ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿ ಮಾರ್ಗಸೂಚಿ ತಿದ್ದುಪಡಿ ಮಾಡಿ ಅಥವಾ ಹಿಂತೆಗೆದುಕೊಳ್ಳಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ರಚಿತ ಸಮಿತಿ ವರದಿ
ಹೊಸದಿಲ್ಲಿ: ವನ್ಯಜೀವಿಗಳ ಆವಾಸಸ್ಥಾನಗಳಲ್ಲಿ ಹುಲಿ ಸಫಾರಿ ಮತ್ತು ಮೃಗಾಲಯಗಳಿಗೆ ಅವಕಾಶ ನೀಡುವ ಮಾರ್ಗಸೂಚಿಗಳನ್ನು ಕೂಡಲೇ ತಿದ್ದುಪಡಿ ಮಾಡಲು ಅಥವಾ ಹಿಂತೆಗೆದುಕೊಳ್ಳಲು ಕೇಂದ್ರ ಪರಿಸರ ಸಚಿವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ರಚಿಸಲ್ಪಟ್ಟ ಕೇಂದ್ರೀಯ ಸಶಕ್ತ ಸಮಿತಿ (ಸಿಇಸಿ)ತಿಳಿಸಿದೆ.
ಉತ್ತರಾಖಂಡ ರಾಜ್ಯದ ಜಿಮ್ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶದಲ್ಲಿ ಹುಲಿ ಸಫಾರಿ ಆರಂಭಿಸುವ ಸಂಬಂಧ ಸಮಿತಿಯು ಸ್ಥಳ ಪರಿಶೀಲಿಸಿ ಕೇಂದ್ರ ಪರಿಸರ ಸಚಿವಾಲಯಕ್ಕೆ ವರದಿಯನ್ನು ಸಲ್ಲಿಸಿದೆ.
ಪ್ರವಾಸೋದ್ಯಮ ಚಟುವಟಿಕೆಗಳಿಗೆ ವನ್ಯಜೀವಿಗಳ ಆವಾಸಸ್ಥಾನಗಳ ಬಳಕೆುಂನ್ನು ಕಡಿಮೆಗೊಳಿಸಲು ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮೃಗಾಲಯಗಳು ಮತ್ತು ಸಫಾರಿಗಳನ್ನು ಆರಂಭಿಸುವ ಬಗ್ಗೆ ಎನ್ಟಿಸಿಎ ನೀಡಿರುವ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಲು ಅಥವಾ ಹಿಂತೆಗೆದುಕೊಳ್ಳುವಂತೆ ಸಮಿತಿ ಹೇಳಿದೆ.
ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ಸಂರಕ್ಷಿತ ಪ್ರದೇಶಗಳಲ್ಲಿ ಮೃಗಾಲಯಗಳು ಮತ್ತು ಸಫಾರಿಗಳನ್ನು ಸ್ಥಾಪಿಸಲು ನೀಡಿರುವ ಅನುಮೋದನೆಗಳನ್ನು ತಕ್ಷಣವೇ ಹಿಂಪಡೆಯುವಂತೆ ಸೂಚಿಸಿದೆ. ಅಲ್ಲದೆ ಆ ಪ್ರದೇಶದಲ್ಲಿ ಗಾಯಗೊಂಡ ಅಥವಾ ಅಶಕ್ತ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಒಳಗೊಂಡ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಬಹುದು ಎಂದು ಸಮಿತಿಯು ಶಿಫಾರಸು ಮಾಡಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು 2012, 2016 ಮತ್ತು 2019ರಲ್ಲಿ ತಿದ್ದುಪಡಿ ಮಾಡಿದ ಮಾರ್ಗಸೂಚಿಗಳ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶಗಳ ಬಫರ್ ಮತ್ತು ಅಂಚಿನ ಪ್ರದೇಶಗಳಲ್ಲಿ ಟೈಗರ್ ಸಫಾರಿಗಳನ್ನು ಆರಂಭಿಸಬಹುದು. ಇದರಿಂದ ಕೋರ್ ಮತ್ತು ಸೂಕ್ಷ್ಮ ಆವಾಸಸ್ಥಾನಗಳ ಮೇಲೆ ಪ್ರವಾಸೋದ್ಯಮದ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಸಾರ್ವಜನಿಕ ಜಾಗೃತಿಯನ್ನು ಮೂಡಿಸಿ ಅವುಗಳ ರಕ್ಷಣೆಗೆ ಬೆಂಬಲವನ್ನು ಪಡೆಯಲು ಸಹಾಯಕವಾಗಿದೆ ಎಂದಿತ್ತು. ಅರಣ್ಯ (ಸಂರಕ್ಷಣೆ) ಕಾಯಿದೆ 1980ರ ಪ್ರಕಾರ ಅನುಮೋದನೆಯ ಅಗತ್ಯವನ್ನು ತೆಗೆದುಹಾಕುವ ಅರಣ್ಯ ಪ್ರದೇಶಗಳಲ್ಲಿ ಮೃಗಾಲಯಗಳ ಸ್ಥಾಪನೆಯನ್ನು ಒಂದು ಅರಣ್ಯೇತರ ಚಟುವಟಿಕೆ ಎಂದು ಪರಿಗಣಿಸಬಾರದು ಎಂದು ಕಳೆದ ವರ್ಷ ಜೂನ್ನಲ್ಲಿ ಸಚಿವಾಲಯ ಹೇಳಿತ್ತು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಸಂರಕ್ಷಿತ ಪ್ರದೇಶಗಳ ಬಫರ್ ವಲಯದ ಅಂಚುಗಳಲ್ಲಿನ ಅರಣ್ಯ ಭೂಮಿಯಲ್ಲಿ ಮೃಗಾಲಯವನ್ನು ನಿರ್ಮಿಸಬಹುದು ಎಂಬುದು ಇದರ ಮಾರ್ಗದರ್ಶನವಾಗಿದೆ.
ಸಿಇಸಿ ವರದಿ ಪ್ರಕಾರ ಹುಲಿ ಸಂರಕ್ಷಿತ ಪ್ರದೇಶಗಳ ಬಫರ್ ಮತ್ತು ಅಂಚಿನ ಪ್ರದೇಶಗಳಲ್ಲಿ ಹುಲಿ ಸಫಾರಿಗಳನ್ನು ಆರಂಭಿಸುವಾಗ 2012ರಲ್ಲಿ ಎನ್ಟಿಸಿಎ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ. ಎನ್ಟಿಸಿಎಯು 2016 ಮತ್ತು 2019ರಲ್ಲಿಯೂ ಹುಲಿ ಸಫಾರಿಗಳನ್ನು ಸ್ಥಾಪಿಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತು. ಆದ್ದರಿಂದ 2012, 2016 ಮತ್ತು 2019ರಲ್ಲಿ ಹೊರಡಿಸಲಾದ ತಿದ್ದುಪಡಿಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಹಿಂತೆಗೆದುಕೊಳ್ಳಬೇಕು ಎಂದು ಸಿಇಸಿ ವರದಿ ತಿಳಿಸಿದೆ.
ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮೃಗಾಲಯಗಳು ಮತ್ತು ಸಫಾರಿಗಳನ್ನು ಸ್ಥಾಪಿಸಲು ಸಂಬಂಧಿಸಿದ ಅರಣ್ಯ (ಸಂರಕ್ಷಣೆ) ಕಾಯಿದೆ 1980, ಮತ್ತು ವನ್ಯಜೀವಿ (ರಕ್ಷಣೆ) ಕಾಯ್ದೆ,1972ರ ಅಡಿಯಲ್ಲಿ ಹೊರಡಿಸಲಾದ ಮಾರ್ಗಸೂಚಿಗಳನ್ನು ಪರಿಶೀಲಿಸಲು ಸಚಿವಾಲಯಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆಯೂ ಕೇಂದ್ರ ಮೃಗಾಲಯ ಪ್ರಾಧಿಕಾರವು ಸುಪ್ರಿಂ ಕೋರ್ಟ್ನ್ನು ಕೇಳಿದೆ.
