ದೇಶ- ವಿದೇಶ

ಗಡ್ಕರಿ ಭೇಟಿ ಮಾಡಿದ ಎಚ್‌ಡಿಕೆ : ರಾಜ್ಯದ ವಿವಿಧ ಹೆದ್ದಾರಿಗೆ ನೆರವು ಕೋರಿಕೆ

ಹೊಸದಿಲ್ಲಿ : ಬೆಂಗಳೂರು ಮಹಾನಗರದಲ್ಲಿ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣ ಸೇರಿದಂತೆ ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಹಾಗೂ ರಾಜ್ಯದ ಪ್ರಮುಖ ಸಾರಿಗೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಗಡ್ಕರಿ ಅವರ ನಿವಾಸಕ್ಕೆ ತೆರಳಿದ ಸಚಿವ ಕುಮಾರಸ್ವಾಮಿ ಅವರು, ಅತಿ ಮುಖ್ಯವಾಗಿ ಬೆಂಗಳೂರಿಗೆ ಅತ್ಯಗತ್ಯವಾಗಿರುವ ಇವೆರಡೂ ಯೋಜನೆಗಳ ಬಗ್ಗೆ ಹೆದ್ದಾರಿ ಸಚಿವರ ಜತೆ ದೀರ್ಘ ಸಮಾಲೋಚನೆ ನಡೆಸಿದರು. ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರ ಮನವಿಗೆ ಹೆದ್ದಾರಿ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು.

ನಗರದ ಸಂಚಾರ ದಟ್ಟಣಿಯನ್ನು ನಿವಾರಿಸುವ ಸಲುವಾಗಿ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಅತ್ಯಾಧುನಿಕ ಭೂಗತ ರಸ್ತೆ ಜಾಲ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಬೆಂಗಳೂರು ನಗರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ದೇಶದ ಎಲ್ಲಾ ರಾಜ್ಯಗಳಿಂದ ಜನರು ಉದ್ಯೋಗ, ಜೀವನೋಪಾಯ ಅರಸಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ನಗರದಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಭೂಗತ ರಸ್ತೆ ಜಾಲ ಹಾಗೂ ಫೆರಿಫೆರಲ್‌ ರಿಂಗ್ ರಸ್ತೆ ನಿರ್ಮಾಣ ನಗರಕ್ಕೆ ಅತ್ಯಗತ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ನಗರದ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಇದನ್ನು ಕಡಿಮೆ ಮಾಡಲು ಇವೆರಡೂ ಯೋಜನೆಗಳ ಶಾಶ್ವತ ಪರಿಹಾರಗಳಾಗಿವೆ. ನಗರದ ಪ್ರಮುಖ ವಲಯಗಳನ್ನು ಸಂಪರ್ಕಿಸುವ ಈ ಯೋಜನೆಗಳು ಅವಶ್ಯಕವಾಗಿವೆ. ಈ ಪರಿವರ್ತನಾತ್ಮಕ ಮೂಲಸೌಕರ್ಯವು ಬೆಂಗಳೂರಿನ ಭವಿಷ್ಯದ ಅಭಿವೃಧ್ಧಿಗೆ ಹೆಚ್ಚು ಸಹಕಾರಿ ಆಗಲಿದೆ. ಸುಧಾರಿತ ಮತ್ತು ದೀರ್ಘಕಾಲೀನ ಸುಸ್ಥಿರ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಚಿವರು ಹೆದ್ದಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಶಿರಾಡಿ ಘಾಟ್ ರಸ್ತೆ ಯೋಜನೆ ಶೀಘ್ರ ಪೂರ್ಣಗೊಳಿಸಲು ಮನವಿ
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರವಾದ ಮಂಗಳೂರು ನಡುವೆ ಸುಗಮ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಯೋಜನೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರು ಗಡ್ಕರಿ ಅವರಲ್ಲಿ ಮನವಿ ಮಾಡಿದರು.

ಕಾಮಗಾರಿ ನಿಧಾನವಾಗುತ್ತಿರುವುದರಿಂದ ಎರಡೂ ನಗರಗಳ ನಡುವೆ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಆಗಿದೆ. ಸುಗಮ ಸಂಚಾರ ಸಾಧ್ಯವಾಗದೆ ವಾಹನ ಸವಾರರು, ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು ಎಂದು ಕುಮಾರಸ್ವಾಮಿ ಅವರು ಕೋರಿದರು.

ಈ ಕೆಳಕಂಡ ಹೆದ್ದಾರಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಹೆದ್ದಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು.

