ಹೊಸದಿಲ್ಲಿ: ಎಲೆಕ್ಟಿಕ್ ವಾಹನ ಹಾಗೂ ಉಕ್ಕು ಕ್ಷೇತ್ರದಲ್ಲಿ ಹೂಡಿಕೆ ಹಾಗೂ ಸುಧಾರಿತ ತಂತ್ರಜ್ಞಾನ ಆಳವಡಿಕೆ ಹಾಗೂ ವಾಯು ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯುರೋಪ್ ಒಕ್ಕೂಟದ ಜತೆ ಮಹತ್ವದ ಮಾತುಕತೆ ನಡೆಸಿದರು.
ನವದೆಹಲಿಯ ತಮ್ಮ ಸಚಿವಾಲಯದ ಕಚೇರಿಯಲ್ಲಿ ಶುಕ್ರವಾರ ಯುರೋಪ್ ಒಕ್ಕೂಟದ ಕೈಗಾರಿಕಾ ಕಾರ್ಯತಂತ್ರ ವಿಭಾಗದ ಕಾರ್ಯಕಾರಿ ಉಪಾಧ್ಯಕ್ಷ ಸ್ಟೀಫನ್ ಸೆಜರ್ನೆ ಅವರ ನೇತೃತ್ವದ ನಿಯೋಗದ ಜತೆ ಸಚಿವರು ಮಾತುಕತೆ ನಡೆಸಿದರು.
ಎರಡೂ ಕ್ಷೇತ್ರಗಳಲ್ಲಿ ಸುಸ್ಥಿರತೆ, ಹೂಡಿಕೆ ಮತ್ತು ತಾಂತ್ರಿಕ ಪ್ರಗತಿಗಳ ಮೇಲೆ ತಮ್ಮ ಚರ್ಚೆಯನ್ನು ಕೇಂದ್ರೀಕರಿಸಿದ ಸಚಿವರು; ಉಕ್ಕು ಮತ್ತು ಭಾರೀ ಕೈಗಾರಿಕೆಗಳ ವಲಯದಲ್ಲಿ ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ಸಹಕಾರವನ್ನು ಗಾಢವಾಗಿಸುವ ಬಗ್ಗೆ ಒತ್ತಿ ಹೇಳಿದರು.
ಚರ್ಚೆಯ ಪ್ರಮುಖ ಮಖ್ಯಾಂಶಗಳು:
ಎಲೆಕ್ಟ್ರಿಕ್ ವಾಹನ (EV) ತಯಾರಿಕೆಯಲ್ಲಿ ಹೂಡಿಕೆ: ಜಾಗತಿಕ ವಾಹನ ತಯಾರಕರಿಗೆ ಕಸ್ಟಮ್ ಸುಂಕ ಕಡಿತ ಮತ್ತು ಪ್ರೋತ್ಸಾಹ ನೀಡುವಲ್ಲಿ ಹೆಚ್ಚು ಉತ್ತೇಜನ ಕೊಡುತ್ತಿದ್ದು, ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಕೇಂದ್ರ ಸಚಿವರು ಯುರೋಪ್ ಇವಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದರು. “ಭಾರತದ ಆಟೋಮೊಬೈಲ್ ಕ್ಷೇತ್ರವು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಈ ಪರಿವರ್ತನೆಯ ದಿಕ್ಕಿನಲ್ಲಿ ವೇಗವಾಗಿ ಹೆಜ್ಜೆ ಇಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ವೇದಿಕೆಗಳಲ್ಲಿ ನುಡಿದಂತೆ, ದೇಶಿಯವಾಗಿ ವಾಯು ಮಾಲಿನ್ಯವನ್ನು ತಗ್ಗಿಸಿ ತಾಪಮಾನ ನಿಯಂತ್ರಣಕ್ಕೆ ಕೊಡುಗೆ ನೀಡಲು ಇವಿ ಕ್ಷೇತ್ರದಲ್ಲಿ ಯುರೋಪ್ ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಯುರೋಪ್ ನಿಯೋಗಕ್ಕೆ ಹಳಿದರು.
ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಲ್ಲಿ ತಂತ್ರಜ್ಞಾನ ಅಭಿವೃದ್ಧಿ: ಯುರೋಪ್ ನಿಯೋಗವು EV ಬ್ಯಾಟರಿ ತಯಾರಿಕೆಯ ಬಗ್ಗ ಹೆಚ್ಚು ಆಸಕ್ತಿ ತೋರಿದೆ. ಜಂಟಿ ಸಂಶೋಧನೆ ಮತ್ತು ನಾವೀನ್ಯತೆಗೆ ಬೆಂಬಲ ಕೊಡುವುದಾಗಿ ಭರವಸೆ ನೀಡಿತು. ಈ ನಿಟ್ಟಿನಲ್ಲಿ ನಿಯೋಗದ ಜತೆ ಸಚಿವರು ಮಾತುಕತೆ ನಡೆಸಿದರು.
ಬ್ಯಾಟರಿ ತಂತ್ರಜ್ಞಾನಗಳಲ್ಲಿ ಪ್ರಮಾಣೀಕರಣ: ತಡೆರಹಿತ ವ್ಯಾಪಾರ ಮತ್ತು ತಾಂತ್ರಿಕ ವಿನಿಮಯವನ್ನು ಸುಗಮಗೊಳಿಸಲು, ಯುರೋಪ್ ಒಕ್ಕೂಟ ಮತ್ತು ಭಾರತದ ನುವೆ ಮತ್ತಷ್ಟು ಗಾಢವಾದ ಬಾಂಧವ್ಯ ಹೆಚ್ಚಿಸುವ ಬಗ್ಗೆ, ಎರಡೂ ಕಡೆ ಹೊಂದಾಣಿಕೆಯನ್ನು ಸಕ್ರಿಯಗೊಳಿಸುವುದಕ್ಕಾಗಿ ಬ್ಯಾಟರಿ ಘಟಕಗಳು ಮತ್ತು ತಂತ್ರಜ್ಞಾನಗಳಲ್ಲಿ ಏಕರೂಪದ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಭಾರತ- ಯುರೋಪ್ ಒಕ್ಕೂಟದ ಪಾಲುದಾರಿಕೆ: ಸುಸ್ಥಿರ ಕೈಗಾರಿಕಾ ಅಭಿವೃದ್ದಿಯ ಬಗ್ಗೆ ಪರಸ್ಪರ ಸಹಮತ ವ್ಯಕ್ತವಾಗಿದ್ದು, ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಜಾಗತಿಕ ನಾಯಕತ್ವ ವಹಿಸುವುದು ಭಾರತದ ಬದ್ಧತೆ ಆಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಯುರೋಪ್ ನಿಯೋಗಕ್ಕೆ ಒತ್ತಿ ಹೇಳಿದರು.
ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ತಾಂತ್ರಿಕ ಅಗತ್ಯಗಳ ಪೂರೈಕೆ ಮತ್ತು ಸಂಶೋಧನೆಗೆ ಹೆಚ್ಚಿನ ಸಹಯೋಗ ಹೊಂದುವ ಭಾರತದ ಆಕಾಂಕ್ಷೆಯನ್ನು ಸಚಿವರು ಪ್ರಬಲವಾಗಿ ಪ್ರತಿಪಾದಿಸಿದರು. “ಹಸಿರು ಪರಿವರ್ತನೆಯತ್ತ ಒಂದು ಹೆಗ್ಗುರುತಾಗಿ, ಭಾರತವು ಗ್ರೀನ್ ಸ್ಟೀಲ್ ಅನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಬಲವಾಗಿ ಪ್ರತಿಪಾದಿಸಿದ ಮೊದಲ ದೇಶವಾಗಿದೆ ಮತ್ತು ಡಿಸೆಂಬರ್ 2024ರಲ್ಲಿ ‘ಗ್ರೀನ್ ಸ್ಟೀಲ್ ಟ್ಯಾಕ್ಸಾನಮಿ’ ಯನ್ನು ಬಿಡುಗಡೆ ಮಾಡಿದೆ. ನಾವು ಜಾಗತಿಕ ಮಟ್ಟದಲ್ಲಿ ಈ ಪರಿವರ್ತನೆಗೆ ಚಾಲನೆ ನೀಡಿದ್ದೇವೆ” ಎಂದು ಉಕ್ಕು ಸಚಿವರಾದ ಕುಮಾರಸ್ವಾಮಿ ಅವರು ಹೇಳಿದರು.
