ದೇಶ- ವಿದೇಶ

ನಾಳೆ ಕೇಂದ್ರ ಬಜೆಟ್‌ : ಕರ್ನಾಟಕದ ರಾಜ್ಯದ ನಿರೀಕ್ಷೆಗಳೇನು?

ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಧ್ಯಾಹ್ನ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ ಸರ್ಕಾರದ ಮೂರನೇ ಅವಧಿಯ ಎರಡನೇ ಪೂರ್ಣ ಬಜೆಟ್ ಆಗಿದ್ದು, ದೇಶದ ಆರ್ಥಿಕ ನೀತಿ, ತೆರಿಗೆ ಸುಧಾರಣೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ರಾಜ್ಯಗಳಿಗೆ ಅನುದಾನದ ಬಗ್ಗೆ ನಿರ್ಣಯಗಳು ಇರಲಿವೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಮತ್ತು ಜನರು ಈ ಬಜೆಟ್‌ನಿಂದ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ನಾಯಕರು ಕೇಂದ್ರಕ್ಕೆ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ.

ಕರ್ನಾಟಕದ ಪ್ರಮುಖ ನಿರೀಕ್ಷೆಗಳು ಇಲ್ಲಿವೆ
ನೀರಾವರಿ : ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹದಾಯಿ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಮಾನ್ಯತೆ ನಿರೀಕ್ಷೆ

ಭದ್ರಾ ಮೇಲ್ದಂಡೆ : 2023ರಲ್ಲಿ ಘೋಷಣೆಯಾಗಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಗೆ ಆಗ್ರಹ

ಬೆಂಗಳೂರು ಮೆಟ್ರೋ : ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರದ ಆರ್ಥಿಕ ನೆರವು. ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನ

ಹೈಸ್ಪೀಡ್ ರೈಲು : ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್

ಹಾಸನ ಐಐಟಿ, ಶಿರಾಡಿ ಸುಂರಂಗ, ರಾಯಚೂರು ಏಮ್ಸ್, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ನಿರೀಕ್ಷೆ

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ನಿರೀಕ್ಷೆ, ಮೈಸೂರು- ಕುಶಾಲನಗರ ಹೊಸ ರೈಲು ಯೋಜನೆ

ಅನುದಾನ ಕೊರತೆಯಿಂದ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿವೆ. ರಾಜ್ಯದ ಕೆಲವು ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ಶೇ 90ರಷ್ಟು ಅನುದಾನ ಕೇಂದ್ರದಿಂದಲೇ ಸಿಗಲಿದೆ. ಇದು ಬರಪೀಡಿತ 23 ಜಿಲ್ಲೆಗಳ 150ಕ್ಕೂ ಹೆಚ್ಚು ತಾಲೂಕುಗಳಿಗೆ ವರದಾನವಾಗಲಿದೆ.

2023ರಲ್ಲಿ ಚುನಾವಣೆ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸ್ವತಃ ಕೇಂದ್ರ ಸರ್ಕಾರವೇ ಘೋಷಣೆ ಮಾಡಿದ್ದ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಹಣಬಿಡುಗಡೆ ಮಾಡುವಂತೆ ರಾಜ್ಯ ಸಾಕಷ್ಟು ಬಾರಿ ಮನವಿ ಮಾಡಿದೆ. ಘೋಷಣೆ ಮಾಡಿದ್ದ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಈ ಬಜೆಟ್ ನಲ್ಲಿ ಉತ್ತರ ಸಿಗಬಹುದಾ ಎಂಬ ನಿರೀಕ್ಷೆ ರಾಜ್ಯದ ಜನರಿಗಿದೆ. ಇನ್ನು ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಅನುಷ್ಠಾನಕ್ಕೆ ಕೇಂದ್ರ ಸರಕಾರ ಅಧಿಕೃತ ಮುದ್ರೆ ಒತ್ತಬೇಕಿದೆ.

ರೈಲ್ವೆ ಮತ್ತು ಕರಾವಳಿ ಅಭಿವೃದ್ಧಿಗೆ ಬೂಸ್ಟ್?
ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಾರಿ ಹೆಚ್ಚಿನ ಬಲ ಸಿಗುವ ಸಾಧ್ಯತೆಯಿದೆ. ಧಾರವಾಡ-ಕಿತ್ತೂರು-ಬೆಳಗಾವಿ, ಗಿಣಿಗೇರಾ-ರಾಯಚೂರು ಮಾರ್ಗಗಳ ಜೊತೆಗೆ ಕಲಬುರಗಿ ರೈಲ್ವೆ ವಿಭಾಗದ ಕನಸು ನನಸಾಗಬೇಕಿದೆ. ಇನ್ನು 360 ಕಿಲೋ ಮೀಟರ್ ಉದ್ದದ ಕಡಲ ತೀರ ಹೊಂದಿದ್ದರೂ ಅಭಿವೃದ್ಧಿ ಕಾಣದ ಕರ್ನಾಟಕದ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ಕೈಗಾರಿಕೆಗಳಿಗೆ ಪೂರಕವಾಗಿ ಉಕ್ಕಿನ ಪೂರೈಕೆಗೆ ರಿಯಾಯಿತಿ ಸಿಗಬಹುದು ಎನ್ನಲಾಗುತ್ತಿದೆ.

ಅತಿವೃಷ್ಟಿ,ಬರ ಮತ್ತು ಆರ್ಥಿಕ ಸವಾಲುಗಳು
ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚುತ್ತಿದೆ, ನಿರಂತರ ಅತಿವೃಷ್ಟಿ ಮತ್ತು ಪ್ರವಾಹದಿಂದ ಆರ್ಥಿಕತೆ ನಲುಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆಯಾಗಬೇಕಿದೆ. ಗುಜರಾತ್, ಯುಪಿ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬುದು ಉದ್ಯಮ ಕ್ಷೇತ್ರದ ಒತ್ತಾಯವಾಗಿದೆ.

ಒಟ್ಟಿನಲ್ಲಿ 2026ರ ಬಜೆಟ್ ಕರ್ನಾಟಕದ ಪಾಲಿಗೆ ಕೇವಲ ಭರವಸೆಯ ಮೂಟೆಯಾಗುತ್ತಾ ಅಥವಾ ನಿಜವಾಗಿಯೂ ಅಭಿವೃದ್ಧಿಯ ಹಾದಿ ತೆರೆಯುತ್ತಾ ಎಂಬುದು ಭಾನುವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಲಂಚಕ್ಕೆ ಬೇಡಿಕೆ : ಪಿಎಸ್ಐ ಚೇತನ್ ಲೋಕಾ ಬಲೆಗೆ

ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…

2 hours ago

ಪೊಲೀಸ್‌ ದಾಳಿ : ಮೈಸೂರಲ್ಲಿ ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳ ಪತ್ತೆ

ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…

2 hours ago

ಚಿನ್ನಾಭರಣ ಪಡೆದು ವಂಚನೆ : ಮಾಲೀಕನ ಬಂಧನ

ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…

2 hours ago

ಐತಿಹಾಸಿಕ ಮಳವಳ್ಳಿ ಸಿಡಿ ಜಾತ್ರಾ ಮಹೋತ್ಸವ ಸಂಪನ್ನ

ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…

4 hours ago

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…

4 hours ago

ಕುಸಿದ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಹಾಕುಸಿತ ಮುಂದುವರಿದಿದೆ. ಶುಕ್ರವಾರ ಗ್ರಾಮ್‌ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ…

4 hours ago