ವಿಜ್ಞಾನದಲ್ಲಿ ಏಕೆ ನಂಬಿಕೆಯಿಡಬೇಕು? ಪ್ರೊ.ನವೊಮಿ ಒರೆಸ್ಕಿಸ್ ಪ್ರಸ್ತಾಪಿಸುವ ಪಂಚಸೂತ್ರ ಹೀಗಿದೆ

-ಶಶಿಧರ ಡೋಂಗ್ರೆ

ಜನಸಾಮಾನ್ಯರು ವಿಜ್ಞಾನದಲ್ಲಿ ನಂಬಿಕೆ ಇರಿಸಬೇಕೇ ಬೇಡವೇ ಎನ್ನುವ ಪ್ರಶ್ನೆ ಅನೇಕ ಶತಮಾನಗಳಿಂದ ಹಲವರನ್ನು ಕಾಡಿದೆ. ಧಾರ್ಮಿಕ ನಂಬಿಕೆಗಳು ಮತ್ತು ವಿಜ್ಞಾನದ ತಿಳಿವು-ಇವುಗಳ ನಡುವಿನ ತಿಕ್ಕಾಟ ಹಳೆಯದು. ಆದರೆ ಇತ್ತೀಚೆಗೆ ಧಾರ್ಮಿಕ ನಂಬಿಕೆಗಳಿಂದಾಚೆ ʻವೈಯಕ್ತಿಕʼ ಎನ್ನಬಹುದಾದ ನಂಬಿಕೆಗಳ ನೆಲೆಯಲ್ಲೂ ಇಂತಹ ಘರ್ಷಣೆಗಳು ಆಗುತ್ತಿರುವುದನ್ನು ನೋಡುತ್ತೇವೆ. ಅದರಲ್ಲೂ ತುಂಬ ಪ್ರಭಾವಶಾಲಿಯಾದ ರಾಜಕೀಯ ನಾಯಕರ ವೈಯಕ್ತಿಕ ನಂಬಿಕೆಗಳು ಮತ್ತು ವೈಜ್ಞಾನಿಕ ತಿಳಿವಳಿಕೆಗಳ ನಡುವಿನ ತಿಕ್ಕಾಟ ಹೆಚ್ಚಾಗಿ ಮುನ್ನೆಲೆಗೆ ಬರುತ್ತಿದೆ. ಕೋವಿಡ್ ಹರಡುವ ಬಗೆಯಾಗಲೀ, ವ್ಯಾಕ್ಸಿನ್ ಪರಿಣಾಮಗಳ ಬಗ್ಗೆಯಾಗಲೀ ಆಗುತ್ತಿರುವ ಚರ್ಚೆಗಳು, ಅತಾರ್ಕಿಕ ಮತ್ತು ಕೆಲವು ಬಾರಿ ವಿತಂಡವಾದದ ನೆಲೆಯಲ್ಲಿ ನಡೆಯುವುದನ್ನು ಕಾಣುತ್ತಿದ್ದೇವೆ. ಇದೇ ರೀತಿ ಹವಾಮಾನ ವೈಪರೀತ್ಯದ ಬಗ್ಗೆಯೂ ಈ ರೀತಿಯ ವಾಗ್ವಾದಗಳು ನಡೆಯುತ್ತಿವೆ.