ಸಫಾರಿಗಳು ಮತ್ತು ಪ್ರಾಣಿಸಂಗ್ರಹಾಲಯಗಳು ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನದ ಹೊರಗೆಯೂ ಅವುಗಳನ್ನು ಸಂರಕ್ಷಣೆ ಮಾಡುವ ಸಾಧನಗಳಲ್ಲಿ ಒಂದಾಗಿದೆ ಮತ್ತು ಅವುಗಳಿಗೆ ಸಂತಾನೋತ್ಪತ್ತಿಗೆ ಸಹಾಯವಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಹಾಗೂ ಜಾಗೃತಿಗೂ ಸಹಕಾರಿಯಾಗಲಿದೆ ಎಂದು ಸಮಿತಿ ಗಮನಿಸಿದೆ.
ಅಂತಹ ಸಫಾರಿಗಳು ಮತ್ತು ಪ್ರಾಣಿ ಸಂಗ್ರಹಾಲುಂಗಳ ಸ್ಥಳವು ನೈಸರ್ಗಿಕ ಅವುಗಳ ಸಂಖ್ಯೆಗೆ ಮತ್ತು ಪರಿಸರ-ಪ್ರವಾಸೋದ್ಯಮದ ಅಪಾಯವನ್ನುಂಟು ಮಾಡುವುದಿಲ್ಲ ಎನ್ನಿಸಿದರೂ ಅಳಿವಿನಂಚಿನಲ್ಲಿರುವ ಪ್ರಭೇದಗಳ ಆವಾಸಸ್ಥಾನಗಳು ಕುಗ್ಗುವಿಕೆಗೂ ಕಾರಣವಾಗಬಾರದು. ಆ ಸ್ಥಳದಲ್ಲಿ ಅಂತಹ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಆವಾಸಸ್ಥಾನ ಲಭ್ಯವಿರುತ್ತದೆ ಎಂದು ಪ್ರಾಧಿಕಾರ ಹೇಳಿದೆ.
ಸಮಿತಿ ಹೇಳಿದ್ದೇನು?
-ಹುಲಿ ಸಫಾರಿಗಳ ಸ್ಥಾಪನೆಗೆ ಎನ್ಟಿಸಿಎ ಮಾರ್ಗಸೂಚಿಗಳ ಮಹತ್ವವು ಕೇವಲ ಪ್ರವಾಸೋದ್ಯಮದ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಿ, ಅಳಿವಿನಂಚಿನಲ್ಲಿರುವ ರಾಷ್ಟ್ರೀಯ ಪ್ರಾಣಿಗಳ ಸಂರಕ್ಷಣೆಗೆ ಮಹತ್ವ ಕಡಿಮೆಯಾಗಿರುವುದರಿಂದ ಮಾರ್ಗಸೂಚಿಗಳನ್ನು ತುರ್ತು ಪರಿಶೀಲಿಸಬೇಕು.
ಸಫಾರಿಯಿಂದ ಪ್ರವಾಸಿಗರು ವಾಹನಗಳ ಮೂಲಕ ದೂರದವರೆಗೆ ಪ್ರಯಾಣಿಸಬೇಕಾಗುತ್ತದೆ. ಪರಿಣಾಮವಾಗಿ, ಅಂತಹ ಪ್ರವಾಸಿಗರನ್ನು ಸಾಗಿಸುವ ಹೆಚ್ಚಿನ ಸಂಖ್ಯೆಯ ವಾಹನಗಳು ಆ ಪ್ರದೇಶದ ಅರಣ್ಯ ಮತ್ತು ವನ್ಯಜೀವಿಗಳಿಗೆ ಭಾರಿ ತೊಂದರೆಯನ್ನುಂಟು ಮಾಡುತ್ತವೆ.
