ಕಲಬುರಗಿ– : ಕರ್ನಾಟಕದಲ್ಲಿ ಅನೇಕ ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಬಿಜೆಪಿಯನ್ನು ಮತ್ತೆ ಗೆಲ್ಲಿಸಿ. ಡಬಲ್ ಎಂಜಿನ್ ಸರಕಾರವನ್ನು ಮುಂದುವರಿಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮನವಿ ಮಾಡಿದರು.
ಕಲ್ಬುರ್ಗಿಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ವಿರಾಟ್ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ದೇಶವು ಸರ್ವತೋಮುಖ ಅಭಿವೃದ್ಧಿ ಸಾಧಿಸಿದೆ. ಧರ್ಮಕ್ಕೆ ಹಾನಿ ಆದಾಗ ಮತ್ತು ಅಧರ್ಮ ಹೆಚ್ಚಿದಾಗ ಮತ್ತೆ ಬರುವುದಾಗಿ ಭಗವಾನ್ ಕೃಷ್ಣ ಹೇಳಿದ್ದನ್ನು ನೆನಪಿಸಿದ ಅವರು, ಅದೇ ಮಾದರಿಯಲ್ಲಿ ದೇಶದಲ್ಲಿ ಮೋದಿ ಅವರ ನೇತೃತ್ವದಲ್ಲಿ ಸಮೃದ್ಧ ಭಾರತ ನಿರ್ಮಾಣವಾಗುತ್ತಿದೆ ಎಂದು ನುಡಿದರು.
ಮೋದಿಜಿ ಅವರು ನಮ್ಮ ಹೆಮ್ಮೆಯ ನಾಯಕರಾಗಿದ್ದಾರೆ. ಒಂದೆಡೆ ಮೋದಿಜಿ ಇದ್ದರೆ ಮತ್ತೊಂದೆಡೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಹಾಗಿದ್ದರೆ ಭಾರತವನ್ನು ವಿಭಜಿಸಿದ್ದು ನೆಹರೂ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ರಾಹುಲ್ ರನ್ನು ಪ್ರಶ್ನಿಸಿದರು.
ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಎಂಬುದಕ್ಕೆ ಇಲ್ಲಿನ ಜನಸಮುದ್ರವೇ ಸಾಕ್ಷಿ. ಚಿಂಚೋಳಿಗೆ ಬಂದು ಹಿಂತಿರುಗಿದ ಬಳಿಕ ನನಗೆ ನಾಲ್ಕನೇ ಬಾರಿ ಸಿಎಂ ಹುದ್ದೆ ಸಿಕ್ಕಿದೆ ಎಂದು ವಿವರಿಸಿದರು.
ಬಿಜೆಪಿಯಲ್ಲಿ ಸಾಮಾನ್ಯ ಪರಿವಾರದಿಂದ ಬಂದವರು ನಮ್ಮ ಪ್ರಧಾನಿಯಾಗುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ಕೇವಲ ಪರಿವಾರದ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಲಿಪಶುವಾಗಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಒಳಜಗಳವಿದೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ- ಖರ್ಗೆ ನಡುವೆ ಕಾಂಗ್ರೆಸ್ ಪಕ್ಷ ಹಂಚಿಹೋಗಿದೆ ಎಂದು ಅವರು ವಿಶ್ಲೇಷಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ,
ಮುಂದಿನ ವರ್ಷ ನಡೆಯುವÀ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ವಿಧಾನಸೌಧದಲ್ಲಿ ಅಧಿಕಾರ ಪಡೆಯಲಿದೆ ಎಂದು ವ್ಯಕ್ತಪಡಿಸಿದರು.
ಬದಲಾವಣೆಯ ಕಾಲ ಬಂದಿದೆ. ಹಿಂದುಳಿದ ವರ್ಗಕ್ಕೆ ಮೋಸ ಮಾಡಿ, ಕತ್ತಲಲ್ಲಿಟ್ಟು ಅಧಿಕಾರ ನಡೆಸಿ ಕರ್ನಾಟಕವನ್ನು ಹಿಂದುಳಿದ ಪ್ರದೇಶವಾಗಿ ಮಾಡಿದ ಸಿದ್ರಾಮಣ್ಣನಿಗೆ ಬದಲಾವಣೆ ಕಾಲ ಬಂದಿದೆ ಎಂದು ತಿಳಿಸಿದರು.
ಕಾಗಿನೆಲೆ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣನ ಅಭಿವೃದ್ಧಿ, ಮಿಲಿಟರಿ ಶಾಲೆ ನಾವು ಕೊಟ್ಟಿದ್ದೇವೆ. ಹಿಂದುಳಿದ ವರ್ಗ, ಕುರುಬ ಸಮಾಜವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವು ಮೋಸ ಮಾಡಿತ್ತು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ನ್ಯಾಯ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
ಮೀಸಲಾತಿ ವಿಚಾರದಲ್ಲಿ ನಮ್ಮದು ಕ್ರಾಂತಿಕಾರಿ ನಿರ್ಣಯ. ಎಸ್ಸಿ, ಎಸ್ಟಿ ಯವರನ್ನು ಮುಖ್ಯವಾಹಿನಿಗೆ ತರಲು ಸಾಮಾಜಿಕ ನ್ಯಾಯದ ನಿರ್ಧಾರ ಮಾಡಿದ್ದೇವೆ. ಹಿಂದುಳಿದ ವರ್ಗದ ಕುರುಬ ಜನಾಂಗಕ್ಕೆ ಅಮೃತ ಯೋಜನೆ ಜಾರಿಗೊಳಿಸಿದ್ದೇವೆ. 354 ಕೋಟಿ ಅನುದಾನ ನೀಡಿದ್ದೇವೆ. ಸಿದ್ರಾಮಣ್ಣ, ಕಾಂಗ್ರೆಸ್ನವರು ಯಾಕೆ ಇದನ್ನು ಮಾಡಿರಲಿಲ್ಲ ಎಂದು ಪ್ರಶ್ನಿಸಿದರು. ಒಬಿಸಿ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ ಎಂದು ಕೇಳಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಡಬಲ್ ಎಂಜಿನ್ ಸರಕಾರದ ಕನಸು ನನಸಾಗಲಿದೆ. ಸಿಎಂ ಕುರ್ಚಿಗೆ ಟವೆಲ್ ಹಾಕಿದವರು ಕನಸನ್ನಷ್ಟೇ ಕಾಣಲು ಸಾಧ್ಯ. ರಾಜ್ಯದಲ್ಲಿ ಮತ್ತೆ ಅಧಿಕಾರದ ಕಾಂಗ್ರೆಸ್ನ ಕನಸು ಕನಸಾಗಿಯೇ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರಿಗೆ ಪರಪ್ಪನ ಅಗ್ರಹಾರದ ಪಟ್ಟ ಗ್ಯಾರಂಟಿ ಎಂದು ನುಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಚುನಾವಣೆಯಲ್ಲಿ ಸಿದ್ರಾಮಣ್ಣ ಟಿಕೆಟ್ ಕೊಡುವುದಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ನಾವು ಭವಿಷ್ಯದಲ್ಲಿ ನೋಡಲಿದ್ದೇವೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಕೇಂದ್ರ- ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.