ದೇಶ- ವಿದೇಶ

ಭಾರತದ ಕೊನೆಯ ಭಾಗಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ HD ದೇವೇಗೌಡರು

ಪ್ರಧಾನಿ ಆಗಿದ್ದಾಗ ಉದ್ಘಾಟಿಸಿದ್ದ ಉರಿ ಜಲ ವಿದ್ಯುತ್ ಘಟಕಕ್ಕೆ ಭೇಟಿ

ಶ್ರೀನಗರ – ಬಾರಮುಲ್ಲಾ ರೈಲಿನಲ್ಲಿ ಪ್ರಯಾಣ; ಗೌಡರೇ ಮಂಜೂರು ಮಾಡಿದ್ದ ರೈಲ್ವೆ ಯೋಜನೆ

ನಾಳೆ ದಾಲ್ ಸರೋವರ, ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ

ನವದೆಹಲಿ/ಶ್ರೀನಗರ: ತಾವು ಪ್ರಧಾನಿಗಳಾದ 28 ವರ್ಷಗಳ ನಂತರ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕಣಿವೆ ರಾಜ್ಯ ಕಾಶ್ಮೀರಕ್ಕೆ ಭೇಟಿ ನೀಡಿ ದೇಶದ ಕೊನೆಯ ಭಾಗದಲ್ಲಿರುವ ಉರಿ ಜಲವಿದ್ಯುತ್ ಘಟಕವನ್ನು ಖುದ್ದು ವೀಕ್ಷಿಸಿದರು.

ಬುಧವಾರವೇ ಶ್ರೀನಗರಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿಗಳು, 28 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಬೆಳಗ್ಗೆಯೇ ಶ್ರೀನಗರದಿಂದ ಬಾರಮುಲ್ಲಾಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿ; ತಾವು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಈ ರೇಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ್ದನ್ನು ನೆನಪು ಮಾಡಿಕೊಂಡರು.

ಬಾರಾಮುಲ್ಲಾದಿಂದ ಉರಿಗೆ ತೆರಳಿದ ಅವರು; ಅಲ್ಲಿನ ರಾಷ್ಟ್ರೀಯ ಜಲವಿದ್ಯುತ್ ಉತ್ಪಾದನಾ ಘಟಕ (National Hydroelectric Power Corporation Private Limited- NHPC) ಕ್ಕೆ ಭೇಟಿ ಕೊಟ್ಟರು. 480 ಮೆಗಾವ್ಯಾಟ್ ಸಾಮರ್ಥ್ಯದ ಈ ವಿದ್ಯುತ್ ಘಟಕವೂ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಉದ್ಘಾಟನೆ ಆಗಿತ್ತು. ಈ ವಿದ್ಯುತ್ ಉತ್ಪಾದನಾ ಘಟಕವೂ ಉರಿಯ ಝಿಲಂ ನದಿ ದಂಡೆಯಲ್ಲಿ, ಭಾರತ – ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆಗೆ (LOC) ಅತಿ ಸಮೀಪದಲ್ಲಿದೆ.