ಕರ್ನಾಟದಲ್ಲಿ ಹೇಗಿದೆ
ಸವೋಚ್ಛ ನ್ಯಾಯಾಲಯದ ನಿರ್ದೇಶನದಂತೆ 2012ರಲ್ಲಿಯೇ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ಹುಲಿ ಸಂರಕ್ಷಣಾ ಪ್ರಾಧಿಕಾರವು ದೇಶದ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಶೇ.20 ಪ್ರದೇಶದೊಳಗೆ ಮಾತ್ರ ಸಫಾರಿ ಮಾಡುವಂತೆ ನಿರ್ದೇಶಿಸಿದೆ. ಅದರಂತೆ ಹುಲಿ ಯೋಜಿತ ಪ್ರದೇಶಗಳಲ್ಲಿ ನಿಗದಿತ ಮಾರ್ಗ ಹಾಗೂ ವಾಹನಗಳ ಸಂಖ್ಯೆ ನಿಗದಿಪಡಿಸಿ ಸಫಾರಿ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್ಟಿ, ಭದ್ರಾ, ಅಣಶಿಯಲ್ಲಿ ಸಫಾರಿಯಿದೆ. ಅರಣ್ಯ ಇಲಾಖೆ ಜತೆಗೆ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ಸ್ ಸಹ ಸಫಾರಿ ಆಯೋಜಿಸುತ್ತದೆ.
ಉತ್ತರ ಭಾರತದಲ್ಲಿ ಸರ್ಕಾರದ ಜತೆಗೆ ಖಾಸಗಿ ವಾಹನಗಳನ್ನೂ ಸಫಾರಿಗೆ ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಇದಕ್ಕೆ ಅವಕಾಶ ನೀಡದೇ ಸೀಮಿತ ಸಫಾರಿ ನಡೆಸಲಾಗುತ್ತಿದೆ.
ಕರ್ನಾಟಕದಲ್ಲಿ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ವಿಚಾರದಲ್ಲಿ ಎಚ್ಚರಿಕೆ ವಹಿಸಿರುವುದನ್ನು ಗಮನಿಸಿದ್ದೇವೆ. ಕೆಲವು ಕಡೆ ಅರಣ್ಯದೊಳಗೆ ಜಂಗಲ್ ಲಾಡ್ಜ್ನ ಕಟ್ಟಡಗಳಿದ್ದು, ಅವುಗಳನ್ನು ಹೊರಗಡೆ ನಿರ್ಮಿಸಲು ಕ್ರಮ ವಹಿಸಬೇಕಾಗುತ್ತದೆ.ಅರಣ್ಯದಲ್ಲಿ ಪ್ರವಾಸೋದ್ಯಮದ ಮೇಲೆ ಮಿತಿ ಇರುವುದು ಸೂಕ್ತ.
– ಕೃಪಾಕರ್, ವನ್ಯಜೀವಿ ತಜ್ಞ.
ಸಮಿತಿ ನೀಡಿರುವ ವರದಿಯನ್ನು ಗಮನಿಸಿದ್ದೇನೆ. ಹಿಂದೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನ ಹಾಗೂ ಆನಂತರ ಕೇಂದ್ರ ಸರ್ಕಾರ, ಹುಲಿ ಸಂರಕ್ಷಣಾ ಪ್ರಾಧಿಕಾರ ಹೊರಡಿಸಿರುವ ಮಾರ್ಗ ಸೂಚಿ ಪ್ರಕಾರವೇ ನಮ್ಮಲ್ಲಿ ಸಫಾರಿ ನಡೆಯುತ್ತಿವೆ. ಅಂತಿಮ ವರದಿ ಹಾಗೂ ನಿರ್ದೇಶನ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
-ಕುಮಾರ ಪುಷ್ಕರ್, ಎಪಿಸಿಸಿಎಫ್( ವನ್ಯಜೀವಿ)