ನವದೆಹಲಿ : ಭಾರತ ಸೇನೆ ಭಯೋತ್ಪಾದನೆಯ ನಿಗ್ರಹಕ್ಕೆ ಹಾಗೂ ಶತ್ರು ರಾಷ್ಟ್ರಗಳಿಂದ ರಕ್ಷಣೆಗಾಗಿ ತನ್ನ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಎಐ (ಕೃತಕಬುದ್ದಿಮತ್ತೆ) ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದಾಗಿದೆ.
ಭಾರತಕ್ಕೆ ಶತ್ರು ರಾಷ್ಟ್ರಗಳಾಗಿ ಕಾಡುತ್ತಿರುವ ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ ಮೂಲಕ ದೇಶದ ಗಡಿಯೊಳಗೆ ನುಗ್ಗಲು ಭಯೋತ್ಪಾದಕರಿಗೆ ಉತ್ತೇಜಿಸುವ ಪಾಕಿಸ್ತಾನಕ್ಕೆ ಭಾರತ ಸೆಡ್ಡು ಹೊಡೆದಿದೆ. ಅಲ್ಲದೇ ಪದೇ ಪದೇ ಗಡಿಯಲ್ಲಿ ಸಮಸ್ಯೆ ಹುಟ್ಟು ಹಾಕಿ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಚೀನಾ ತಂಟೆಯನ್ನೂ ಬಂದ್ ಮಾಡಲು ರಕ್ಷಣಾ ಇಲಾಖೆ ಮುಂದಾಗಿದೆ.
ಗಡಿಗಳಲ್ಲಿ ಗಸ್ತು ತಿರುಗಲು ಸಹ ಎಐ ಚಾಲಿತ ಡ್ರೋನ್‍ಗಳು ಮತ್ತು ರೋಬೋಟ್‍ಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಮಾನವ ಹಸ್ತಕ್ಷೇಪ ಹಾಗೂ ಅಪಾಯಗಳ ಪ್ರಮಾಣವನ್ನು ತಗ್ಗಿಸಲಿದೆ. ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 75 ಹೊಸದಾಗಿ ಅಭಿವೃದ್ಧಿಪಡಿಸಿದ ಎಐ ತಂತ್ರಜ್ಞಾನಗಳನ್ನು ಕಳೆದ ಜುಲೈನಲ್ಲಿ ಎಐ ಇನ್ ಡಿಫೆನ್ಸ್ ವಿಚಾರ ಸಂಕಿರಣದಲ್ಲಿ ಮೊದಲ ಬಾರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಅಲ್ಲಿ ರೋಬೋಟಿಕ್ಸ್, ಕಣ್ಗಾವಲು ಕ್ಯಾಮೆರಾಗಳನ್ನು ಪ್ರದರ್ಶಿಸಲಾಗಿತ್ತು.
ಈ ವರ್ಷದ ಆರಂಭದಲ್ಲಿ ನಡೆದ ಏಷ್ಯಾದ ಅತಿದೊಡ್ಡ ಏರ್ ಶೋಗಳಲ್ಲಿ ಒಂದಾದ ಏರೋ ಇಂಡಿಯಾದಲ್ಲಿ ಎಐ ಆಧಾರಿತ ಕಣ್ಗಾವಲು ಸಾಫ್ಟ್‍ವೇರ್ ರಕ್ಷಣಾ ಕ್ಷೇತ್ರದಲ್ಲಿ ಬಳಸುವ ವಿಧಾನವನ್ನು ಪರಿಚಯಿಸಲಾಗಿತ್ತು. ಈ ಬಗ್ಗೆ ಸೇನೆಗೆ ತರಬೇತಿ ಸಹ ನೀಡಲಾಗಿದೆ. ಹೆಚ್ಚಿನ ತರಬೇತಿಗಾಗಿ ಅಮೆರಿಕದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.
ಈಗಾಗಲೇ ಸಾಫ್ಟ್‍ವೇರ್ ಆಧಾರಿತ ಕ್ಯಾಮೆರಾಗಳನ್ನು ಪೂರ್ವ ಲಡಾಖ್ ಸೆಕ್ಟರ್‍ನಲ್ಲಿರಿಸಲಾಗಿದೆ. ಇದು ಚೀನಾಕ್ಕೆ ನಿಕಟವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಅಪಾಯದ ಸ್ಥಳಗಳಾದ ಕಾಶ್ಮೀರದಿಂದ ಸಿಕ್ಕಿಂವರೆಗೆ ಭಾರತದ ಸೂಕ್ಷ್ಮ ಗಡಿಗಳಲ್ಲಿ ಎಐ ತಂತ್ರಜ್ಞಾನ ವರದಾನವಾಗಿದೆ. ಈ ಸಾಫ್ಟ್‍ವೇರ್ ಯಾವುದೇ ಚಲನೆ, ಶಸ್ತ್ರಾಸ್ತ್ರಗಳು, ವಾಹನಗಳು, ಟ್ಯಾಂಕರ್ಗಳು ಅಥವಾ ಕ್ಷಿಪಣಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಲೈವ್ ಮತ್ತು ರೆಕಾರ್ಡ್ ಮಾಡುತ್ತದೆ. ಅಲ್ಲದೇ ಅದರ ಸಂಪೂರ್ಣ ಮಾಹಿತಿಯನ್ನು ಸೇನೆಗೆ ರವಾನಿಸುತ್ತದೆ.
ಭಾರತೀಯ ಸೇನೆಯು ಪ್ರತಿ ವರ್ಷ ಎಐ ತಂತ್ರಜ್ಞಾನಕ್ಕಾಗಿ ಸರಿಸುಮಾರು 400 ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ. ಈ ವಿಚಾರದಲ್ಲಿ ಅಮೆರಿಕ ಹಾಗೂ ಚೀನಾ ಮುಂದಿದ್ದರೂ ಅವುಗಳಿಗೆ ಸರಿಯಾಗಿ ನಿಲ್ಲಲು ಭಾರತ ಸಮರ್ಥವಾಗಿದೆ.
ಇಸ್ರೇಲ್‍ನಲ್ಲಿ ಪ್ಯಾಲೆಸ್ತೇನಿಯನ್ ಮಿಲಿಟರಿಗೆ ಸಂಬಂಸಿದ ವ್ಯಕ್ತಿಗಳನ್ನು ಕಂಡು ಹಿಡಿಯಲು ಮತ್ತು ಅವರ ಮೇಲೆ ನಿಗಾ ಇಡಲು ಎಐ ಬಳಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನವು ಸೇನಾ ಸಿಬ್ಬಂದಿಯ ಹಾಗೂ ಅವರೊಂದಿಗೆ ಸಂಪರ್ಕದಲ್ಲಿರುವವರ ಮೊಬೈಲ್‍ಗಳನ್ನು ಅನ್‍ಲಾಕ್ ಮಾಡುವ ಮೂಲಕ ಅವರ ಮಾಹಿತಿ ಕಲೆಹಾಕುತ್ತದೆ. ಅವರ ಮೇಲೆ ಈ ಮೂಲಕ ನಿಗಾ ವಹಿಸುತ್ತದೆ.