ದೇಶ- ವಿದೇಶ

ಲಂಚ ಪ್ರಕರಣ: ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ ಐಎಎಸ್‌ ಅಧಿಕಾರಿ ಮಂಜುನಾಥ್‌

ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಅಮಾನತುಗೊಂಡಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಈಚೆಗೆ ಕರ್ನಾಟಕ ಹೈಕೋರ್ಟ್‌ “ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಕ್ಕೆ ಲಂಚ ಪಡೆಯುವುದು ನಿಯಮವಾಗಿದೆ. ಇದು ಕ್ಯಾನ್ಸರ್‌ಗಿಂತ ಅತ್ಯಂತ ಗಂಭೀರ ರೋಗ” ಎಂದು ಮಂಜುನಾಥ್‌ ಅವರ ಜಾಮೀನು ಮನವಿ ವಜಾ ಮಾಡುವ ವೇಳೆ ಹೇಳಿತ್ತು.

ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ನೂಲಿ ಮತ್ತು ನೂಲಿ ಸಂಸ್ಥೆಯ ಮೂಲಕ ಸಲ್ಲಿಸಲಾಗಿರುವ ವಿಶೇಷ ಮನವಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಜಾಮೀನು ನೀಡಲು ನಿರಾಕರಿಸಿ 2022ರ ಆಗಸ್ಟ್‌ 3ರಂದು ಆದೇಶಿಸಿರುವ ಕರ್ನಾಟಕ ಹೈಕೋರ್ಟ್‌ ತೀರ್ಪು ಮತ್ತು ಭ್ರಷ್ಟಾಚಾರ ನಿಗ್ರಹ ದಳವು ದಾಖಲಿಸಿರುವ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.

ಭೂವಿವಾದಕ್ಕೆ ಸಂಬಂಧಿಸಿದ ಆದೇಶದ ದಾಖಲೆಯನ್ನು ಮೇಲ್ಮನವಿ ವಿಭಾಗದಲ್ಲಿ ವಶ ಪಡೆಸಿಕೊಳ್ಳಲಾಗಿದೆಯೇ ವಿನಾ ಮಂಜುನಾಥ್‌ ಅವರ ಕಚೇರಿಯಲ್ಲಿ ಅಲ್ಲ. ಆದೇಶ ಅಂತಿಮಗೊಂಡ ಬಳಿಕ ಅದಕ್ಕೆ ಸಹಿ ಮಾಡಿ, ಸಾಮಾನ್ಯ ನ್ಯಾಯಾಲಯದ ದಿನಗಳಲ್ಲಿ ಆದೇಶ ಓದಲಾಗುತ್ತದೆ. ಇದಕ್ಕೂ ಮುನ್ನ, ಆದೇಶ ಕರಡು ಸಿದ್ಧಪಡಿಸಿ ಅದನ್ನು ಕಾನೂನು ವಿಭಾಗಕ್ಕೆ ಕಳುಹಿಸಿ ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯು ಕಾಲಾವಕಾಶ ಹಿಡಿಯುತ್ತದೆ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕಾಯ್ದಿರಿಸಲಾದ ಆದೇಶಗಳನ್ನು ಪ್ರಕಟಿಸಲಾಗಿದೆ. ಮಾರ್ಚ್‌ನಲ್ಲಿ ಕಾಯ್ದಿರಿಸಲಾಗಿದ್ದ ಆದೇಶಗಳನ್ನು ಕೈಗೆತ್ತಿಕೊಳ್ಳಲಾಗಿರಲಿಲ್ಲ. ಹೀಗಾಗಿ, ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕರಡು ಆದೇಶ ಸಿದ್ಧಪಡಿಸಿರಲಿಲ್ಲ ಎಂದು ಮಂಜುನಾಥ್‌ ಅವರ ಮನವಿಯಲ್ಲಿ ಜಾಮೀನು ಕೋರಿಕೆಗೆ ಕಾರಣ ನೀಡಲಾಗಿದೆ.

ಮುಂದುವರಿದು, ಜಿಲ್ಲಾಧಿಕಾರಿ ಅಡಿ 36 ಇಲಾಖೆಗಳು ಬರುತ್ತವೆ. ಹಲವಾರು ಜವಾಬ್ದಾರಿಗಳನ್ನು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಡಿಸಿ ಅವರು ನಿಭಾಯಿಸಬೇಕಾಗುತ್ತದೆ. ಈ ಪೈಕಿ ಕಂದಾಯ ವಿಚಾರಗಳಿಗೆ ಸಂಬಂಧಿಸಿದಂತೆ ಕಲಾಪ ನಡೆಸುವುದೂ ಸೇರಿದೆ. ಹೀಗಾಗಿ, ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಸಿದ್ದ ಕಲಾಪಗಳಿಗೆ ಸಂಬಂಧಿಸಿದ ಆದೇಶ ಮಾಡಲಾಗಿದೆಯೇ ವಿನಾ ಮಾರ್ಚ್‌ನಲ್ಲಿನ ಪ್ರಕರಣಗಳ ಕುರಿತು ಆದೇಶ ಮಾಡಲು ಮುಂದಾಗಿರಲಿಲ್ಲ ಎಂದು ವಿವರಿಸಲಾಗಿದೆ.

