‘ಮೊಬೈಲ್ ಕ್ಯಾಂಟೀನ್’ಗಳ ಕಾರುಬಾರು

ವಾರಾಂತ್ಯ ವಿಶೇಷ

ಮೋಹನ ಬನ್ನಿಕುಪ್ಪೆ

 

ಸಾಂಸ್ಕೃತಿಕ ನಗರಿಯಲ್ಲಿ ಕಣ್ಣು ಮಿಟುಕಿಸಿದಲ್ಲೆಲ್ಲ ಮೊಬೈಲ್ ಕ್ಯಾಂಟೀನ್‌ಗಳು, ಇದಕ್ಕೆ ಕಟ್ಟಡದ ಸ್ವರೂಪ ಬೇಕಿಲ್ಲ, ಹೆಚ್ಚಿನ ಸಂಖ್ಯೆಯ ಕಾರ್ಮಿಕರ ಅವಶ್ಯವಿಲ್ಲ,  ಲಕ್ಷಾಂತರ ರೂಪಾಯಿ  ಬಂಡವಾಳ ಹೂಡುವಂತಿಲ್ಲ, ಒಂದೇ ಸ್ಥಳದಲ್ಲಿ ಶಾಶ್ವತವಾಗಿ ನಿಲ್ಲುವಂತೆಯೂ ಇಲ್ಲ. ಆದರೂ, ತಮ್ಮ ರುಚಿಕರ ಕೈಚಳಕ, ಶುಚಿ ಹಾಗೂ ಆಕರ್ಷಕವಾದ ತಿನಿಸುಗಳನ್ನು ಹೊಸ ವಾತಾವರಣದಲ್ಲಿ ತಿನಿಸುವಂತೆ ಮಾಡುತ್ತಾ ಗ್ರಾಹಕರನ್ನು ಸೆಳೆಯುವರು.

 

ಒತ್ತಡದ ಜೀವನದ ನಡುವೆ ಒಂದಿಷ್ಟು ಮಂದಿ ಹಾಗೂ ಟ್ರೆಂಡ್ ಬದಲಾದಂತೆ ದಿನವೂ ಹೊಸತನವನ್ನು ಬಯಸುವ ಯುವ ಸಮೂಹ, ಬೇಗನೆ ಸಿಗುವ ವಿಶೇಷ ತಿನಿಸುಗಳನ್ನೇ ಹೆಚ್ಚಾಗಿ ಸವಿಯುತ್ತಾರೆ. ಆದ್ದರಿಂದಲೇ ಪ್ರತಿಷ್ಠಿತ ಹೊಟೇಲ್‌ಗಳು ಗ್ರಾಹಕರ ಆಕರ್ಷಣೆಗಾಗಿ ಫ್ಯಾನ್, ಆಸನ ವ್ಯವಸ್ಥೆ ಮುಂತಾದ ಸೌಲಭ್ಯ ಒದಗಿಸಿ ಗ್ರಾಹಕರನ್ನು ಸೆಳೆಯುತ್ತಾರೆ. ಆದರೆ, ಇದ್ಯಾವುದೂ ತಮ್ಮ  ಬಳಿ ಇರದಿದ್ದರೂ ನಾಲ್ಕು ಚಕ್ರ ವಾಹನಗಳನ್ನೇ ಮಳಿಗೆಗಳನ್ನಾಗಿಸಿ ಗ್ರಾಹಕರನ್ನು ತಮ್ಮ ಬಳಿ ಬರುವಂತೆ ಮಾಡುತ್ತಾರೆ.