ಅಮೆರಿಕದಲ್ಲಿ ವಿಜ್ಞಾನದ ಬಗೆಗಿನ ವಿಶ್ವಾಸ ರಾಜಕೀಯ ನಂಬಿಕೆಗಳಿಗೆ ತಳುಕು ಹಾಕಿಕೊಂಡಿರುವುದನ್ನು ಢಾಳಾಗಿ ಕಾಣಬಹುದು. ಇದು ವಿಶ್ವದ ಎಲ್ಲ ಸಮಾಜದಲ್ಲಿರುವುದಾದರೂ, ಅಮೆರಿಕದಲ್ಲಿ ಮುಖ್ಯವಾಗಿ ಎರಡು ರಾಜಕೀಯ ಪಕ್ಷಗಳಿರುವುದರಿಂದ ಹೆಚ್ಚು ಮುನ್ನೆಲೆಗೆ ಬರುತ್ತದೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನದ ಇತಿಹಾಸ ವಿಭಾಗದ ಪ್ರೊಫೆಸರ್ ಆಗಿರುವ ನವೊಮಿ ಒರೆಸ್ಕಿಸ್ ಅವರು ಇತ್ತೀಚೆಗೆ ʻವಿಜ್ಞಾನದಲ್ಲಿ ನಂಬಿಕೆ ಏಕಿರಬೇಕು?ʼ (Why Trust Scicne?) ಎನ್ನುವ ಬಹು ಚರ್ಚಿತ ಪುಸ್ತಕವನ್ನು ಬರೆದಿದ್ದಾರೆ. 2016 ರಲ್ಲಿ ಟ್ಯಾನರ್ ಉಪನ್ಯಾಸ ಸರಣಿಯ ಭಾಗವಾಗಿ ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಫ್ರೊ.ಒರೆಸ್ಕಿಸ್ ಅವರು ಈ ವಿಷಯದ ಬಗ್ಗೆ ಭಾಷಣ ಮಾಡಿದಾಗ, ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಯೊಂದು ಈ ಪುಸ್ತಕದ ಹುಟ್ಟಿಗೆ ಕಾರಣವಾಯಿತಂತೆ. (1978ರಿಂದ ನಿರಂತರವಾಗಿ ನಡೆಯುತ್ತಿರುವ ಟ್ಯಾನರ್ ಉಪನ್ಯಾಸ ಸರಣಿಯಲ್ಲಿ, ʻಮಾನವೀಯ ಮೌಲ್ಯʼ ಎಂಬ ಶೀರ್ಷಿಕೆಯ ವಿಶಾಲ ಹರವಿನೊಂದಿಗೆ ಅನೇಕ ಶ್ರೇಷ್ಠ ಭಾಷಣಗಳು ಪ್ರಸ್ತುತವಾಗಿವೆ). ತಮ್ಮ ವಾದ ಮಂಡಿಸಿದ ಮೇಲೆ, ಅದರ ಬಗ್ಗೆ ಬೇರೆ ವಿದ್ವಾಂಸರಿಂದ ಅಭಿಪ್ರಾಯ ಮತ್ತು ಟಿಪ್ಪಣಿಗಳನ್ನು ಬರೆಯಿಸಿ, ನಂತರ ಆ ಟಿಪ್ಪಣಿಗಳ ಮೇಲೆ ಲೇಖಕರ ವ್ಯಾಖ್ಯಾನವನ್ನು ಬರೆಯುವ ಪದ್ಧತಿಯನ್ನು ಅನೇಕ ಪುಸ್ತಕಗಳಲ್ಲಿ ಕಾಣಬಹುದು. ಈ ಮಾದರಿಯನ್ನು ಈ ಪುಸ್ತಕದಲ್ಲೂ ಅಳವಡಿಸಿಕೊಳ್ಳಲಾಗಿದೆ. ಇದು ಒಟ್ಟು ಚರ್ಚೆಗೆ ಪ್ರಜಾಸತ್ತಾತ್ಮಕ ಭಾವವನ್ನು ಕೊಡುತ್ತದೆ.

