ʻಆಂದೋಲನʼ ವರದಿ ಪರಿಣಾಮ: ಪುಸ್ತಕ ಪ್ರೇಮಿ ಸೈಯದ್‌ ನೆರವಿಗೆ ನಿಂತ ಜನ

ಮೈಸೂರು: ನಗರದ ರಾಜೀವನಗರ 2ನೇ ಹಂತದಲ್ಲಿ ಪುಸ್ತಕ ಪ್ರೇಮಿ ಸೈಯದ್‌ ಇಸಾಕ್‌ ನಿರ್ಮಿಸಿದ್ದ ಸಾರ್ವಜನಿಕ ಗ್ರಂಥಾಲಯ ಕಿಡಿಗೇಡಿಗಳ ಬೆಂಕಿಗೆ ಆಹುತಿಯಾದ ಬೆನ್ನಲ್ಲೇ, ವಿದ್ಯಮಾನವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಸೈಯದ್‌ ಅವರಿಗೆ ಭರಪೂರ ನೆರವು ಹರಿದುಬರುತ್ತಿದೆ.

ʻಆಂದೋಲನʼ ಡಿಜಿಟಲ್‌ ಹಾಗೂ ದಿನಪತ್ರಿಕೆಯ ವರದಿಗೆ ಎಲ್ಲೆಡೆ ಸ್ಪಂದನೆ ವ್ಯಕ್ತವಾಗಿದೆ. ವರದಿಯು ಅಭಿಯಾನದ ಸ್ವರೂಪ ಪಡೆದುಕೊಂಡಿದ್ದು, ಪುಸ್ತಕ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ಅಗತ್ಯವಾದ ಹಣದ ನೆರವು ನೀಡುವ ಭರವಸೆಗಳೂ ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ. ʻಸ್ಥಳಕ್ಕೆ ಹೋಗಿ ಅಥವಾ ಪೋಸ್ಟ್‌ ಮೂಲಕ ಸೈಯದ್‌ ಅವರಿಗೆ ಪುಸ್ತಕ, ಹಣದ ನೆರವು ನೀಡುತ್ತೇವೆʼ ಎಂಬ ಪೋಸ್ಟ್‌ಗಳು ಆಂದೋಲನ ಪತ್ರಿಕೆಯ ವರದಿ ಫೋಟೊದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಅಲ್ಲದೇ, ಕಿಡಿಗೇಡಿಗಳ ಕೃತ್ಯಕ್ಕೆ ಟೀಕೆಗಳೂ ವ್ಯಕ್ತವಾಗುತ್ತಿವೆ.

ಈ ದುಷ್ಕೃತ್ಯ ಖಂಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಎಸ್.ಸುರೇಶ್‌ ಕುಮಾರ್‌, ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ನಾಗೇಶ್‌ ಮೊದಲಾದವರು ಪ್ರತಿಕ್ರಿಯಿಸಿದ್ದರು. ಅಲ್ಲದೇ, ಘಟನೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸೈಯದ್‌ಗೆ ನೆರವು ನೀಡಬೇಕು ಎಂದು ಆಗ್ರಹಿಸಿದ್ದರು.

ಇದರ ಬೆನ್ನಲ್ಲೇ, ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಸಹಯೋಗದೊಂದಿಗೆ ಆಲ್‌ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್‌ ಫೋರಂ ವತಿಯಿಂದ ಸೈಯದ್‌ ಇಸಾಕ್‌ ಅವರಿಗೆ ಎರಡು ಲಕ್ಷ ರೂ. ನೀಡಲಾಯಿತು.

ತನುಮನ ಪ್ರಕಾಶನದ ಮಾನಸ ಅವರು 15 ಸಾವಿರ ರೂ. ಮೌಲ್ಯದ ಪುಸ್ತಕ ಕೊಡುವುದಾಗಿ ʻಆಂದೋಲನʼಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

× Chat with us