ದಸರಾ ಮಹೋತ್ಸವ: ಮೈಸೂರು ಖಾಕಿ ಪಡೆ ಹೈ ಅಲರ್ಟ್, ನೈಟ್‍ ಬೀಟ್ ಹೆಚ್ಚಳ!

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಮೈಸೂರು ಖಾಕಿ ಪಡೆ ಹೈ ಅಲರ್ಟ್ ಆಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ಹೆಚ್ಚಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಕ್ಕೆ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ರಾತ್ರಿ 8 ಗಂಟೆ ನಂತರ ನಗರದಲ್ಲಿ ಕಟ್ಟೆಚ್ಚರ ವಹಿಸಲು ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವವರಿಗೆ ಬ್ರೇಕ್ ಹಾಕಲು ಕ್ರಮವಹಿಸಿದ್ದಾರೆ. ದಸರಾ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆಗೆ ಒತ್ತು ನೀಡಲಾಗಿದೆ.

ಬುಧವಾರದಿಂದ ರಾತ್ರಿ ವೇಳೆ ಕಾರ್ಯಾಚರಣೆ ಹೆಚ್ಚಿಸಲಾಗಿದ್ದು, ಡಿಸಿಪಿ ಗೀತಾ ಪ್ರಸನ್ನ ಅವರು ಚಾಲನೆ ನೀಡಿದ್ದಾರೆ. ಎನ್.ಆರ್.ವಿಭಾಗದ ಪೊಲೀಸ್ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದ ಗೀತಾ ಪ್ರಸನ್ನ ಅವರು ಹೈ ಅಲರ್ಟ್ ಆಗಿರುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಗಮನ ಹರಿಸುವುದು, ರೌಡಿಗಳು ಹಾಗೂ ಪುಂಡರಿಗೆ ವಾರ್ನಿಂಗ್ ನೀಡುವುದು ಸಹ ಕಾರ್ಯಾಚರಣೆಯಲ್ಲಿ ಇರುತ್ತದೆ. ರಾತ್ರಿ 8 ಗಂಟೆ ನಂತರ ಗುಂಪು ಸೇರಿದರೆ ಪೊಲೀಸರು ಹಾಜರಾಗುವುದು ಗ್ಯಾರೆಂಟಿ. ಒಟ್ಟಾರೆ ದಸರಾ ಸುಸೂತ್ರವಾಗಿ ನಡೆಯಲು ಮೈಸೂರು ಪೊಲೀಸರು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಮಾರ್ಗದರ್ಶನದಲ್ಲಿ ಖಾಕಿ ಪಡೆ ಕಾರ್ಯೋನ್ಮುಖವಾಗಲಿದೆ.

× Chat with us