ಹಾಗಾದರೆ ವಿಜ್ಞಾನದಲ್ಲಿ ನಂಬಿಕೆ ಮೂಡಿಸಬೇಕಾದರೆ ಇರಲೇಬೇಕಾದ ತತ್ವಗಳು ಯಾವುದು? ಒರೆಸ್ಕಿ ಐದು ಅಂಶಗಳನ್ನು ಓದುಗರ ಮುಂದೆ ಇಡುತ್ತಾರೆ. ಒಮ್ಮತ, ವೈವಿಧ್ಯತೆ, ವಿಧಾನ ಅಥವಾ ಪದ್ಧತಿ, ಪುರಾವೆ ಮತ್ತು ಮೌಲ್ಯಗಳು. ಕಳೆದೆರಡು ಶತಮಾನಗಳಲ್ಲಿ, ವಿಜ್ಞಾನಿಗಳ ಸಮುದಾಯದಲ್ಲಿ ಒಮ್ಮತ ಹೇಗೆ ಮೂಡುತ್ತದೆ ಎನ್ನುವುದನ್ನು ಒರೆಸ್ಕಿಸ್ ಸೊಗಸಾಗಿ ವಿವರಿಸಿದ್ದಾರೆ. ಸಹೋದ್ಯೋಗಿಗಳ ವಿಮರ್ಶೆ (Peer review) ಎಂಬ ಈ ಪ್ರಕ್ರಿಯೆ, ತನ್ನ ಆದರ್ಶ ಸ್ಥಿತಿಯಲ್ಲಿ ಹೇಗೆ ನಡೆಯಬೇಕು ಎನ್ನುವುದರ ಸ್ಥೂಲ ಪರಿಚಯ ಇಲ್ಲಿದೆ. (ಈ ಪ್ರಕ್ರಿಯೆಯನ್ನು ಸಿನಿಕತನದಿಂದ ನೋಡಿ ಹುಳುಕುಗಳನ್ನು ತೆಗೆಯಬಹುದಾದರೂ ಬೌದ್ಧಿಕ ಜಗತ್ತಿನಲ್ಲಿ ಇದಕ್ಕೆ ವಿಶೇಷ ಗೌರವಯುತ ಸ್ಥಾನವಿದೆ ಎಂಬುದರಲ್ಲಿ ಎರಡು ಮಾತಿಲ್ಲ). ಒಬ್ಬ ವಿಜ್ಞಾನಿ ಯಾವುದೇ ಪದ್ಧತಿಯನ್ನು ಅನುಸರಿಸಿ ತನ್ನ ಸಂಶೋಧನೆಯನ್ನು ಮುಂದುವರಿಸಿದರೂ, ಆ ಪ್ರಕ್ರಿಯೆ ಮತ್ತು ಸಂಶೋಧನೆಯ ಫಲಿತಾಂಶಗಳನ್ನು ತನ್ನ ಸರೀಕ ವಿಜ್ಞಾನಿಗಳ ವಿಮರ್ಶಾತ್ಮಕ ಪರಿಶೀಲನೆಗೆ ಒಪ್ಪಿಸಬೇಕಾಗುತ್ತದೆ.

ಒಳ್ಳೆಯ ಜರ್ನಲ್‌ಗಳ ಸಂಪಾದಕರು, ಆಯಾ ಕ್ಷೇತ್ರದಲ್ಲಿ ಪರಿಣತರ (ಆದರೆ ಲೇಖಕರಿಗೆ ಸಂಬಂಧವಿರದವರ) ವಿಮರ್ಶೆಗೆ ಪ್ರಬಂಧಗಳನ್ನು ಕಳಿಸುತ್ತಾರೆ. ಈ ಪರಿಶೀಲಕರ/ವಿಮರ್ಶಕರಿಂದ ನಿರೀಕ್ಷಿಸುವುದಾದರೂ ಏನು? ಪ್ರಬಂಧಗಳನ್ನು ಆಳವಾಗಿ ಪರೀಕ್ಷಿಸಿ, ಅದರಲ್ಲಿರಬಹುದಾದ ಹುಳುಕುಗಳನ್ನು ಮತ್ತು ಅತಾರ್ಕಿಕ ಅಂಶಗಳನ್ನು ಎತ್ತಿ ತೋರಿಸುವುದೇ ಮುಖ್ಯ ನಿರೀಕ್ಷೆ. ಕೆಲವು ವಿಮರ್ಶಕರ ಟಿಪ್ಪಣಿಗಳು ತುಂಬಾ ಮೊನಚಾಗಿದ್ದರೂ, ಪ್ರಬಂಧಕಾರ ಅವು ತನ್ನ ಬಗ್ಗೆ ಮಾಡಿರುವ ವೈಯಕ್ತಿಕ ನಿಲುವು ಎಂದು ಭಾವಿಸದೆ, ಆದಷ್ಟೂ ವಸ್ತುನಿಷ್ಠವಾಗಿ ಆ ಟಿಪ್ಪಣಿಗಳಿಗೆ ಮರು ಟಿಪ್ಪಣಿಯನ್ನೋ/ಸಮಜಾಯಿಷಿಯನ್ನೋ ಒದಗಿಸಬೇಕಾಗುತ್ತದೆ.

