ದೇಶ- ವಿದೇಶ

ಅಲ್ಪಸಂಖ್ಯಾತರ ಹೆಸರಿನಲ್ಲಿ 625 ಕೋಟಿ ಗೋಲ್ಮಾಲ್ : ಎಚ್‌ಡಿಕೆ

ಹೊಸದಿಲ್ಲಿ : ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ; ರಾಜ್ಯ ಕಾಂಗ್ರೆಸ್‌ ಸರಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಶಾಸಕರು ಅನುದಾನಕ್ಕಾಗಿ, ಸರಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.

ಹಿಂದೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿದ್ದ ʼತಬರನ ಕಥೆʼ ಎಂಬ ಕಥೆಯನ್ನು ಗಿರೀಶ್‌ ಕಾಸರವಳ್ಳಿ ಅವರು ಸಿನಿಮಾ ಮಾಡಿದ್ದರು. ವಾಚ್‌ ಮನ್‌ ಒಬ್ಬ ತನ್ನ ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ಅಲೆ ಅಲೆದು ಬಸವಳಿಯುವ ಕಥೆ ಅದು. ಅಂಥದ್ದೇ ಪರಿಸ್ಥಿತಿ ರಾಜ್ಯದ ಶಾಸಕರಿಗೂ ಬಂದಿರುವುದು ದುರದೃಷ್ಟಕರ. ಶಾಸಕರು ಯೋಜನೆಗಳಾಗಿ ಮಂತ್ರಿಗಳು, ಎಂಜಿಯರ್‌ ಗಳ ಕಚೇರಿಗಳ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಪರಿಸ್ಥಿತಿ ಹೇಗಾಗಿದೆ ಎಂದರೆ ಆಲಿಬಾಬಾ ಮೂವತ್ತನಾಲ್ಕು ಕಳ್ಳರು ಎನ್ನುವಂಥ ರೀತಿ ಆಗಿದೆ. ಮುಖ್ಯಮಂತ್ರಿ, ಮಂತ್ರಿಗಳು ಕಮೀಷನ್‌ ಉಡಾಯಿಸಿ ಮೋಜು ಮಾಡುತ್ತಿದ್ದರೆ ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆನಿದೆ? ಇದನ್ನು ಪ್ರತಿಪಕ್ಷ ನಾಯಕರು ಹೇಳುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕರು, ಅದರಲ್ಲಿಯೂ ಯೋಜನಾ ಆಯೋಗಬ ಉಪಾಧ್ಯಕ್ಷ ಬಿ.ಆರ್.‌ಪಾಟೀಲ್‌, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಅವರೇ ಈ ಸರಕಾರಕ್ಕೆ ಸರ್ಟಿಫಿಕೇಟ್‌ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ವಸತಿ ಇಲಾಖೆಯದ್ದೇ ಪುರಾಣ. ಜನತೆ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಲಾಗುತ್ತಿದೆ. ಸರಕಾರಕ್ಕೆ ಜನರ ಭಯ ಭಕ್ತಿ ಇಲ್ಲದಾಗಿದೆ.