ಯುರೋಪ್ ನಿಯೋಗವು ಗ್ರೀನ್ ಸ್ಟೀಲ್ ಉತ್ಪಾದನೆಯಲ್ಲಿ ಭಾರತದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಸಿತಲ್ಲದೆ, ಗ್ರೀನ್ ಸ್ಟೀಲ್‌ಗೆ ಜಾಗತಿಕ ಮಾರುಕಟ್ಟೆಯನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳಿತು. ನೀತಿಯ ಚೌಕಟ್ಟುಗಳು, ಹೂಡಿಕೆ ಮತ್ತು ಪರಿಸರಪೂರಕ ಉಕ್ಕು ತಯಾರಿಕೆಯ ಅಳವಡಿಕೆಯನ್ನು ವಿಸ್ತರಿಸುವಲ್ಲಿ ಜಂಟಿ ಉಪಕ್ರಮಗಳ ಪಾತ್ರವನ್ನು ಎರಡೂ ದೇಶಗಳು ಒತ್ತಿ ಹೇಳಿದವು.
ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗದಲ್ಲಿಯೂ ಭಾರತದ ಜತೆ ಕೆಲಸ ಮಾಡಲು ಯುರೋಪ್ ಒಕ್ಕೂಟ ಉತ್ಸುಕವಾಗಿದ್ದು, ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ, ವಿಶೇಷವಾಗಿ ಇಂಗಾಲವನ್ನು ಕಡಿಮೆ ಹೊರಸೂಸುವ ಉಕ್ಕಿನ ಉತ್ಪಾದನೆ, ಇಂಗಾಲದ ನಿಯಂತ್ರಣ ಮತ್ತು ಸುಧಾರಿತ ಉತ್ಪಾದನಾ ತಂತ್ರಗಳಲ್ಲಿ ಎರಡೂ ಪ್ರದೇಶಗಳಲ್ಲಿ ಶೈಕ್ಷಣಿಕ ಮತ್ತು ಕೈಗಾರಿಕೆಗಳ ನಡುವಿನ ಸಹಕಾರವನ್ನು ಹೆಚ್ಚಿಸುವಲ್ಲಿ ಪರಸ್ಪರ ಸಹಮತ ವ್ಯಕ್ತವಾಯಿತು.
ಹಸಿರು ಭವಿಷ್ಯಕ್ಕಾಗಿ ಒಗ್ಗಟ್ಟಿನ ದುಡಿಮೆ:
ಭಾರತ- ಯುರೋಪ್ ಒಕ್ಕೂಟದ ಕೈಗಾರಿಕಾ ಸಹಯೋಗವನ್ನು ಬಲಪಡಿಸುವ ಬದ್ಧತೆಯೊಂದಿಗೆ ಉನ್ನತ ಮಟ್ಟದ ಸಭೆಯು ಮುಕ್ತಾಯವಾಯಿತು. “ಒಟ್ಟಾಗಿ, ನಾವು ಎಲ್ಲರಿಗೂ ಹಸಿರು ಮತ್ತು ಹೆಚ್ಚು ಆಶಾದಾಯಕವಾದ ಭವಿಷ್ಯವನ್ನು ಕಂಡುಕೊಳ್ಳಬೇಕು” ಎಂದು ಕೇಂದ್ರ ಸಚಿವರು ಹೇಳಿದರಲ್ಲದೆ, ಭಾರತದಲ್ಲಿ ವಿಪುಲವಾಗಿ ಬೆಳೆಯುತ್ತಿರುವ ಉಕ್ಕು, ಎಲೆಕ್ಟ್ರಿಕ್ ವಾಹನ ಹಾಗೂ ಎಲೆಕ್ಟ್ರಿಕ್ ಬ್ಯಾಟರಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಯುರೋಪಿಯನ್ ಉದ್ಯಮಿದಾರರನ್ನು ಮುಕ್ತವಾಗಿ ಆಹ್ವಾನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ವಿಕಸಿತ ಭಾರತ 2047 ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗಳ ಅಡಿಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಭಾರತದ ಕಾರ್ಯತಂತ್ರದ ದೃಷ್ಟಿಯೊಂದಿಗೆ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಪಾಲುದಾರಿಕೆಯು ಸುಸ್ಥಿರ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಿದ್ಧವಾಗಿದೆ ಎಂದು ಸಚಿವ ಕುಮಾರಸ್ವಾಮಿ ಯುರೋಪ್ ಒಕ್ಕೂಟಕ್ಕೆ ಒತ್ತಿ ಹೇಳಿದರು.
ಸಭೆಯಲ್ಲಿ ಭಾರತದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯಗಳ ಉನ್ನತ ಅಧಿಕಾರಿಗಳು, ಯುರೋಪ್ ಒಕ್ಕೂಟದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…