ಉತ್ತರಾಖಂಡದಲ್ಲಿ ಮಳೆ ಆರ್ಭಟ: 16 ಮಂದಿ ಸಾವು!

ಉತ್ತರಾಖಂಡ: ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ.

ಮನೆಗಳ ಗೋಡೆ ಕುಸಿತ, ರಸ್ತೆ ಸಮಸ್ಯೆ, ಮೇಘಸ್ಫೋಟ, ಭೂಕುಸಿತಕ್ಕೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಪ್ರಕೃತಿ ವಿಕೋಪ ಪರಿಣಾಮ ಕುರಿತು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಮಾತನಾಡಿ, ಜನರು ಭಯಪಡುವ ಅಗತ್ಯವಿಲ್ಲ. ಎಲ್ಲರ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗಾಗಿ ಮೂರು ಭಾರತೀಯ ಸೇನಾ ಎಲಿಕಾಫ್ಟರ್‌ಗಳು ಕಾರ್ಯಾಚರಣೆ ನಡೆಸಲಿವೆ. ಎರಡು ಎಲಿಕಾಫ್ಟರ್‌ಗಳನ್ನು ನೈನಿತಾಲ್‌ ಹಾಗೂ ಒಂದನ್ನು ಗರ್ವಾಲ್‌ ಪ್ರದೇಶಗಳಿಗೆ ತೆರಳಿದ್ದು ರಕ್ಷಣೆ ಕಾರ್ಯ ನಡೆಸುತ್ತಿವೆ.

ಸೋಮವಾರದ ಮಳೆಯಲ್ಲಿ ಐವರು ಮೃತಪಟ್ಟಿದ್ದರು. ಈವರೆಗೂ ಮಳೆಯ ಕಾರಣಗಳಿಂದ ಉತ್ತರಾಖಂಡದಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಭಾರತೀಯ ಸೇನೆಯ ಮೂರು ಹೆಲಿಕಾಪ್ಟರ್ಗಳು ಬಂದಿವೆ ಎಂದು ಮುಖ್ಯಮಂತ್ರಿ ಧಾಮಿ ಹೇಳಿದ್ದಾರೆ.

ಎರಡು ಹೆಲಿಕಾಪ್ಟರ್‌ಗಳು ನೈನಿತಾಲ್‌ನತ್ತ ಸಾಗಲಿವೆ ಹಾಗೂ ಒಂದು ಹೆಲಿಕಾಪ್ಟರ್ ಗರ್ವಾಲ್ ವಲಯದಲ್ಲಿ ಸಿಲುಕಿರುವ ಜನರ ರಕ್ಷಣೆ ನಡೆಸಲಿದೆ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲ ಕ್ರಮಕೈಗೊಂಡಿರುವುದಾಗಿ ತಿಳಿಸಿದರು.

ಚಾರ್‌ಧಾಮ್ ಯಾತ್ರಿಕರು, ಪ್ರಸ್ತುತ ಇರುವ ಸ್ಥಳದಲ್ಲೇ ಉಳಿಯುವಂತೆ ಪ್ರಕಟಿಸಲಾಗಿದೆ. ವಾತಾವರಣ ಉತ್ತಮಗೊಳ್ಳುವವರೆಗೂ ಪ್ರಯಾಣ ಮುಂದುವರಿಸದಂತೆ ತಿಳಿಸಲಾಗಿದೆ.

ನೈನಿ ಕೆರೆಯ ಸಮೀಪದ ನೈನಿ ದೇವಿ ದೇವಾಲಯ ಮತ್ತು ನೈನಿತಾಲ್‌ನ ಮಾಲ್ ರೋಡ್ ಜಲಾವೃತವಾಗಿವೆ. ಭೂಕುಸಿತದಿಂದಾಗಿ ಹಾಸ್ಟೆಲ್ ಕಟ್ಟಡಕ್ಕೆ ಹಾನಿಯಾಗಿದೆ. ನಗರದಿಂದ ಹೊರ ಹೋಗುವ ಎಲ್ಲ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ರಾಮನಗರ್? ರಾನಿಖೇತ್ ರಸ್ತೆಯ ಲೆಮನ್ ಟ್ರೀ ರೆಸಾರ್ಟ್‌ನ ಸುಮಾರು 100 ಜನ ಸಿಲುಕಿದ್ದಾರೆ. ಕೋಸಿ ನದಿಯು ಉಕ್ಕಿ ಹರಿಯುತ್ತಿದ್ದು, ರೆಸಾರ್ಟ್‌ಒಳಗೆ ನೀರು ನುಗ್ಗಿದೆ.

ಭಾರಿ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದಿದ್ದಾರೆ. ’ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ’ ಮೋದಿ ತಿಳಿಸಿದ್ದಾರೆ.

× Chat with us