕ ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದ ಅವರು, ಇಷ್ಟು ದಿನ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಏನು ಮಾಡುತ್ತಿದ್ದರು, ಭ್ರಷ್ಟಚಾರ ನಡೆದಿದ್ದರೆ ಅದನ್ನು ತನಿಖೆ ನಡೆಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ರಣದೀಪ್ಸಿಂಗ್ ಸುರ್ಜೇವಾಲ, ಬಿಜೆಪಿಯನ್ನು ಭ್ರಷ್ಟ ಬೋಮ್ಮಾಯಿ ಸರ್ಕಾರ ಎಂದು ಹೆಸರು ಬದಲಾವಣೆ ಮಾಡುವುದು ಸೂಕ್ತವಾಗಿದೆ. ಜನರಿಗೆ ಶೇ.40ರಷ್ಟು ಕಮಿಷನ್ ದಂಧೆ ಅರ್ಥವಾಗಿದೆ. 20 ರೂಪಾಯಿ ಸೋಪಿನಲ್ಲೂ ಬಿಜೆಪಿ ಸರ್ಕಾರ ಹಗರಣ ಮಾಡಿದೆ. ಸಾನೂನಿನ ಸುಗಂಧದಲ್ಲೂ ಭ್ರಷ್ಟಚಾರ ದುರ್ಗಂಧ ಬೀರುವಂತೆ ಬಿಜೆಪಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಲಿಂಗಾರೆಡ್ಡಿ, ಪಿಎಸ್ಐ ಸೇರಿದಂತೆ ಬೇರೆ ಬೇರೆ ಹಗರಣಗಳು ಕೇಳಿ ಬಂದಾಗ ಸಾಕ್ಷ್ಯ ಕೊಡಿ ಎಂದು ಬಿಜೆಪಿಯವರು ಕೇಳುತ್ತಿದ್ದರು. ಈಗ ಲೋಕಾಯುಕ್ತರೆ ಬಿಜೆಪಿ ಶಾಸಕರ ಮನೆಯ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣವನ್ನು ಪತ್ತೆ ಹಚ್ಚಿದ್ದಾರೆ. ಇನ್ನೇನು ಸಾಕ್ಷ್ಯಬೇಕು. ಬಿಜೆಪಿ ಭ್ರಷ್ಟ ಜನರ ಪಕ್ಷ ಎಂದು ಸಾಬೀತಾಗಿದೆಯಲ್ಲ ಎಂದರು.
ಅಕಾರದ ಕೊನೆಯ ದಿನಗಳಲ್ಲಿ ಇರುವ ಈ ಸರ್ಕಾರದಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತಾ ಶಾ ರಾಜ್ಯ ಸರ್ಕಾರದ ಭ್ರಷ್ಟಚಾರವನ್ನು ನಿಯಂತ್ರಣ ಮಾಡುತ್ತಿಲ್ಲ. ಮತ್ತಷ್ಟು ಕುಮ್ಮಕ್ಕು ನೀಡುತ್ತಿದ್ದಾರೆ. ಏನಾದರೂ ಮಾಡಿಕೊಳ್ಳಿ ಮತ್ತೆ ಅಧಿಕಾರಕ್ಕೆ ಬನ್ನಿ ಎಂದು ಹೇಳಿದಂತಿದೆ. ಅದಕ್ಕಾಗಿ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಭ್ರಷ್ಟಚಾರ ನಡೆಯುತ್ತಲೇ ಇದೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಲೇ ಇದೆ ಎಂದರು.
ಕೃಷ್ಣಬೈರೇಗೌಡ ಮಾತನಾಡಿ, ಬಿಜೆಪಿ ಶಾಸಕರ ಮನೆಯಲ್ಲೇ ಎಂಟು ಕೋಟಿ ರೂಪಾಯಿಗೂ ಅಕ ಮೊತ್ತದ ಹಣ ದೊರೆತಿದೆ. ಕಮಿಷನ್ ದಂಧೆ ಶೇ.40ರಷ್ಟಕ್ಕೆ ಸೀಮಿತವಾಗಿಲ್ಲ, ಅದು ಶೇ.60ರಷ್ಟಕ್ಕೆ ಏರಿದೆ. ಬಿಜೆಪಿಯ ಎಲ್ಲಾ ಶಾಸಕರ ಮನೆಯನ್ನೂ ಶೋಸಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಬಿಜೆಪಿಯವರಿಗೆ ಹಣ ಲೂಟಿ ಮಾಡಿ, ಅದನ್ನು ಚೆಲ್ಲಿ (ಖರ್ಚು ಮಾಡಿ) ಮತ್ತೆ ಗೆದ್ದು ಬನ್ನಿ ಎಂದು ಹೇಳಿದ್ದಾರೆ. ಅದಕ್ಕಾಗಿ ಬಿಜೆಪಿಯವರು ಸಿಕ್ಕ ಸಿಕ್ಕ ಕಡೆಯಲೆಲ್ಲಾ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಬಳಿಕ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಮೆರವಣಿಗೆಯ ಮೂಲಕ ನಡೆದರು. ಈ ವೇಳೆ ಪೊಲೀಸರು ಆರಾಧ್ಯ ವೃತ್ತದಲ್ಲಿ ಕಾಂಗ್ರೆಸಿಗರನ್ನು ತಡೆದರು. ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು. ಮೆರವಣಿಗೆ ಮುಂದುವರೆಸಲು ಯತ್ನಿಸಿದಾಗ ಪಕ್ಷದ ನಾಯಕರು ಮತ್ತು ಪೊಲೀಸರು ನಡುವೆ ತಳ್ಳಾಟನೂಕಾಟ ನಡೆಯಿತು. ಕೆಲ ಕಾರ್ಯಕರ್ತರ ಬಟ್ಟೆಗಳು ಹರಿದವು, ಹರಿದ ಬಟ್ಟೆಗಳೊಂದಿಗೆ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಪೊಲೀಸರು ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿಭಟನೆ ಅಂತ್ಯಗೊಂಡಿತು.