ಎಸಿಬಿ ಸೃಷ್ಟಿಸಿದ್ದ ಟ್ರ್ಯಾಪ್‌ನಲ್ಲಿ ಮಂಜುನಾಥ್‌ ಅವರು ಸಿಲುಕಿರಲಿಲ್ಲ. ಈ ವಿಚಾರವನ್ನು ಟ್ರ್ಯಾಪ್‌ ನಡೆಸಲಾದ ದಿನವೇ ದೂರುದಾರ ಅಜಂ ಪಾಷಾ ಅವರು ಎಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಈ ಸಂಬಂಧದ ವಿಡಿಯೊ ಎಸಿಬಿ ಬಳಿ ಇದ್ದು, ಅದನ್ನು ಇಲ್ಲಿಯವರೆಗೆ ಉದ್ದೇಶಪೂರ್ವಕವಾಗಿ ಪೀಠಕ್ಕೆ ಸಲ್ಲಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿದೆ.

ಲಂಚಕ್ಕೆ ಬೇಡಿಕೆ ಇಟ್ಟ ಮೊದಲನೇ ಆರೋಪಿಯಾಗಿರುವ ಉಪ ತಹಶೀಲ್ದಾರ್‌ ಪಿ ಎಸ್‌ ಮಹೇಶ್‌ ಅವರಿಗೆ ಜಾಮೀನು ಸಿಕ್ಕಿದೆ. ಎರಡನೇ ಆರೋಪಿಯಾಗಿರುವ ಚಂದ್ರುವಿಗೂ ಜಾಮೀನು ಸಿಕ್ಕಿದೆ. ಹೀಗಾಗಿ, ತಮಗೂ ಜಾಮೀನು ನೀಡಬೇಕು ಎಂದು ಮೂರನೇ ಆರೋಪಿಯಾಗಿರುವ ಮಂಜುನಾಥ್‌ ಕೋರಿದ್ದಾರೆ. ಎಸಿಬಿಯು ನಿಯಮದ ಪ್ರಕಾರ 60 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಮಹೇಶ್‌ ಅವರಿಗೆ ಸೆಷನ್ಸ್‌ ನ್ಯಾಯಾಲಯವು ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿತ್ತು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆಗಸ್ಟ್‌ 3ರಂದು ಮಂಜುನಾಥ್‌ ಅವರ ಜಾಮೀನು ಮನವಿ ವಜಾ ಮಾಡಿತ್ತು. ಇದಕ್ಕೂ ಮುನ್ನ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಜುಲೈ 11ರಂದು ಮಂಜುನಾಥ್‌ ಅವರ ಜಾಮೀನು ಮನವಿಯನ್ನು ವಜಾಗೊಳಿಸಿದ್ದರು. ಜುಲೈ ೪ರಂದು ಮಂಜುನಾಥ್‌ ಅವರನ್ನು ಎಸಿಬಿಯು ಬಂಧಿಸಿದ್ದು, ಅಂದಿನಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಶೀಲ್ದಾರ್‌ ಆಗಿದ್ದ ಪಿ ಎಸ್‌ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರು ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಮಂಜುನಾಥ್‌ ಮೂರನೇ ಆರೋಪಿಯಾಗಿದ್ದಾರೆ.

andolana

Recent Posts

ಮೈಸೂರು: ಅಂಬೇಡ್ಕರ್‌, ಬಾಬು ಜಗಜೀವನರಾಂ ಪ್ರತಿಮೆ ಅನಾವರಣ

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…

21 mins ago

ಸಿಲಿಂಡರ್‌ ಸ್ಫೋಟ : 9 ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಂಭೀರ

ಹುಬ್ಬಳ್ಳಿ : ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…

30 mins ago

ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಕೇಸ್‌ ಮುಗಿದ ಅಧ್ಯಾಯ: ಬಸವರಾಜ ಹೊರಟ್ಟಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್‌…

47 mins ago

ಶಿವರಾಜಕುಮಾರ್ ಚಿತ್ರಕ್ಕೆ ತಮಿಳು ನಿರ್ದೇಶಕ; ಮುಂದಿನ ವರ್ಷ ‘#MB’ ಪ್ರಾರಂಭ

ಶಿವರಾಜಕುಮಾರ್‍ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…

50 mins ago

ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ವಿಜಯ್‍ ರಾಘವೇಂದ್ರ; ‘FIR 6 to 6’ ಟ್ರೇಲರ್‍ ಬಿಡುಗಡೆ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್‍ ಕೊಂಡಾನ’, ‘ಜಾಗ್‍ 101’ ಮತ್ತು…

54 mins ago

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

1 hour ago