ಮೋಸ ಮಾಡಿ ಜನರನ್ನು ಮತಾಂತರ ಮಾಡುವವರನ್ನು ಮಟ್ಟ ಹಾಕ್ತೀವಿ: ಪ್ರತಾಪಸಿಂಹ

ಮೈಸೂರು: ಜನರನ್ನು ಮೋಸ ಮಾಡಿ ಮತಾಂತರ ಮಾಡುವವರನ್ನು ಮಟ್ಟ ಹಾಕುತ್ತೇವೆ ಎಂದು ಸಂಸದ ಪ್ರತಾಪಸಿಂಹ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಸ, ಮೋಡಿ ಮಾತಿನಲ್ಲಿ ವ್ಯವಸ್ಥಿತವಾಗಿ ಮತಾಂತರ ಮಾಡುವ ಕೆಲಸ ನಡೆಯುತ್ತಿದ್ದು, ಮತಾಂತರದ ವಿರುದ್ಧ ಇದ್ದೇವೆಂದು ಹೇಳುವ ಪಾದ್ರಿಗಳು, ಬಿಷಪ್‌ಗಳಿಗೆ ಭಯ ಏಕೆ ಕಾಡಬೇಕು ಪ್ರಶ್ನಿಸಿದರು.

ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯೇ ಮತಾಂತರಗೊಂಡಿರುವ ಬಗ್ಗೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಮತಾಂತರದ ಕೆಲಸ ನಿರಂತರವಾಗಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೋಸ, ಮರುಳು, ಮೋಡಿ ಮಾತಿನಲ್ಲೇ ಯತ್ನಿಸುತ್ತಿರುವುದರಿಂದ ಸರ್ಕಾರ ಕಾಯ್ದೆ ತರಲು ಮುಂದಾಗಿದೆ. ಆದರೆ, ಬಿಷಪ್‌ಗಳು, ಪಾದ್ರಿಗಳು ಮತಾಂತರದ ವಿರುದ್ಧ ನಾವಿದ್ದೇವೆ. ಕಾಯ್ದೆ ತರುವುದು ಬೇಡ ಎನ್ನುವ ಮಾತನ್ನಾಡಿದ್ದಾರೆ. ನೀವು ಮತಾಂತರಕ್ಕೆ ತೊಡಗಿಲ್ಲ ಎಂದಾದರೇ ಭಯ,ಆತಂಕಪಡುವ ಅಗತ್ಯವಿಲ್ಲ. ಬಾಲಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ದೇಶ, ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮತಾಂತರದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಾನು ಈ ವಿಚಾರವನ್ನು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಒಳಿತು-ಕೆಡಕು ಗೊತ್ತಿರುವುದರಿಂದ ಯತ್ನಿಸಲ್ಲ. ಆದರೆ, ಕಾಳಸಂತೆಯಲ್ಲಿ ಕದ್ದ ಮಾಲು ಮಾರಲು ಹೊರಟವರಂತೆ ಕೇರಿ,ಕಾಲೋನಿಗಳಿಗೆ ಹುಡುಕಿಕೊಂಡು ಹೋಗಿ ಉಡುಗೊರೆ ಕೊಡುವ ಮೂಲಕ ಮತಾಂತರಕ್ಕೆ ಆಮಿಷವನ್ನೊಡ್ಡುತ್ತಾರೆ ಎಂದು ವಿರೋಧಿಸಿದರು.

× Chat with us