ನವದೆಹಲಿ : ತಮಿಳುನಾಡಿಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಆದೇಶದಂತೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ತುರ್ತುಸಭೆ ನಡೆಸಿದ್ದಾರೆ.
ನ್ಯಾಯಾಲಯದ ಅದೇಶ ಹೊರ ಬಿದ್ದ ಮರುಘಳಿಗೆಯೇ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸಚಿವರಾದ ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ರಾಜ್ಯದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರುಗಳು ತುರ್ತುಸಭೆ ನಡೆಸಿದ್ದಾರೆ.
ರಾಜ್ಯಸರ್ಕಾರ ಸುಪ್ರೀಂಕೋರ್ಟ್ನಲ್ಲಿ ತಮ್ಮ ಪರವಾದ ತೀರ್ಪು ಬರಬಹುದು ಎಂಬ ನಿರೀಕ್ಷೆ ಹೊಂದಿತ್ತು. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ನ್ಯಾಯಾಲಯ ಅದನ್ನು ಪರಿಗಣಿಸಲಿದೆ. ಕಾವೇರಿ ನೀರು ನಿಯಂತ್ರಣಾ ಸಮಿತಿ ಮತ್ತು ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳಿಗೆ ತಡೆಯಾಜ್ಞೆ ದೊರೆಯಲಿದೆ ಎಂಬ ಅಂದಾಜುಗಳಿದ್ದವು. ಆದರೆ ತೀರ್ಪು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂದಿದೆ. ಹೀಗಾಗಿ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಲಾಗುತ್ತಿದೆ.
ಈಗಾಗಲೇ ಪ್ರಾಕಾರ ಹಾಗೂ ನಿಯಂತ್ರಣಾ ಸಮಿತಿಗಳ ಆದೇಶಗಳನ್ನು ಪಾಲನೆ ಮಾಡಿರುವುದರಿಂದ ಸುಪ್ರೀಂಕೋರ್ಟ್ ರಾಜ್ಯದ ವಾದಕ್ಕೆ ಮನ್ನಣೆ ನೀಡಲಿದೆ ಎಂಬ ಅಂದಾಜುಗಳು ತಲೆಕೆಳಗಾಗಿವೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ವಾಸ್ತವ ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಂಡ ಕಳುಹಿಸಬೇಕು. ಆವರೆಗೂ ನ್ಯಾಯಾಲಯದ ಆದೇಶ ಪಾಲನೆಯಾಗಬಾರದು ಎಂಬ ಪ್ರತಿಪಾದನೆ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಅಥವಾ ಮಾಡದೇ ಇರುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.