ವಿದ್ಯುತ್ ಸ್ಥಾವರದ ಉದ್ದಗಲಕ್ಕೂ ತೆರಳಿದ ಮಾಜಿ ಪ್ರಧಾನಿಗಳು, ತಾವು ಘಟಕಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಸ್ಮರಣೆ ಮಾಡಿಕೊಂಡರಲ್ಲದೆ; ಅಲ್ಲಿನ ಸಿಬ್ಬಂದಿ, ಅಧಿಕಾರಿಗಳ ಜತೆ ಅಂದಿನ ಸಂದರ್ಭವನ್ನು, ಸೇನೆಯ ಎಚ್ಚರಿಕೆಯನ್ನು ಲೆಕ್ಕಿಸದೆ ಘಟಕದ ಸುರಂಗಕ್ಕೆ ಭೇಟಿ ಕೊಟ್ಟಿದ್ದನ್ನು ನೆನಪು ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು; ನಾನು ಪ್ರಧಾನಿ ಸ್ಥಾನದಿಂದ ಕೆಳಗಿಳಿದ 28 ವರ್ಷಗಳ ನಂತರ ನಾನು ಕಾಶ್ಮೀರಕ್ಕೆ ಭೇಟಿ ನೀಡಿದ್ದೇನೆ. ಅಂದಿನ ಕಾಶ್ಮೀರಕ್ಕೂ ಇಂದಿನ ಕಾಶ್ಮೀರಕ್ಕೂ ಬಹಳಷ್ಟು ವ್ಯತ್ಯಾಸ ಕಾಣುತ್ತಿದೆ. ನಾನು ಪ್ರಧಾನಿ ಆಗಿದ್ದಾಗ 13 ಫೆಬ್ರವರಿ 1997ರಂದು ಈ ಘಟಕವನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದೆ. ನಿರ್ಮಾಣ ಹಂತದಲ್ಲಿದ್ದ ಈ ಘಟಕಕ್ಕೆ ಎರಡು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಆ ಭೇಟಿಗಳು ನನ್ನ ಪಾಲಿಗೆ ರೋಚಕ ಅನುಭವ ಎಂದು ಹೇಳಬಹುದು. ಮತ್ತೆ ಈ ವಿದ್ಯುತ್ ಘಟಕಕ್ಕೆ ಭೇಟಿ ನೀಡಿದ್ದು ಬಹಳ ಸಂತೋಷ ಉಂಟು ಮಾಡಿದೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿಗಳು ಈ ವಿದ್ಯುತ್ ಘಟಕದ ಉದ್ಘಾಟನಾ ಫಲಕದ ಮುಂದೆ ನಿಂತು ಬಹಳ ಸಂತೋಷದಿಂದ ಫೋಟೋ ತೆಗೆಸಿಕೊಂಡರು. ಅಂದಿನ ಕಾರ್ಯಕ್ರಮದ ಕ್ಷಣಗಳನ್ನು ಅಧಿಕಾರಿಗಳ ಜತೆ ಹಂಚಿಕೊಂಡರು. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತರು.

ರೈಲು ಪ್ರಯಾಣದ ಬಗ್ಗೆ ಸಂತಸ:

ಶ್ರೀನಗರ – ಬಾರಮುಲ್ಲಾ ನಡುವಿನ ರೈಲು ಪ್ರಯಾಣದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು; ತಾವು ಪ್ರಧಾನಿಯಾಗಿದ್ದಾಗ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಈ ರೇಲ್ವೆ ಮಾರ್ಗಕ್ಕೆ ಮಂಜೂರಾತಿ ನೀಡಿದ ಸಂದರ್ಭವನ್ನು ಮೆಲುಕು ಹಾಕಿದರು.

 


1996, 1997ರ ಸಂದರ್ಭದಲ್ಲಿ ಕಾಶ್ಮೀರದ ಜನರು ಸಂಪರ್ಕ ಜಾಲದಿಂದ ವಂಚಿತರಾಗಿದ್ದರು. ಭಯೋತ್ಪಾದಕ ಚಟುವಟಿಕೆಗಳಿಂದ ಜರ್ಜರಿತರಾಗಿದ್ದರು. ಆ ಸಂದರ್ಭದಲ್ಲಿ ಬಾರಾಮುಲ್ಲಾ ಮತ್ತು ಶ್ರೀನಗರ ನಡುವೆ ರೇಲ್ವೆ ಮಾರ್ಗ ನಿರ್ಮಿಸುವ ಯೋಜನೆಗೆ ನಾನು ಮಂಜೂರಾತಿ ಕೊಟ್ಟೆ. ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದೆ. ಇವತ್ತು ಅದೇ ರೈಲು ಮಾರ್ಗದ ರೇಲಿನಲ್ಲಿ ಪ್ರಯಾಣ ಮಾಡಿದ್ದು ನನಗೆ ಮರೆಯಲಾಗದ ಅವಿಸ್ಮರಣೀಯ ಕ್ಷಣ ಎಂದು ಅವರು ಭಾವುಕರಾದರು.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳನ್ನು ರೇಲ್ವೆ ಅಧಿಕಾರಿಗಳು ಆತ್ಮೀಯವಾಗಿ ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ರೇಲ್ವೆ ಮಾರ್ಗದ ಬಗ್ಗೆ, ಜತೆಗೆ ಆಗುತ್ತಿರುವ ಉಪಯೋಗದ ಬಗ್ಗೆ ಮಾಜಿ ಪ್ರಧಾನಿಗಳು ಮಾಹಿತಿ ಪಡೆದುಕೊಂಡರು.

