ಬೀದರ್: ‘ಆರ್ಎಸ್ಎಸ್ ಹಾಗೂ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿವೆ. ಬೀದರ್ ಬಸವಣ್ಣನ ಕರ್ಮಭೂಮಿಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮಾರ್ಗ ತೋರಿಸಿದವರೇ ಬಸವಣ್ಣನವರು. ಎಲ್ಲರಿಗೂ ಸಮಬಾಳು, ಸಮಪಾಲು ಎನ್ನುವ ಬಸವಣ್ಣನ ವಿಚಾರದ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಭಾಲ್ಕಿಯಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜನ ಕ್ರಾಂತಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾತನಾಡಿದರು. ದೇಶದಲ್ಲಿ ಹಿಂಸೆ ಹಾಗೂ ದ್ವೇಷ ಹರಡುತ್ತಿದೆ. ಬಡವರು ಹಾಗೂ ಶೋಷಿತರಿಂದ ಹಣ ಕಿತ್ತುಕೊಂಡು ಎರಡು, ಮೂರು ಶ್ರೀಮಂತರಿಗೆ ಕೊಡುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
‘ಬಿಜೆಪಿಯಂತೆ ಕಾಂಗ್ರೆಸ್ನವರು ಸುಳ್ಳು ಭರವಸೆ ಕೊಡದಂತೆ ಸೂಚಿಸಿದ್ದೇನೆ. ನರೇಂದ್ರ ಮೋದಿ ಅವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವ ಭರವಸೆ ನೀಡಿದ್ದರು. ಆದರೆ, ಏನೂ ಮಾಡಲಿಲ್ಲ. ಅಂತಹ ಭರವಸೆಗಳನ್ನು ಕಾಂಗ್ರೆಸ್ನವರು ಕೊಡಬಾರದು ಎಂದು ಮುಖಂಡರಿಗೆ ಮನವಿ ಮಾಡಿದ್ದೇನೆ’ ಎಂದರು.
‘ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯನ್ನು ಕಾಂಗ್ರೆಸ್ ಆಡಳಿತಕ್ಕೆ ಬಂದ ಮೊದಲ ದಿನವೇ ನಾಲ್ಕು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಈ ಆಶ್ವಾಸನೆ ಕೋಟ್ಯಧಿಪತಿಗಳಿಲ್ಲ. ಬಡ ಕುಟುಂಬದವರಿಗೆ ನೀಡಲಾಗಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಶೇಕಡ 40ರಷ್ಟು ಭ್ರಷ್ಟಾಚಾರ ಮಾಡಿರುವುದನ್ನು ಕರ್ನಾಟಕದ ಜನತೆಯೇ ಹೇಳಿದೆ. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದರು. ಆದರೆ, ನರೇಂದ್ರ ಮೋದಿ ಅವರಿಗೆ ಅದಕ್ಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಪಿಎಸ್ಐ, ಜ್ಯೂನಿಯರ್ ಎಂಜಿನಿಯರ್, ಉಪನ್ಯಾಸಕರ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದು ರಾಜ್ಯದ ಜನತೆಗೆ ಗೊತ್ತಿದೆ’ ಎಂದು ತಿಳಿಸಿದರು.
‘ಶೇಕಡ 40ರಷ್ಟು ಲಂಚ ಪಡೆದಿರುವ ಹಣದಿಂದ ಬಿಜೆಪಿ ಅಧಿಕಾರಕ್ಕೆ ಬರುವ ಸರ್ಕಾರ ಉರುಳಿಸಲು ಬಳಸಲಿದೆ. ಆದ್ದರಿಂದ ಅಂಥಹದಕ್ಕೆ ಅವಕಾಶ ಕೊಡದೇ ರಾಜ್ಯದ ಜನತೆ ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಈ ವೇಳೆ ಮನವಿ ಮಾಡಿದರು.
‘ಸಂಸತ್ತಿನಲ್ಲಿ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿರುವೆ. ಅದಾನಿ ಅವರ ₹20 ಸಾವಿರ ಕೋಟಿ ಎಲ್ಲಿಂದ ಬಂತು ಎಂದು ಕೇಳಿದೆ. ಆದರೆ, ಉತ್ತರ ದೊರೆಯಲಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಲೋಕಸಭೆಯಿಂದಲೇ ಹೊರಗೆ ಹಾಕಲಾಗಿದೆ’ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ರಾಜ್ಯ ಮಹಿಳಾ ಘಟಕದ ಆಧ್ಯಕ್ಷ ಪುಷ್ಪಾ ಅಮರನಾಥ್, ಭಾಲ್ಕಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಈಶ್ವರ ಖಂಡ್ರೆ, ಬೀದರ್ ಶಾಸಕ ರಹೀಂ ಖಾನ್, ಮಾಜಿ ಶಾಸಕ ಅಶೋಕ ಖೇಣಿ, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಕಲಬುರಗಿ ಮಾಜಿ ಮೇಯರ್ ಕುಮಾರ ಮೋದಿ ಭಾಗವಹಿಸಿದ್ದರು.