ತಪ್ಪು ಮಾಡೋ ಪೊಲೀಸರ ವಿರುದ್ಧ ದೂರು ನೀಡಲು ದೂರು ಕೇಂದ್ರ ಆರಂಭಕ್ಕೆ ಚಿಂತನೆ: ಗೃಹ ಸಚಿವ

ಮೈಸೂರು: ತಪ್ಪು ಮಾಡುವ ಪೊಲೀಸರ ವಿರುದ್ಧ ದೂರು ನೀಡಲು ಪ್ರತಿ ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಜ್ಯೋತಿನಗರದ ಡಿಎಆರ್ ಕವಾಯತ್ತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ೬ನೇ ತಂಡದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಹಾಗೂ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಜನರ ಮಾನ, ಪ್ರಾಣ, ಆಸ್ತಿಯನ್ನು ಸಂರಕ್ಷಿಸುವ ಹೊಣೆ ಪೊಲೀಸರ ಮೇಲಿದೆ. ಹಾಗೆಯೇ ಪೊಲೀಸರು ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಅಂತಹ ಪೊಲೀಸರಿಗೂ ಕಠಿಣ ಶಿಕ್ಷೆಯಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಪೊಲೀಸರ ವಿರುದ್ಧ ದೂರು ನೀಡಲು ಪ್ರತೀ ಜಲ್ಲೆಯಲ್ಲಿ ದೂರು ಕೇಂದ್ರವನ್ನು ಆರಂಭಿಸಲು ಚಿಂತನ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಪೊಲೀಸರೇ ಅಪರಾಧ ಕೃತ್ಯ ಎಸಗುವುದು ಕಂಡುಬರುತ್ತಿದೆ. ನಾಗರಿಕರ ರಕ್ಷಣೆಯ ಜವಾಬ್ದಾರಿ ಹೊತ್ತ ಪೊಲೀಸರು ಅಪರಾಧ ಕೃತ್ಯಗಳನ್ನು ಎಸಗುವುದು ಅಕ್ಷಮ್ಯ. ಹೀಗಾಗಿ, ಅಂತಹ ಪೊಲೀಸರ ವಿರುದ್ಧ ಸಾರ್ವಜನಿಕರು ಧೈರ್ಯವಾಗಿ ದೂರು ನೀಡಲು ಎರಡು ದೂರವಾಣಿ ಸಂಖ್ಯೆಗಳನ್ನು ನೀಡಲು ಕ್ರಮವಹಿಸಲಾಗುವುದು ಎಂದರು.

ತರಬೇತಿಯಲ್ಲಿ 242 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪಡೆದರು. ಈ ಸಂದರ್ಭ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಉಪಸ್ಥಿತರಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ಬೆಚ್ಚಿಬೀಳಿಸುವ ಮತ್ತೊಂದು ಘಟನೆ; ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌!

ಇದನ್ನೂ ಓದಿ: ಮೈಸೂರಿನಲ್ಲಿ ಗ್ಯಾಂಗ್‌ರೇಪ್‌ ಪ್ರಕರಣ: ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಿದ್ದು

× Chat with us