ಬೆಳಗ್ಗೆ 11:30ಕ್ಕೆ ಶ್ರೀನಗರದಲ್ಲಿ ರೈಲು ಹಿಡಿದ ಮಾಜಿ ಪ್ರಧಾನಿಗಳು, 12:30 ಗಂಟೆಗೆ ಬಾರಮುಲ್ಲಾ ತಲುಪಿದರು.

ತಾವು ಪ್ರಧಾನಿಯಾಗಿದ್ದಾಗ ಕಾಶ್ಮೀರದ ರೈತರಿಗಾಗಿ ಒಟ್ಟು ₹200 ಕೋಟಿ ಸಾಲ ಮನ್ನಾ ಮಾಡಿದೆ. ಕಣಿವೆ ರಾಜ್ಯದ ಪ್ರತಿ ರೈತರ ₹50,000 ಸಾಲ ಮನ್ನಾ ಮಾಡಲಾಯಿತು. ಅಂದು ಪ್ರಧಾನಿಯಾಗಿ ರೈತರನ್ನು ಭೇಟಿಯಾಗಿ ಅವರ ಸಂಕಷ್ಟವನ್ನು ಆಲಿಸಿದ್ದೆ. ಅವರಿಗೆ ನೆರವಾಗುವ ಉದ್ದೇಶದಿಂದ ಸಾಲ ಮನ್ನಾ ಮಾಡಲಾಯಿತು ಎಂದು ಮಾಜಿ ಪ್ರಧಾನಿಗಳು ಸುದ್ದಿಗಾರರ ಜತೆ ಮಾತಾಡುತ್ತಾ ಹೇಳಿದರು.

ನಾಳೆ ದಾಲ್ ಸರೋವರ, ಶಂಕರರ ದೇಗುಲಕ್ಕೆ ಭೇಟಿ

ಶುಕ್ರವಾರವೂ ಮಾಜಿ ಪ್ರಧಾನಿಗಳು ಶ್ರೀನಗರದ ದಾಲ್ ಸರೋವರ ಹಾಗೂ ಶ್ರೀ ಶಂಕರಾಚಾರ್ಯ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.

ಬಿ.ಟಿ. ಮೋಹನ್ ಕುಮಾರ್

ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕು ಹೊಸಬೂದನೂರು ಗ್ರಾಮದ ನಾನು ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಎಂಸಿಜೆ) ಮಾಡಿ, 1999ರಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. 1999ರಲ್ಲಿ `ಆಂದೋಲನ' ಪತ್ರಿಕೆಯಲ್ಲಿ ಮೊದಲು ಪೇಜ್ ಡಿಸೈನರ್ ಆಗಿ ಕೆಲಸಕ್ಕೆ ಸೇರಿದ ಅನುಭವ ಪಡೆದು, 2001ರಲ್ಲಿ `ಆಂದೋಲನ' ಪತ್ರಿಕೆಯಲ್ಲೇ ಜಿಲ್ಲಾ ವರದಿಗಾರನಾದೆ. 2001ರಿಂದ 2008ರವರೆಗೆ ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿದ ನಾನು, 2009ರಿಂದ `ಪ್ರಜಾನುಡಿ' ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿ, 2011ರಲ್ಲಿ `ವಿಜಯ ವಾಣಿ' ಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಿಸಿದೆ. ಸುಮಾರು ಮೂರೂವರೆ ವರ್ಷ ಕೆಲಸ ನಿರ್ವಹಿಸಿ, 2015ರಲ್ಲಿ `ರಾಜ್ಯ ಧರ್ಮ' ಪತ್ರಿಕೆಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸಿದೆ. 2019ರಲ್ಲಿ ಮತ್ತೆ `ಆಂದೋಲನ' ಪತ್ರಿಕೆಯ ಮಂಡ್ಯ ಜಿಲ್ಲಾ ಹಿರಿಯ ವರದಿಗಾರನಾಗಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸವಾಗಿದೆ.

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

6 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

7 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

8 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

9 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

10 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

10 hours ago