ಇರುವ ಸ್ಥಳವೇ ಅವರ ಕ್ಯಾಂಟೀನ್:

ಇಂತಹ ಮೊಬೈಲ್ ಕ್ಯಾಂಟೀನ್ ಗಳಿಗೆ ಕಟ್ಟಡ ಬೇಕು, ನಿರ್ದಿಷ್ಟ ಸ್ಥಳವೊಂದಿರಬೇಕು ಎಂಬುದೇನು ಇಲ್ಲ, ವಾಹನವೊಂದು ಅಥವಾ ತಳ್ಳುವ ಗಾಡಿ, ಅಲ್ಪ-ಸ್ವಲ್ಪ ಪಾತ್ರೆಗಳು, ಸ್ಟೌ ಮತ್ತು ಅಡುಗೆ ಅನಿಲ ಸಿಲಿಂಡರ್, ಒಂದೆರಡು ಟೇಬಲ್ ಮತ್ತು ಕುರ್ಚಿಗಳಿದ್ದರೆ ಸಾಕು, ಇದ್ದ ಸ್ಥಳವೇ ಸುಂದರ ಹೋಟೆಲ್ ಆಗಿ ನಿರ್ಮಾಣವಾಗುತ್ತದೆ.  ವಡಾ, ಪುರಿ, ದೋಸೆ, ಪಲಾವ್, ಪರೋಟ ಅಷ್ಟೇ ಅಲ್ಲದೆ, ಪೀಜಾ ಪಾಸ್ತಾ, ಸ್ಯಾಂಡ್‌ವಿಚ್, ಫ್ರೆಂಚ್‌ಫ್ರೈಸ್ ಸೇರಿದಂತೆ ಎಲ್ಲ ಬಗೆಯ ತಿನಿಸುಗಳನ್ನು ಕಣ್ಣು ಮಿಟುಕಿಸುವುದರೊಳಗೆ ಸಿದ್ಧಪಡಿಸಿ, ಗ್ರಾಹಕರಿಗೆ ನೀಡುತ್ತಾರೆ.  ಇಂದು ಸ್ಟಾರ್ ಹೋಟೆಲ್ ಗಳಿಗೂ ಇಲ್ಲದಷ್ಟು ಬೇಡಿಕೆ ಮೊಬೈಲ್ ಕ್ಯಾಂಟೀನ್ ಗಳಿಗಿವೆ.

ಪ್ರಮುಖ ರಸ್ತೆಗಳಲ್ಲಿ ಹೋಟೆಲ್

ಮೈಸೂರಿನ ಬಸ್ ನಿಲ್ದಾಣ, ಆರ್‌ಟಿಓ ರಸ್ತೆ, ಜಯಲಕ್ಷ್ಮೀಪುರಂ, ಲಲಿತಮಹಲ್ ರಸ್ತೆ, ಸಿಟಿ ಬಸ್ ನಿಲ್ದಾಣ, ಬಲ್ಲಾಳವೃತ್ತ, ಸಿದ್ಧಾರ್ಥನಗರ, ಚರ್ಚ್ ರಸ್ತೆ, ಕುವೆಂಪುನಗರ, ಗಾಯತ್ರಿಪುರಂ ರಸ್ತೆ,  ಸರಸ್ವತಿಪುರಂ, ಬೋಗಾದಿ, ಜೆಸಿಇ ಕಾಲೇಜು ಮುಂಭಾಗದ ರಸ್ತೆ, ಟಿ.ಕೆ.ಬಡಾವಣೆಯ  ಟೆಂಟ್ ಸರ್ಕಲ್, ಅಶೋಕರಸ್ತೆ, ಸೇರಿದಂತೆ ಮುಂತಾದ ಕಡೆ ಬೆಳಿಗ್ಗೆ ಅಥವಾ ಸಂಜೆ ವೇಳೆ ಒಂದು ರೌಂಡ್ ಸುತ್ತಾಡಿದರೆ ಸಾಕು ಇಂತಹ ಅಂಗಡಿಗಳು ನಿಮಗೆ ಸಿಗುತ್ತವೆ. ಹೋಟೆಲ್‌ಗಳಿಗಿಂತಳು ಕಡಿಮೆ ದರದಲ್ಲೇ ಇಲ್ಲಿನ ತಿನಿಸುಗಳನ್ನು ಸವಿಯಬಹುದು.

