ಹರಿದ್ವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಆರೋಪ; ಮಧ್ಯ ಪ್ರವೇಶಿಸುವಂತೆ ಸಿಜೆಐ ರಮಣಗೆ ಪತ್ರ ಬರೆದ 76 ವಕೀಲರು

ನವದೆಹಲಿ : ಇತ್ತೀಚೆಗೆ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳು ವಿವಾದ ಸೃಷ್ಟಿಸಿವೆ.  ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್​ನ 76 ಮಂದಿ ವಕೀಲರು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರಿಗೆ ಪತ್ರ ಬರೆದಿದ್ದು, ಈ ಎರಡೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಮುಖಂಡರು ಜನಾಂಗೀಯ ಶುದ್ಧೀಕರಣಕ್ಕೆ ಕರೆ ನೀಡಿದ್ದಾರೆ ಹಾಗೂ ದ್ವೇಷ ಭಾಷಣ ಮಾಡಿದ್ದಾರೆ. ಈ ಪ್ರಕರಣವನ್ನು ಸುಮೊಟೊ ಆಗಿ ತೆಗೆದುಕೊಳ್ಳಬೇಕು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ತುರ್ತಾಗಿ ನ್ಯಾಯಾಂಗದ ಹಸ್ತಕ್ಷೇಪವಾಗಲೇಬೇಕು. ಈ ಮೂಲಕ ಇಂಥ ಭಾಷಣಗಳು ಮತ್ತೆ ಮರುಕಳಿಸದಂತೆ ತಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ದ್ವೇಷ ಭಾಷಣ ಮಾಡಿದವರ ಹೆಸರನ್ನು ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೇ, ಸಹಿ ಮಾಡಿದ 72 ಮಂದಿ ವಕೀಲರ ಹೆಸರನ್ನೂ ಇಲ್ಲಿ ನಮೂದಿಸಲಾಗಿದೆ.

ಈ ಪತ್ರಕ್ಕೆ ದೇಶದ ಪ್ರಮುಖ ವಕೀಲರಾದ ದುಶ್ಯಂತ ದಾವೆ, ಪ್ರಶಾಂತ್ ಭೂಷಣ್​, ವೃಂದಾ ಗ್ರೋವರ್​, ಸಲ್ಮಾನ್ ಖುರ್ಷಿದ್​, ಪಾಟ್ನಾ ಹೈಕೋರ್ಟ್​​ನ ಮಾಜಿ ಜಡ್ಜ್​ ಅಂಜನಾ ಪ್ರಕಾಶ್​ ಕೂಡ ಸಹಿ ಮಾಡಿದ್ದಾರೆ. ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಮುಸ್ಲಿಂ ಜನಾಂಗದವರ ಸಾಮೂಹಿಕ ಹತ್ಯೆಗೆ ಕರೆ ನೀಡಲಾಗಿದೆ. ಇದು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಅತಿದೊಡ್ಡ ಅಪಾಯವನ್ನುಂಟು ಮಾಡುವ ನಡೆ. ಅಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಲಕ್ಷಾಂತರ ಜನರ ಜೀವಕ್ಕೆ ಅಪಾಯ ತರುವ ಕರೆ ಎಂದು ವಕೀಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

× Chat with us