ದೇಶ- ವಿದೇಶ

ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ : ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ

ನವದೆಹಲಿ : ತಮಿಳುನಾಡಿನ ಡಿಎಂಕೆ ರಾಜಕೀಯ ಸ್ವಾರ್ಥಕ್ಕೆ ದಕ್ಷಿಣದ ರಾಜ್ಯಗಳ ಹಿತ ಬಲಿಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಮೊದಲು ಸಂವಿಧಾನ ತಿದ್ದುಪಡಿ ಮಸೂದೆಗಳ ಬಗ್ಗೆ ಒಪ್ಪಿಗೆ ನೀಡಿದ್ದ ಆ ಪಕ್ಷವು ನಂತರ ಯುಟರ್ನ್‌ ಹೊಡೆಯಿತು. ಇದರಿಂದ ದಕ್ಷಿಣ ರಾಜ್ಯಗಳಿಗೆ ಸಿಕ್ಕಿದ್ದ ಬಂಗಾರದಂಥ ಅವಕಾಶ ತಪ್ಪಿಹೋಯಿತು ಎಂದು ಅವರು ಕಿಡಿಕಾರಿದರು.

ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳು ಜನರಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ಭೀತಿ ಸೃಷ್ಟಿಸುತ್ತಿವೆ ಎಂದರು.

ಕೆಲ ದಿನಗಳ ಹಿಂದೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಕರೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಡಿಎಂಕೆ ನಾಯಕರಿಗೆ ಮಹಿಳಾ ಮೀಸಲು ಹಾಗೂ ಕ್ಷೇತ್ರ ಮರು ವಿಂಗಡಣೆ ಮಸೂದೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆ ಸಭೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷವೂ ವಿರೋಧ ಮಾಡಿರಲಿಲ್ಲ. ಅದಾದ ಮೇಲೆ ಎರಡು-ಮೂರು ದಿನಗಳಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು, “ಈ ಮಸೂದೆಗಳನ್ನು ಪಾಸ್‌ ಮಾಡಲು ಜೂನ್‌ ತಿಂಗಳಲ್ಲಿ ಸಂಸತ್‌ ಅಧಿವೇಶನ ಕರೆಯಿರಿ” ಎಂದು ಕೇಂದ್ರಕ್ಕೆ ಸಲಹೆ ಮಾಡಿದ್ದರು. ಅಂದರೆ, ಅವರಿಗೆ ತಿದ್ದುಪಡಿ ಮಸೂದೆಗಳ ಬಗ್ಗೆ ಒಪ್ಪಿಗೆ ಇತ್ತು ಎಂದಾಯಿತಲ್ಲವೇ? ಈ ಕೂಡಲೇ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ ಚುನಾವಣೆಯಲ್ಲಿ ತನಗೆ ಧಕ್ಕೆ ಆಗಬಹುದೆಂಬ ಕಾರಣಕ್ಕೆ ಆ ಪಕ್ಷವು ಮಸೂದೆಗಳಿಗೆ ಬೆಂಬಲ ನೀಡಲಿಲ್ಲ ಎಂದು ಕುಮಾರಸ್ವಾಮಿ ಅವರು ದೂರಿದರು.

ದಕ್ಷಿಣದ ರಾಜ್ಯಗಳಿಗೆ ಈ ತಿದ್ದುಪಡಿ ಮಸೂದೆಗಳಿಂದ ಅನ್ಯಾಯವಾಗುತ್ತಿದೆ ಎಂದು ಡಿಎಂಕೆ ಹೇಳುತ್ತಿರುವುದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಹಾಗೆ ನೋಡಿದರೆ ಡಿಎಂಕೆಯಿಂದಲೇ ದಕ್ಷಿಣಕ್ಕೆ ಅನ್ಯಾಯವಾಗುತ್ತಿದೆ. ಒಂದು ವೇಳೆ ಅನ್ಯಾಯ ಆಗುವುದೇ ಆಗಿದ್ದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಕ್ಷೇಪ ಎತ್ತಲಿಲ್ಲವೇಕೆ? ನಾಯ್ಡು ಅವರಂತೂ ಮಸೂದೆಗಳಿಗೆ ಮುಕ್ತ ಬೆಂಬಲ ನೀಡಿದರು ಎಂದು ಕುಮಾರಸ್ವಾಮಿ ಮಾಧ್ಯಮಗಳ ಗಮನಕ್ಕೆ ತಂದರು.

ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿ, ರಾಷ್ಟ್ರೀಯ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿರುವ ಈ ಐದು ರಾಜ್ಯಗಳಿಗೆ ಅನ್ಯಾಯ ಆಗಬಾರದೆಂಬ ಏಕೈಕ ಉದ್ದೇಶದಿಂದ ಕೇಂದ್ರವು ಎಲ್ಲರಿಗೂ ಸಮಾನ ನ್ಯಾಯ ನೀಡುವ ಸಲುವಾಗಿ ಪ್ರತೀರಾಜ್ಯದ ಲೋಕಸಭೆ ಕ್ಷೇತ್ರಗಳ ಸಂಖ್ಯೆಯನ್ನು ಸರಾಸರಿ ೫೦%ರಷ್ಟು ಹೆಚ್ಚಿಸುವುದಾಗಿ ಹೇಳಿತು. ಲೋಕಸಭೆಯಲ್ಲಿ ಈ ಬಗ್ಗೆ ಅಮಿತ್‌ ಶಾ ಅವರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ಹೇಳಿದರು. ಹಾಗಿದ್ದರೂ ಕಾಂಗ್ರೆಸ್‌ ಪಕ್ಷವು ತನ್ನ ಪ್ರತಿಷ್ಠೆಗಾಗಿ ತಾನೂ ದಾರಿ ತಪ್ಪಿದ್ದಲ್ಲದೆ, ತನ್ನ ಮಿತ್ರಪಕ್ಷಗಳನ್ನು ಕೂಡ ದಿಕ್ಕುತಪ್ಪಿಸಿತು. ಈಗ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೆ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಸ್ವತಃ ನಾನು ದಕ್ಷಿಣ ರಾಜ್ಯಗಳಿಂದ ಬಂದ ಜನಪ್ರತಿನಿಧಿಯಾಗಿ ಹೇಳುತ್ತಿದ್ದೇನೆ. ದಕ್ಷಿಣದ ಐದು ರಾಜ್ಯಗಳಿಗೆ ಸಿಗಲಿದ್ದ ಸುವರ್ಣಾವಕಾಶವನ್ನು ಡಿಎಂಕೆ ಹಾಳು ಮಾಡಿದೆ. ನಮಗೆ ಸಿಗಲಿದ್ದ ಉತ್ತಮ ಪಾಲು ಸಿಗದಂತೆ ಆ ಪಕ್ಷ ಮಾಡಿ ಅನ್ಯಾಯವೆಸಗಿದೆ. ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಹೆಚ್ಚುತ್ತಿತ್ತು. ಈ ಅವಕಾಶ ತಪ್ಪಿಹೋಗಿದೆ. ಇದನ್ನು ಡಿಎಂಕೆ ಅಥವಾ ಕಾಂಗ್ರೆಸ್‌ ಪಕ್ಷಗಳಿಂದ ಸರಿಪಡಿಸಲು ಸಾಧ್ಯವೇ? ಈ ಬ್ಗಗೆ ರಾಹುಲ್‌ ಗಾಂಧಿ ಉತ್ತರಿಸಬೇಕಿದೆ ಎಂದು ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಪ್ರತೀರಾಜ್ಯಕ್ಕೂ ಶೇ.50ರ ಅನುಪಾತದಲ್ಲಿ ಕ್ಷೇತ್ರಗಳನ್ನು ಹೆಚ್ಚಿಸಿದಾಗ ಉತ್ತರದ ಕೆಲ ರಾಜ್ಯಗಳ ಸಂಖ್ಯೆಯ ಬಗ್ಗೆ ಸುಳ್ಳು ಸಂಕಥನಗಳನ್ನು ಸ್ವತಃ ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ವ್ಯವಸ್ಥಿತವಾಗಿ ಹರಡಿದವು. ಡಿಎಂಕೆ ಹಠಮಾರಿತನದಿಂದ ಐದು ದಕ್ಷಿಣ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಿದೆ. ನೆಹರು ಕಾಲದಿಂದ ನಡೆದುಕೊಂಡು ಬಂದ ಡಿಲಿಮಿಟೇಶನ್‌ ವ್ಯವಸ್ಥೆ ಸುಧಾರಣೆಗೆ ಬೆಂಬಲ ನೀಡುವ ಬದಲು, ತನ್ನ ರಾಜ್ಯದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿತು. ಕರ್ನಾಟಕ, ಕೇರಳಂ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಸ್ವತಃ ತಮಿಳುನಾಡಿಗೆ ಆಗಿರುವ ಈ ಐತಿಹಾಸಿಕ ಅನ್ಯಾಯಕ್ಕೆ ನೇರವಾಗಿ ಡಿಎಂಕೆ ಪಕ್ಷವೇ ಕಾರಣ ಎಂದು ಅವರು ಅರೋಪಿಸಿದರು.

 

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

11 mins ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

17 mins ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

21 mins ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

11 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

12 hours ago