ನವದೆಹಲಿ: ಅಮೆರಿಕದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಹಾರ್ವರ್ಡ್ ಲಾ ಸ್ಕೂಲ್ ತನ್ನ ಅತ್ಯುನ್ನತ ವೃತ್ತಿಪರ ಪುರಸ್ಕಾರವಾದ ಸೆಂಟರ್ ಆನ್ ದಿ ಲೀಗಲ್ ಪ್ರೊಫೆಷನ್ ಅವಾರ್ಡ್ ಫಾರ್ ಗ್ಲೋಬಲ್ ಲೀಡರ್ಶಿಪ್ಅನ್ನು (ಕಾನೂನು ವೃತ್ತಿಯಲ್ಲಿನ ಜಾಗತಿಕ ನಾಯಕತ್ವಕ್ಕಾಗಿ ನೀಡುವ ಪ್ರಶಸ್ತಿ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಡಿ ವೈ ಚಂದ್ರಚೂಡ್ ಅವರಿಗೆ ಪ್ರದಾನ ಮಾಡಲಿದೆ.
ಸಿಜೆಐ ಚಂದ್ರಚೂಡ್ ಅವರು ಇದೇ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಕಾನೂನು ಪದವಿ ಹಾಗೂ ಕಾನೂನು ಕ್ಷೇತ್ರದ ಸಂಶೋಧನೆಗಾಗಿ ಡಾಕ್ಟರೇಟ್ (ಎಸ್ಜೆಡಿ- ಡಾಕ್ಟರೇಟ್ ಆಫ್ ಜುಡಿಷಿಯಲ್ ಸೈನ್ಸ್) ಪಡೆದಿದ್ದಾರೆ ಎನ್ನುವುದು ಗಮನಾರ್ಹ.
ಇದೇ 11ರಂದು ಸಂಜೆ 7ರಿಂದ 8ರವರೆಗೆ ಆನ್ಲೈನ್ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈಗಾಗಲೇ ಈ ಪ್ರಶಸ್ತಿಗೆ ಭಾಜನರಾದವರ ವಿವರ ಇಂತಿದೆ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಡಳಿತದಲ್ಲಿ ವಿಶ್ವಸಂಸ್ಥೆಯಲ್ಲಿ ಅಮೆರಿಕವನ್ನು ಖಾಯಂ ಆಗಿ ಪ್ರತಿನಿಧಿಸುತ್ತಿದ್ದ ಮತ್ತು ಪ್ರಸಕ್ತ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾಗಿರುವ ಸಮಂತಾ ಪವರ್; ಮೈಕ್ರೋಸಾಫ್ಟ್ ಅಧ್ಯಕ್ಷರಾದ ಬ್ರಾಡ್ ಸ್ಮಿತ್; ಬಿಲ್ ಕ್ಲಿಂಟನ್ ಮತ್ತು ಒಬಾಮಾ ಅವರ ಆಪ್ತ ಸಲಹೆಗಾರರಾಗಿದ್ದ ಉದ್ಯಮಿ ದಿ ವೆರ್ನಾನ್ ಜೋರ್ಡಾನ್; ಮೆರೆಕ್ ಸಂಸ್ಥೆಯ ಕಾರ್ಯ ನಿರ್ವಾಹಕ ಅಧ್ಯಕ್ಷ ಕೆನೆತ್ ಫ್ರೇಜರ್.
“ನ್ಯಾ. ಚಂದ್ರಚೂಡ್ ಅವರ ನಾಯಕತ್ವ ಭಾರತಕ್ಕೆ ಮತ್ತು ನಿಜವಾಗಿಯೂ ಜಗತ್ತಿಗೆ ಎಷ್ಟು ಅಗತ್ಯ ಎಂದು ನನಗೆ ತಿಳಿದಿದೆ, ವಿಶೇಷವಾಗಿ ಕೋವಿಡ್ ಲಗ್ಗೆ ಇಡುವ ಬಹಳ ಮೊದಲೇ 2017ರಲ್ಲಿ ನಡೆದಿದ್ದ ನಮ್ಮ ಸಮಾವೇಶದಲ್ಲಿ ವೃತ್ತಿಗೆ ಅತ್ಯಗತ್ಯವಾದ ಮಾನಸಿಕ ಆರೋಗ್ಯ ಮತ್ತು ವಕೀಲರ ಯೋಗಕ್ಷೇಮದಂತಹ ವಿಷಯಗಳ ಬಗ್ಗೆ ಅವರು ನಿರರ್ಗಳವಾಗಿ ಮಾತನಾಡಿದ್ದರು” ಎಂದು ಸಿಎಲ್ಪಿ ಅಧ್ಯಾಪಕ ನಿರ್ದೇಶಕ ಡೇವಿಡ್ ವಿಲ್ಕಿನ್ಸ್ ಹೇಳಿದ್ದಾರೆ.