ಪ್ರತಿಯೊಂದು ಪ್ರಬಂಧದ ಪ್ರಕಟಣೆಯಲ್ಲೂ ಇಂತಹ ಅಗ್ನಿ ಪರೀಕ್ಷೆಗೊಳಗಾಗುವ ಸಂಶೋಧನೆ, ಪುಟವಿಟ್ಟ ಚಿನ್ನದಂತೆ ಹೊಳೆಯುವುದರಲ್ಲಿ ಸಂಶಯವಿಲ್ಲ. ಈ ಪ್ರಕ್ರಿಯೆ ಮತ್ತೆ ಮತ್ತೆ ಆಗುತ್ತ ಹೋದಂತೆ, ವೈಜ್ಞಾನಿಕ ಸಮುದಾಯದಲ್ಲಿ ವಿಜ್ಞಾನಿಯ ಸಂಶೋಧನೆಗೆ ಗೌರವ ಪ್ರಾಪ್ತಿಯಾಗುತ್ತದೆ ಮತ್ತು ನಂಬಿಕೆಯೂ ಹುಟ್ಟುತ್ತದೆ. ಕಾಲ ಕಳೆದಂತೆ, ಈ ಸಮುದಾಯವೂ ವಿಸ್ತರಿಸುತ್ತ ಹೋಗುತ್ತದೆ. ಈ ಸಮುದಾಯ ಎಲ್ಲರನ್ನೂ ಒಳಗೊಂಡರೆ ಆಗ ಒಟ್ಟೂ ಸಮಾಜದಲ್ಲಿ ವಿಜ್ಞಾನದಲ್ಲಿ ನಂಬಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಈ ಎಲ್ಲ ಕಾರಣಗಳಿಂದ, ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು, ತಮ್ಮ ಸಂಶೋಧನೆಯನ್ನು ಸಾಮುದಾಯಿಕವಾಗಿ ಹಂಚುವುದರಲ್ಲೂ ಕಾಳಜಿ ವಹಿಸಬೇಕೆಂದು ಪ್ರೊ.ಒರೆಸ್ಕಿಸ್ ಅಭಿಪ್ರಾಯಪಡುತ್ತಾರೆ.

ಪುಸ್ತಕದ ಮೊದಲನೆಯ ಅಧ್ಯಾಯದಲ್ಲಿ ʻವಿಜ್ಞಾನʼ ದ ತಾತ್ವಿಕ ತಳಹದಿಗಳ ಬಗ್ಗೆ ವಿಸ್ತೃತ ವಿವರಗಳಿವೆ. ವಿಜ್ಞಾನ ಮುಂದುವರಿಯುವ ರೀತಿ ಮತ್ತು ಇತರ ವಿಜ್ಞಾನಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ನಂಬುಗೆ ಗಳಿಸುವ ವಿವಿಧ ರೂಪಗಳನ್ನು ಉದಾಹರಣೆಗಳ ಸಹಿತ ವಿವರಿಸುತ್ತಾರೆ. ಪ್ರಯೋಗದಿಂದ ಸಾಬೀತು ಮಾಡಿದರೆ ಮಾತ್ರ ವಿಜ್ಞಾನ ಎನ್ನುವ ಸಿದ್ಧಾಂತದ ಚರ್ಚೆಯಿಂದ ಪ್ರಾರಂಭವಾಗುವ ಈ ಭಾಗ, ಮುಂದೆ ಬೇರೆ ಬೇರೆ ವಿಧಗಳನ್ನು ವಿವರಿಸುತ್ತದೆ. ನಿಜವಾದ ವಿಜ್ಞಾನದ ಮುನ್ನಡೆ ಕ್ರಾಂತಿಕಾರೀ ಸಂಶೋಧನೆಗಳಿಂದ ಮಾತ್ರ ಆಗುತ್ತದೆ ಎನ್ನುವ ವಾದವೂ ಇದೆ. ಇದೆಲ್ಲದರ ಮಧ್ಯೆ, ವಿಜ್ಞಾನದ ಸಂಶೋಧನೆಗಳು ಸಾಮುದಾಯಿಕ ಸ್ವರೂಪವನ್ನು ಪಡೆಯಲೇಬೇಕು ಎನ್ನುವವರಿದ್ದಾರೆ. ಈ ಸಮುದಾಯ ಮೊದಲಿಗೆ ವಿಜ್ಞಾನಿಗಳಿಗೆ ಸೀಮಿತವಾಗಿದ್ದರೂ ನಂತರ ಜನಸಾಮಾನ್ಯರನ್ನೂ ಒಳಗೊಳ್ಳಬೇಕಾಗುತ್ತದೆ.