ಕೊಡಗಿನ ಹುಡುಗನ ಕರಾಮತ್ತು

ಹೌದು… ಸಾಂಸ್ಕೃತಿಕ ನಗರಿಯ ಆಹಾರ ಸಂಸ್ಕೃತಿಯನ್ನು ಮೆಚ್ಚಿಕೊಂಡಿರುವ ಕೊಡಗಿನ ಯುವಕನೊಬ್ಬ ಜಯಲಕ್ಷ್ಮೀ ಪುರಂ ನಲ್ಲಿರುವ ಮಹಾಜನ ಕಾಲೇಜು ಸಮೀಪದಲ್ಲೇ ಮೊಬೈಲ್ ಕ್ಯಾಂಟೀನ್ ಒಂದನ್ನು ಆರಂಭಿಸಿದ್ದು, ಟ್ರೆಂಡಿ ಫುಡ್‌ಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ. ಸ್ಯಾಂಡ್‌ವಿಚ್, ಚೀಸ್ ಸ್ಯಾಂಡ್‌ವಿಚ್, ಫ್ರೆಂಚ್‌ ಫ್ರೈಸ್, ವೆಜ್ ರೈಸ್‌ಬೌಲ್ ವಿತ್ ಫ್ರೆಂಚ್ ಫ್ರೈಸ್ ವಿತ್ ಕೋಕ್ ಇಲ್ಲಿನ ವಿಶೇಷ ತಿನಿಸುಗಳಾಗಿದ್ದು, ಯುವ ಸಮೂಹವನ್ನು ಹೆಚ್ಚು ಆಕರ್ಷಿಸುತ್ತಿದೆ.

 

ಕಡಿಮೆದರದಲ್ಲೇ ಸಿಗುತ್ತೇ ಹೈಫೈ ತಿನಿಸುಗಳು

ದೊಡ್ಡ- ದೊಡ್ಡ ಹೋಟೆಲ್, ಹೋಗಲಾಗದೇ ಇರುವವರಿಗೆ ಇಂತಹ ‘ಮೊಬೈಲ್ ಕ್ಯಾಂಟೀನ್’ ನವರೇ ಅನ್ನದಾತರು. ಬೇಗ ಬೇಗನೇ ತಮಗೆ ಇಷ್ಟದ ತಿಂಡಿ ಸವಿದು ತಮ್ಮ ತಮ್ಮ ಕೆಲಸಗಳಿಗೆ ಹೊರಟು ಬಿಡಬಹುದು. ಅಲ್ಲದೆ, ಸಂಜೆ ವೇಳೆ ಸ್ನೇಹಿತರೊಂದಿಗೆ ಇಲ್ಲಿಗೆ ಬಂದರೆ ಪೀಜಾ, ಸ್ಯಾಂಡ್‌ವಿಚ್, ಬರ್ಗರ್, ಸಮೋಸ, ಎಗ್ ರೋಲ್, ಚಿಕನ್ ರೋಲ್, ಇತರೇ ಆಕರ್ಷಕ ತಿನಿಸುಗಳನ್ನು ಸವಿಯುತ್ತಿದ್ದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಹೀಗೆ ಯಾವುದೇ ಲಾಭದಾಯಕ ಉದ್ದೇಶವಿಲ್ಲದೆ ತಮ್ಮ ನೆಚ್ಚಿನ ಕೈರುಚಿಯನ್ನು ಮೈಸೂರಿಗರಿಗೆ ಉಣಬಡಿಸಬೇಕು ಎಂಬ ಉದ್ದೇಶದಿಂದಲೇ ಸುಖಿರಾಜ್ ಮೈಸೂರಿನಲ್ಲಿ ತಮ್ಮ ಮಳಿಗೆಯೊಂದನ್ನು ಸ್ಥಾಪಿಸಿದ್ದಾರೆ.

ಶುಚಿತ್ವಕ್ಕೆ ಆದ್ಯತೆ ನೀಡಲಿ

ಕೆಲಸದ ಒತ್ತಡದಲ್ಲಿರುವ ನಾವು ಬೆಳಿಗ್ಗೆ ೬ ರಿಂದ ಮಧ್ಯರಾತ್ರಿ ೧೨ರ ವರೆಗೆ ಇಲ್ಲಿ ತಿಂಡಿ ಸಿಗುವುದರಿಂದ (ಈಗ ಲಾಕ್ ಡೌನ್ ಸಮಸ್ಯೆ) ಅವರತ್ತ ಬರುತ್ತೇವೆ. ಆದರೆ, ಬಹುತೇಕ ಮೊಬೈಲ್ ಕ್ಯಾಂಟೀನ್ ಗಳಲ್ಲಿ ಶುಚಿತ್ವ ಅಷ್ಟಕ್ಕಷ್ಟೇ. ಆದ್ದರಿಂದ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿದರೆ, ಇನ್ನಷ್ಟು ಜನರನ್ನು ಬೆಳೆಯಬಹುದು.

