ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ. ತಡರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ರಾಮನಗರ ಬಳಿ ಹಳ್ಳದಂತಾಗಿದೆ.
ರಾಮನಗರ ಸಮೀಪದ ಸಂಘಬಸವನ ದೊಡ್ಡಿ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದು ವಾಹನಸವಾರರು ಪರದಾಟ ನಡೆಸಿದ್ದಾರೆ. ಮಳೆ ನೀರಿಗೆ ಕೆಟ್ಟುನಿಂತ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರು ಯಾರೊಬ್ಬರು ನೆರವಿಗೆ ಬಂದಿಲ್ಲಎಂದು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರ ಬೇಸರವ್ಯಕ್ತಪಡಿಸಿದ್ದಾರೆ.
ಕೆಲ ವಾಹನಗಳು ಕೆಟ್ಟು ನಿಂತಿದ್ದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ದುಬಾರಿ ಟೋಲ್ ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರ ಸರಿಯಾಗಿ ಮಳೆ ನೀರು ಆಚೆ ಹೋಗುವ ವ್ಯವಸ್ಥೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರಕ್ಕೆ ಕರೆ ಮಾಡಿದರೂ ಅಧಿಕಾರಿಗಳು ನೆರವಿಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿದ್ದರು. ಉದ್ಘಾಟನೆಯಾದ 6 ದಿನಕ್ಕೇ ಎಕ್ಸ್ಪ್ರೆಸ್ ವೇನಲ್ಲಿ ಈ ಅವಾಂತರವಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದಿತ್ತು.
ವಾಹನ ಸವಾರರ ಪರದಾಟ
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ 100 ಕಿ.ಮೀಗಿಂತ ವೇಗವಾಗಿ ಬರುವ ವಾಹನಗಳು ಸಂಗಬಸವನದೊಡ್ಡಿ ಬಳಿ ಬಂದ ಕೂಡಲೇ ಜಲಾವೃತವಾದ ಕೆಳಸೇತುವೆ ಪ್ರವೇಶಿಸಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ರಸ್ತೆಯಲ್ಲಿ 100 ರಿಂದ 200 ಮೀನಷ್ಟು ದೂರ ನಿಂತಿರುವ ನೀರಿನಲ್ಲಿ ವಾಹನ ಚಲಾಯಿಸಲು ಸವಾರರು ಪರದಾಟ ನಡೆಸುತ್ತಿದ್ದಾರೆ.
ಇಷ್ಟೆಲ್ಲ ಸಮಸ್ಯೆ ಆಗುತ್ತಿದ್ದರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಗರಂ ಆಗಿದ್ದಾರೆ.
ಕಳೆದ ವರ್ಷವೂ ಇದೇ ಸಮಸ್ಯೆ
ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದ್ಘಾಟನೆಯಾದ 6 ದಿನಕ್ಕೇ ಎಕ್ಸ್ಪ್ರೆಸ್ ವೇನಲ್ಲಿ ಈ ಅವಾಂತರವಾಗಿದೆ. ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತ್ತು. ಆದರೆ, ಈಗ ಉದ್ಘಾಟನೆಯಾದ ಒಂದೇ ವಾರಕ್ಕೆ ಮಳೆಯಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವಾರದಿಂದಲೂ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ನಿರಂತರ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಸರ್ವೀಸ್ ರಸ್ತೆ ಸೌಲಭ್ಯ ಸೂಕ್ತವಾಗಿ ನೀಡದೇ ಟೋಲ್ ಸಂಗ್ರಹಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಬೆನ್ನೆಲ್ಲೆ ಹೆದ್ದಾರಿಯಲ್ಲಿ ವಿಶ್ರಾಂತಿ ಸ್ಥಳ, ಶೌಚಾಲಯ ಇಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಸದ್ಯ ಮಳೆಗೆ ಹೆದ್ದಾರಿ ಜಲಾವೃತವಾಗಿದೆ.
ಇನ್ನು ರಾಮನಗರ ಜಿಲ್ಲಾ ವ್ಯಾಪ್ತಿಯೊಂದರಲ್ಲೇ ಸಂಭವಿಸಿದ ಅಪಘಾತಗಳ ಸಂಖ್ಯೆ ಶತಕ (110ಕ್ಕೂ ಹೆಚ್ಚು) ದಾಟಿದ್ದು, 41 ಮಂದಿ ಸಾವನ್ನಪ್ಪಿದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ದ್ವೀಶತಕ ದಾಟಿದೆ.
ನಡೆದ 225 ಅಪಘಾತದಲ್ಲಿ 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಲಕ್ಷ್ಮೀಪುರ ಗೇಟ್-ಮಣಿಪಾಲ್ ಆಸ್ಪತ್ರೆವರೆಗಿನ ಹೆದ್ದಾರಿಯಲ್ಲಿ ಈವರೆಗೆ ಸಂಭವಿಸಿದ 30 ಆಪಘಾತ ಪ್ರಕರಣದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ಮೈಸೂರಿನವರೆಗೂ ಸುಮಾರು 130 ಕಿಲೋ ಮೀಟರ್ ದೂರದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆಯನ್ನ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬೆಂಗಳೂರಿನಿಂದ ಮಂಡ್ಯದವರೆಗೂ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನಿಂದ ಮೈಸೂರಿಗೆ ಕೆಲವೇ ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಸುಂದರವಾದ ರಸ್ತೆಯಲ್ಲಿ ವಾಹನಗಳ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ, ಅಪಘಾತದಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇದು ವಾಹನ ಸವಾರರು, ಸ್ಥಳೀಯರ ಆತಂಕಕ್ಕೂ ಕೂಡ ಕಾರಣವಾಗಿದೆ. ಹೆದ್ದಾರಿಯಲ್ಲಿನ ಅನಾಹುತಗಳ ಬಗ್ಗೆ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಸಮಾಧಾನ ಹೊರಹಾಕುತ್ತಿದ್ದು, ಅಪೂರ್ಣ ಕಾಮಗಾರಿಯೇ ಇವೆಲ್ಲದಕ್ಕೆ ಕಾರಣ ಎಂದು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ಆರೋಪಿಸುತ್ತಿದ್ದಾರೆ.