ಸುಗಮ ಸಂಚಾರ ಮತ್ತು ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 75 (ಕುಣಿಗಲ್ ವಿಭಾಗ) ಅನ್ನು ಮೇಲ್ದರ್ಜೆಗೇರಿಸವುದು.

ಚನ್ನರಾಯಪಟ್ಟಣದಿಂದ ಮಕುಟಕ್ಕೆ (ರಾಜ್ಯ ಹೆದ್ದಾರಿ ಸಂಖ್ಯೆ 8) ಅನ್ನು ಹೊಸ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿ ಮಾಡುವುದು.

ಜೇವರ್ಗಿಯಿಂದ ಶೋರಾಪುರಕ್ಕೆ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು.

ರಾಷ್ಟ್ರೀಯ ಹೆದ್ದಾರಿ 66 (ಅಂಕೋಲಾ ತಾಲೂಕು) ನ ಶಿರೂರು ಘಾಟ್ ವಿಭಾಗ, ಹಾಸನ-ಸಕಲೇಶಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವಿಭಾಗ, ಕುಮಟಾ ಬಳಿಯ ಬರ್ಗಿ ಘಾಟ್ ವಿಭಾಗದಲ್ಲಿ ಭೂ ಕುಸಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಜೋಗಿಹಳ್ಳಿ ಬಳಿ ಮೇಲು ಸೇತುವೆ ನಿರ್ಮಾಣ.

ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಗೇಟ್ (ರಾಷ್ಟ್ರೀಯ ಹೆದ್ದಾರಿ 275) ಗೆ ಸಂಪರ್ಕಿಸುವ ರೇಲ್ವೆ ಕ್ರಾಸಿಂಗ್‌ (LC-64) ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ, ರಸ್ತೆಗಳ ಮೇಲಿನ ಒತ್ತಡ, ಸಂಚಾರ ತಪ್ಪಿಸಲು ಮಂಡ್ಯ ನಗರಕ್ಕೆ ರಿಂಗ್ ರಸ್ತೆ (ದಕ್ಷಿಣ ಬೈಪಾಸ್) ನಿರ್ಮಾಣ.

ರಾಷ್ಟ್ರೀಯ ಹೆದ್ದಾರಿ 150A ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ 275 (ಬೆಂಗಳೂರು-ಮೈಸೂರು ರಸ್ತೆ) ನ ಕಿ.ಮೀ. 595.260 ರಿಂದ ಪಾಂಡವಪುರ ಪಟ್ಟಣಕ್ಕೆ ಉದ್ದೇಶಿತ ಬೈಪಾಸ್ ರಸ್ತೆಗಾಗಿ ವಿವರವಾದ ಯೋಜನಾ ವರದಿ (DPR) ಪ್ರಸ್ತುತ ಸಿದ್ಧತೆ.

ಗಡ್ಕರಿ ಅವರಿಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಕುಮಾರಸ್ವಾಮಿ ಅವರು ಗಡ್ಕರಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

 

ಆಂದೋಲನ ಡೆಸ್ಕ್

Recent Posts

ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕಿದ್ದ 7 ಅಸ್ಥಿಪಂಜರ ಎಫ್‌ಎಸ್‌ಎಲ್‌ಗೆ ರವಾನೆ

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.…

25 seconds ago

ಕೇರಳ ವಿಧಾನಸಭೆ ಚುನಾವಣೆ: ಶೋಭಾ ಕರಂದ್ಲಾಜೆಗೆ ಮಹತ್ವದ ಜವಾಬ್ದಾರಿ

ನವದೆಹಲಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಿತಿನ್‌ ನಬಿನ್‌ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿದ್ದಾರೆ.…

20 mins ago

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ ಘೋಷಣೆ

ಕೇಪ್‌ ಕೆನವೆರೆಲ್:‌ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್‌ ನಿವೃತ್ತರಾಗಿದ್ದಾರೆ.…

48 mins ago

ಹನೂರು| ಪಾದಯಾತ್ರೆ ಮಾಡುವ ವೇಳೆ ಚಿರತೆ ದಾಳಿ: ವ್ಯಕ್ತಿ ಸಾವು

ಮಹಾದೇಶ್‌ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

59 mins ago

ತೆಂಗಿನ ಮರದಿಂದ ಬಿದ್ದು ನರಳಾಡಿದ ಯುವಕನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಸ್ನೇಹಿತರು

ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…

1 hour ago

ಭಣಗುಡುತ್ತಿದ್ದ ರಾಮನಗುಡ್ಡ ಕೆರೆಗೆ ಜೀವಕಳೆ: 30 ವರ್ಷಗಳ ಬಳಿಕ ರೈತರ ಮೊಗದಲ್ಲಿ ಹರ್ಷ

ಮಹಾದೇಶ್‌ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…

2 hours ago