ಸಂಜಯ್, ಗ್ರಾಹಕ

ಡಿಸೈನ್ ಇಂಜಿನಿಯರ್ ಆಗಿ ೧೧ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಾನು ಯಾವುದೇ ಊರಿಗೆ ಹೋದರೂ ಅಲ್ಲಿನ ವಿಶೇಷ ತಿನಿಸುಗಳನ್ನು ತಿನ್ನುವುದು ಹವ್ಯಾಸ. ಹೀಗೆ ಆಹಾರದ ಬಗ್ಗೆ ಸಾಕಷ್ಟು ಅಭಿರುಚಿಯಿತ್ತು. ಇಂಜಿನಿಯರ್ ಕೆಲಸ ಬಿಟ್ಟ ಒಂದು ವರ್ಷದ ನಂತರ ಫುಡ್ ಬಿಜಿನೆಸ್ ಮಾಡಬೇಕು. ಎನ್ನಿಸಿ, ಈ ಉದ್ಯಮದತ್ತ ಬಂದೆ. ಅಲ್ಲದೆ, ಮೈಸೂರಿನಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿವಿಧ ರೀತಿಯ ಜನ, ವಿವಿಧ ಬಗೆಯ ಹೋಟೆಲ್‌ಗಳಲ್ಲಿ ಒಂದಿಲ್ಲೊಂದು ತಿನಿಸುಗಳನ್ನು ಸವಿಯುವುದನ್ನು ನೋಡಿ ಮೈಸೂರಿನಲ್ಲಿ ಮೊಬೈಲ್ ಕ್ಯಾಂಟೀನ್ ಅನ್ನು ಆರಂಭಿಸಬೇಕು ಅನ್ನಿಸಿತು. ಇದರಲ್ಲಿ ನನಗೆ ಯಾವುದೇ ಲಾಭದಾಯಕ ಉದ್ದೇಶವಿಲ್ಲ. ನನ್ನ ಸಂತೋಷಕ್ಕಾಗಿ ಮಳಿಗೆ ಇಟ್ಟಿದ್ದೇನೆ.

ಸುಖಿರಾಜ್, ಮಡಿಕೇರಿ, ಮಳಿಗೆ ಮಾಲೀಕ

 

ಯಾರಿದು ಸುಖಿರಾಜ್ ?

 

ತಾರೇಂದ್ರ ಮತ್ತು ಹೇಮಲತಾ ಅವರ ಪುತ್ರನಾದ ಸುಖಿರಾಜ್ ಮೂಲ ಮಡಿಕೇರಿಯವರು. ಎಚ್‌ಯುಎಸ್‌ಸಿ ಡಿಸೈನ್ ಇಂಜಿನಿಯರ್ ಆಗಿ ೧೧ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಯಾವುದೇ ಊರಿಗೆ ಹೋದರೂ ಆ ಊರಿನ ವಿಶೇಷ ತಿನಿಸುಗಳನ್ನು ಸವಿಯುತ್ತಿದ್ದ ಸುಖಿರಾಜ್ ಇದೀದ ತನ್ನದೇ ಸ್ವಂತ ಮಳಿಗೆಯನ್ನು ಮೈಸೂರಿನಲ್ಲಿ ಸ್ಥಾಪಿಸಿದ್ದಾರೆ. ಹುಟ್ಟುಹಬ್ಬ ಆಚರಣೆ, ಫ್ರೆಂಡ್ಸ್ ಟ್ರೀಟ್ ನಂತಹ ಕಾರ್ಯಕ್ರಮಗಳಿಗೂ ನೆಚ್ಚಿನತಿನಿಸುಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ.

× Chat with us