ವಿಜ್ಞಾನದಲ್ಲಿ ನಂಬಿಕೆ ಇಲ್ಲ ಎನ್ನುವ ವಾಕ್ಯದಲ್ಲೇ, ಎಲ್ಲೋ ಕೆಲವು ಸಂಶೋಧನೆಗಳು ಅಪನಂಬಿಕೆಯನ್ನು ಮೂಡಿಸಿರಬಹುದು ಎನ್ನುವ ಭಾವವೂ ಇದೆ ಮತ್ತು ಅದಕ್ಕೆ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಬಹುದು. ಒರೆಸ್ಕಿಸ್ ತಮ್ಮ ಪುಸ್ತಕದ ಎರಡನೇ ಅಧ್ಯಾಯದಲ್ಲಿ ಇಂತಹ ಕೆಲವು ಉದಾಹರಣೆಗಳನ್ನು ನೀಡಿ, ಮೊದಲು ಕಾಣಿಸಿದ ಐದು ಅಂಶಗಳಲ್ಲಿ ಯಾವ ಅಂಶದಲ್ಲಿ ನ್ಯೂನತೆಯುಂಟಾಗಿತ್ತು ಎನ್ನುವುದನ್ನೂ ಗುರುತಿಸುತ್ತಾರೆ.

