ರಂಗೇರಿದ ಮೇಲ್ಮನೆ ಕಣ : ಮೂರೂ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ನಾಮಪತ್ರಗಳ ಸಲ್ಲಿಕೆ ಭರಾಟೆ ಜೋರಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಹಲವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು ಮೇಲ್ಮನೆ ಚುನಾವಣೆಯ ಕಣ ರಂಗೇರಿದೆ.

ಮೈಸೂರು-ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ರಾಮನಗರ ಸೇರಿದಂತೆ ೨೦ ಕ್ಷೇತ್ರಗಳಿಂದ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್ ತಲಾ ೨೦ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜಾ.ದಳ 7 ಕ್ಷೇತ್ರದಲ್ಲಿ ಸ್ಪರ್ಧಿಸಿದೆ.

ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಮೂರೂ ಪಕ್ಷಗಳು ಒಬ್ಬೊಬ್ಬ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಾಂಗ್ರೆಸ್‌ನಿಂದ ಡಾ.ಡಿ.ತಿಮ್ಮಯ್ಯ, ಬಿಜೆಪಿಯಿಂದ ಆರ್.ರಘು ಕೌಟಿಲ್ಯ, ಜಾ.ದಳದಿಂದ ಸಿ.ಎನ್.ಮಂಜೇಗೌಡ, ಉಮೇದುವರಿಕೆ ಸಲ್ಲಿಸಿದರು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ಮಂಡ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಎಂ.ದಿನೇಶ್ ಗೂಳೀಗೌಡ, ಜಾ.ದಳದಿಂದ ಎನ್.ಅಪ್ಪಾಜಿಗೌಡ, ಬಿಜೆಪಿಯಿಂದ ಬೂಕನಹಳ್ಳಿ ಮಂಜು, ಕೊಡಗು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಎಂ.ಮಂತರ್ ಗೌಡ, ಬಿಜೆಪಿಯಿಂದ ಸುಜಾ ಕುಶಾಲಪ್ಪ, ಜಾ.ದಳದಿಂದ ಸ್ಪರ್ಧೆಯಲ್ಲಿದ್ದಾರೆ. ಎಲ್ಲರೂ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.

ಮೈಸೂರಿನಲ್ಲಿ ಮೂರೂ ಪಕ್ಷಗಳ ಅಭ್ಯಥಿಗಳು ತಮ್ಮ ತಮ್ಮ ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಜರಿದ್ದರು.

× Chat with us