ಬಿ.ಆರ್.ಪಾಟೀಲ್ ಅವರು ಶಾಸಕರಷ್ಟೇ ಅಲ್ಲ, ಅವರ ಶಾಸಕರಾದಾಗ ನಾವು ಯಾರೂ ಇನ್ನೂ ರಾಜಕರಣಕ್ಕೇ ಬಂದಿರಲಿಲ್ಲ. ಹಿರಿಯ ವ್ಯಕ್ತಿ. ಅವರ ಹಿನ್ನೆಲೆಯನ್ನು ನೋಡಿದ್ದೇವೆ. ದೊಡ್ಡ ಅನುಭವುಳ್ಳ ನಾಯಕರು. ಅಂಥವರ ಕ್ಷೇತ್ರದಲ್ಲಿ 950 ಮನೆಗಳನ್ನು ಶಾಸಕರ ಗಮನಕ್ಕೆ ಬಾರದಂತೆ ವಸತಿ ಇಲಾಖೆಯಿಂದ ನೀಡಿದ್ದಾರೆ! ಪಾಟೀಲ್‌ ಅವರು ಸಚಿವರ ಆಪ್ತ ಕಾರ್ಯದರ್ಶಿಗೆ ಮೊಬೈಲ್‌ ಕರೆ ಮೂಲಕ ಪ್ರಶ್ನೆ ಮಾಡಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್‌ ಆಗಿದೆ. ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಎನ್ನುವವರು ಇದ್ದಾರಾ? ಸರಕಾರ ಎನ್ನುವುದು ಇದೆಯಾ? ಡಿಸಿಎಂ ನೋಡಿದರೆ ವಿಷಯ ತಿಳಿದುಕೊಂಡು ಹೇಳುತ್ತೇನೆ ಎಂದು ಕದ್ದು ಓಡುತ್ತಾರೆ. ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಕೊಟ್ಟಿರುವ ಭರವಸೆ ಈಡೇರಿಲ್ಲ. ವಿರೋಧ ಪಕ್ಷಗಳು ಅಸೂಯೆಯಿಂದ ಮಾತಾಡುತ್ತಿಲ್ಲ. ಸಿಎಂ ಅವರೇ, ನಿಮ್ಮ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ನಿಮ್ಮ ಶಾಸಕರಿಗೆ ತಬರನ ಪರಿಸ್ಥಿತಿ ಬಂದಿದೆ. ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಕಮೀಷನ್ ಕೊಟ್ಟವರಿಗೆ ಮಾತ್ರ ಅನುದಾನ ಸಿಗುತ್ತಿದೆ ಎಂದು ಕೇಂದ್ರ ಸಚಿವರು ನೇರವಾಗಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಒಂದು ಇಲಾಖೆಯಲ್ಲಿ ಈ‌ ಮಟ್ಟಕ್ಕೆ ಅವ್ಯವಹಾರ ಆಗಿದೆ ಎಂದರೆ ರಾಜ್ಯದಲ್ಲಿ ಸಿಎಂ ಎನ್ನುವವರು ಇದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ. ಡಿಸಿಎಂ ಅವರು ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ. ನಾವು ಮಾತ್ರ ಹರಿಶ್ಚಂದ್ರರು ಎಂದು ತಮಗೆ ತಾವೇ ಸರ್ಪಿಫಿಕೇಟ್‌ ಕೊಟ್ಟುಕೊಳ್ಳುತ್ತಿದ್ದಾರೆ. ಕಾಗವಾಡ ಶಾಸಕ ರಾಜುಕಾಗೆ ಕೂಡ ಇದೇ ಆರೋಪ ಮಾಡಿದ್ದಾರೆ. ವಿಶೇಷ ಅನುದಾನ ನೀಡಿ ಕೇಳಿ ಎರಡು ವರ್ಷವಾಯಿತು. ಟೆಂಡರ್ ಮಾಡಲು ಬಿಟ್ಟಿಲ್ಲ, ಹಣವೂ ಬಂದಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಉದ್ದೇಶ ಏನು? ಶಾಸಕಾಂಗ ಪಕ್ಷದಲ್ಲಿ ಅನುದಾನ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಈಗ ಶಾಸಕರಿಗೆ ಕಮೀಷನ್‌ ಕಿರುಕುಳ ಕೊಡುತ್ತಿದ್ದಾರೆ. ಶಾಸಕರು ಕ್ಷೇತ್ರಗಳಿಗೆ ಹೋಗದ ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರು ರಾಜಿನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್‌, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ‌ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಲೆಕ್ಷನ್ ಮಾಡುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

ಹ್ಹಾ.. ಹ್ಹಾ.. ಮುಖ್ಯಮಂತ್ರಿ:

ರಾಯಚೂರಿನಲ್ಲಿ ಮುಖ್ಯಮಂತ್ರಿಗೆ ಶಾಸಕರ ಅನುದಾನದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರೆ, ಮುಖ್ಯಮಂತ್ರಿಗೆ ಅನುದಾನ ಇರುತ್ತದಾ? ಹ್ಹಾ.. ಹ್ಹಾ.. ಎಂದು ಉದ್ಘಾರ ತೆಗೆದರು.
ಎಲ್ಲಿದೆ ವಿಶೇಷ ಅನುದಾನ ಎಂದು ಮಾಧ್ಯಮದವರಿಗೇ ಅವರು ಪ್ರಶ್ನೆ ಕೇಳಿದರು. ಅನುದಾನ ಎಲ್ಲಿಗೆ ಎಂದು ಕೇಳಿದರು. ಅವರನ್ನು ಸಿಎಂ ಅನ್ನಬೇಕಾ? ಈ ಭಾಗ್ಯಕ್ಕೆ ಅವರು ದೇವರಾಜ ಅರಸು ದಾಖಲೆ ಮುರಿಯಲು ಹೊರಟಿದ್ದಾರೆಯೇ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವರು ಟಾಂಗ್‌ ನೀಡಿದರು.

ಮುಖ್ಯಮಂತ್ರಿ ಕಚೇರಿಯಿಂದ ನಿವೃತ್ತ ಐಎಎಸ್‌ ಅಧಿಕಾರಿ ಅತೀಕ್ ಅವರನ್ನು ಯಾಕೆ ತೆಗೆದರು? ಮುಂದಿನ ಮೂರು ವರ್ಷಕ್ಕೆ ₹1000 ಕೋಟಿ ಅನುದಾನದ ಕ್ರಿಯಾ ಯೋಜನೆ ಮಂಜೂರಾತಿ ನೀಡಿದ್ದರು. ಈ ಹಣದಲ್ಲಿ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಎಷ್ಟು ಹಣ ತಿಂದಿದ್ದೀರಿ? ಈ ಅತೀಕ್‌ ಎನ್ನುವ ವ್ಯಕ್ತಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲಾ ಮಾಡಿದ್ದರು ಎನ್ನುವುದು ನನಗೆ ಗೊತ್ತಿದೆ. ಅವರಿಂದ ಏನೇನು ಮಾಡಿಸಿದರು ಎನ್ನುವುದೂ ಗೊತ್ತಿದೆ. ಈ ಸರಕಾರದಲ್ಲಿ ಸರಕಾರಕ್ಕಿಂತಲೂ ದೊಡ್ಡವರು ಇದ್ದಾರೆ ಸಿಎಂ ಅವರ ಬಳಿ. ಸರಕಾರದ ಒಪ್ಪಿಗೆಯೇ ಇಲ್ಲದೆ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ 625ಕ್ಕೂ ಹೆಚ್ಚು ಕೋಟಿ ಹಣ ಬಿಡುಗಡೆ ಆಗಿದೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.

ಸಂಪುಟದ ಒಪ್ಪಿಗೆ ಪಡೆಯದೇ ಹಣ ವೆಚ್ಚ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ ಕೋಟಿ ಕೋಟಿ ಹಣ ಲೂಟಿ ಆಗಿದೆ. ಈ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ? ಎಂದು ಕಿಡಿಕಾರಿದ ಸಚಿವರು; ಕಾನೂನಾತ್ಮಕವಾಗಿ ಅಲ್ಪಸಂಖ್ಯಾತರಿಗೆ ಎಷ್ಟು ಬೇಕಾದರೂ ನೆರವು ಕೊಡಿ. ಆದರೆ, ಕೊಳ್ಳೆ ಹೊಡೆಯಲು ಹಣಕಾಸು ಇಲಾಖೆ ಒಪ್ಪಿಗೆಯೇ ಇಲ್ಲದೆ ಹಣ ಬಿಡುಗಡೆ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಲ್ಲರೂ ಕಾನೂನಿನ ಕಟಕಟೆಯಲ್ಲಿ ನಿಲ್ಲಲೇಬೇಕು ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ವಸತಿ ಇಲಾಖೆಯಲ್ಲಿ ಸಾಲು ಸಾಲು ಹರಗಣಗಳು ನಡೆಯುತ್ತಿವೆ. ಈ ಮುಖ್ಯಮಂತ್ರಿ ವಸತಿ ಸಚಿವರ ರಾಜೀನಾಮೆ ಪಡೆಯುತ್ತಾರಾ? ಈ ಸಿಎಂಗೆ ಅಷ್ಟು ನೈತಿಕತೆ, ಯೋಗ್ಯತೆ, ಧೈರ್ಯ ಇದೆಯಾ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

6 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

6 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

7 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

8 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

9 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

9 hours ago