ಪುಸ್ತಕದ ಮೂರನೆಯ ಭಾಗದಲ್ಲಿ (3-6 ಅಧ್ಯಾಯ), ಒರೆಸ್ಕಿ ಅವರ ಸಿದ್ಧಾಂತದ ಬಗ್ಗೆ ಬೇರೆ ವಿದ್ವಾಂಸರ ವ್ಯಾಖ್ಯೆಯನ್ನು ಕಾಣಬಹುದು. ನಾಲ್ವರು ಅವರ ಪ್ರಬಂಧವನ್ನು ಸೂಕ್ಷ್ಮವಾಗಿ ಗಮನಿಸಿ, ತುಂಬ ಒಳ್ಳೆಯ ಒಳ ನೋಟಗಳನ್ನು ನೀಡಿದ್ದಾರೆ. ಉದಾರಹರಣೆಗೆ, ಪ್ರೊ.ಸೂಸನ್ ಲಿಂಗ್ಡಿ ಅವರು, ನಮ್ಮ ಸುತ್ತಲಿರುವ ವಸ್ತುಗಳ ಹಿಂದೆ ಇರುವ ವಿಜ್ಞಾನವನ್ನು ಹೆಚ್ಚು ಹೆಚ್ಚು ಗುರುತಿಸಿದಲ್ಲಿ, ಒಟ್ಟು ವಿಜ್ಞಾನದ ಬಗ್ಗೆ ನಂಬಿಕೆ ಹೆಚ್ಚಾಗುತ್ತದೆ ಎಂದಿದ್ದಾರೆ. ಅವರು, ಈ ಪ್ರಕ್ರಿಯೆಯನ್ನು ದೈನಂದಿನ ವಸ್ತುಗಳಲ್ಲಿರುವ ಬೌದ್ಧಿಕತೆ ಎಂದಿದ್ದಾರೆ. ಉದಾಹರಣೆಗೆ, ಇಪ್ಪತ್ತು ವರ್ಷಗಳ ಹಿಂದಿನ ವಾಹನಗಳಿಗೆ ಹೋಲಿಸಿದರೆ, ಇಂದಿನ ವಾಹನಗಳ (ಸ್ಕೂಟರ್, ಕಾರು ಇತ್ಯಾದಿ) ಗುಣಮಟ್ಟ ಹೆಚ್ಚಾಗಿರುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಈ ವಾಹನಗಳ ವಿನ್ಯಾಸ ಮತ್ತು ತಯಾರಿಕೆಯ ಹಿಂದಿನ ವಿಜ್ಞಾನ ಮತ್ತು ತಂತ್ರಜ್ಞಾನವೇ ಈ ಗುಣಮಟ್ಟ ಏರಿಕೆಗೆ ಕಾರಣ. ಆದರೆ, ಈ ಬಗ್ಗೆ ನಾವು ಹೆಚ್ಚು ತಿಳಿದಿಲ್ಲ ಮತ್ತು ಅದರ ಬಗ್ಗೆ ಹೆಚ್ಚು ಲೇಖನಗಳು/ಬರಹಗಳು ಪ್ರಕಟವಾಗುವುದಿಲ್ಲ ಎನ್ನುವುದೂ ಸತ್ಯ. ಈ ಬಗೆಯ ಬರಹಗಳು ನಿರಂತರವಾಗಿ ಲಭ್ಯವಾದಲ್ಲಿ, ವಿಜ್ಞಾನದ ಬಗೆಗಿನ ನಂಬಿಕೆಯೂ ಬೆಳೆಯುತ್ತ ಹೋಗಬಹುದು ಎಂಬ ಸಿದ್ಧಾಂತ ಪ್ರೊ.ಲಿಂಗ್ಡಿ ಅವರದು. ಇದು ವಿಜ್ಞಾನಿಗಳು ಮತ್ತು ವಿಜ್ಞಾನದ ಸಂವಹನಕಾರ-ಈ ಎರಡೂ ಗುಂಪುಗಳಲ್ಲೂ ಅವಶ್ಯಕವಾಗಿ ಇರಬೇಕಾದ ಆಯಾಮ.

ಕೊನೆಯ ಭಾಗದಲ್ಲಿ, ನಾಲ್ಕು ವಿದ್ವಾಂಸರ ಟಿಪ್ಪಣಿಗಳಿಗೆ ಒರಿಸ್ಕಿಸ್ ತಮ್ಮ ಉತ್ತರ ಮತ್ತು ವ್ಯಾಖ್ಯಾನಗಳನ್ನು ನೀಡಿದ್ದಾರೆ. ಈ ಪುಸ್ತಕವೂ ತನ್ನ ನಂಬಿಕೆಗಳನ್ನು ಓದುಗರ ಮೇಲೆ ಹೇರುವುದಿಲ್ಲ. ಹಾರ್ವರ್ಡ್ ಪ್ರೊಫೆಸರ್ ಬರೆದಿದ್ದರಿಂದ ನಾವು ಕುರುಡಾಗಿ ಅವರು ಹೇಳಿದ್ದನ್ನೆಲ್ಲ ನಂಬಬೇಕು ಎಂಬ ಅಹಂಕಾರ ಇಲ್ಲ ಮತ್ತು ಎಲ್ಲ ವಿಜ್ಞಾನವನ್ನೂ ನಂಬಿ ಎನ್ನುವಂತಹ ಹುಂಬ ಹಂಬಲವೂ ಇಲ್ಲಿಲ್ಲ. ಬುದ್ಧಿವಂತ ಓದುಗನನ್ನು ತನ್ನ ಗುರಿಯೆಡೆಗೆ ನಿಧಾನವಾಗಿ, ತರ್ಕ ಸಹಿತವಾಗಿ, ಕರೆದೊಯ್ಯುವ ಪರಿ ಇಲ್ಲಿದೆ.

× Chat with us