ನವದೆಹಲಿ : ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ, ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಅಚ್ಚರಿ ಕಾದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಹೇಳುವುದಾದರೆ, ತೆಲಂಗಾಣದಲ್ಲಿ ನಾವು ಗೆಲ್ಲುವ ಸಾಧ್ಯತೆ ಇದೆ. ಮಧ್ಯ ಪ್ರದೇಶ, ಛತ್ತೀಸ್ಗಢ ರಾಜ್ಯಗಳಲ್ಲೂ ಗೆಲುವಿನ ಸಾಧ್ಯತೆ ಇದೆ. ಇನ್ನು ರಾಜಸ್ಥಾನ ರಾಜ್ಯದಲ್ಲಂತೂ ನಾವು ಗೆಲುವಿನ ಸನಿಹದಲ್ಲಿ ಇದ್ದೇವೆ. ಎಲ್ಲ ರಾಜ್ಯಗಳಲ್ಲೂ ನಾವು ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ ಕೂಡಾ ಆಂತರಿಕವಾಗಿ ಇದೇ ಮಾತುಗಳನ್ನು ಆಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ನಾವು ಮಹತ್ವದ ಪಾಠಗಳನ್ನು ಕಲಿತಿದ್ದೇವೆ ಎಂದಿರುವ ರಾಹುಲ್ ಗಾಂಧಿ, ಬಿಜೆಪಿಯು ವಿನಾಶಕಾರಿ ರಾಜಕಾರಣದ ಮೂಲಕ ಚುನಾವಣೆ ಗೆಲ್ಲಲು ಯತ್ನಿಸಿತ್ತು. ನಾವು ಅವರ ಯಾವ ತಂತ್ರಗಾರಿಕೆಯೂ ಫಲ ನೀಡದಂತೆ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿಯ ಯಾವುದೇ ತಂತ್ರಗಾರಿಕೆಯೂ ಫಲ ನೀಡದ ರೀತಿಯಲ್ಲಿ ನಾವು ಕರ್ನಾಟಕ ಚುನಾವಣೆಯನ್ನು ಎದುರಿಸಿದೆವು. ಗೆಲುವನ್ನೂ ಸಾಧಿಸಿದೆವು. ಇದೀಗ ಬಿಜೆಪಿ ಜಾತಿ ಗಣತಿ ಮೂಲಕ ಸದ್ದು ಮಾಡುತ್ತಿದೆ. ಜನರಿಗೆ ಬೇಕಾದ ಮೂಲಭೂತ ವಿಚಾರಗಳ ಕುರಿತಾಗಿ ಚರ್ಚೆ ಮಾಡದಂತೆ ಬಿಜೆಪಿ ನೋಡಿಕೊಳ್ಳುತ್ತಿದೆ ಎಂದ ರಾಹುಲ್ ಗಾಂಧಿ, ಇತ್ತೀಚೆಗೆ ಲೋಕಸಭಾ ಕಲಾಪದ ವೇಳೆ ಬಿಎಸ್ಪಿ ಸಂಸದ ದಾನಿಶ್ ಅಲಿ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿದುರಿ ನೀಡಿದ ಹೇಳಿಕೆಯನ್ನು ಉದಾಹರಣೆಯನ್ನಾಗಿ ನೀಡಿದರು.