ಪಾದಯಾತ್ರೆ ರಾಜಕೀಯಕ್ಕೆ ಸಿಕ್ಕಿಬಿದ್ದ ಮೇಕೆದಾಟು ಇತಿಹಾಸ- ವರ್ತಮಾನ

ಮೇಕೆದಾಟು ವಿವಾದ

 

ಇತಿಹಾಸ

ಕಾವೇರಿ ನದಿ  ಕರ್ನಾಟಕ ದಾಟಿ  ತಮಿಳುನಾಡಿಗೆ ಹರಿಯುವ ಮುನ್ನ ಇರುವ ಸ್ಥಳವೇ ಮೇಕೆದಾಟು. ಅಲ್ಲಿನ ಭೌಗೋಳಿಕ ಪರಿಸರವು ಅಣೆಕಟ್ಟೆ ಕಟ್ಟಲು ಹೇಳಿ ಮಾಡಿಸಿದಂತಿದೆ. ಅಲ್ಲಿ ಮೊದಲು ಅಣೆಕಟ್ಟೆ ನಿರ್ಮಿಸುವ ಪ್ರಸ್ತಾವಾಗಿದ್ದು ೧೯೪೮ರಲ್ಲಿ.  ಆಗಿನ್ನೂ ರಾಜ್ಯಗಳ ಪುನರ್ವಿಂಗಡಣೆ ಪೂರ್ಣಪ್ರಮಾಣದಲ್ಲಿ ಆಗಿರಲಿಲ್ಲ. ನಂತರ ೧೯೫೬ರಲ್ಲಿ ಕೂಡಾ ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರು, ನೀರಾವರಿ ಬಳಕೆಗಾಗಿ ಅಣೆಕಟ್ಟೆ ಯೋಜನೆಯ ಪ್ರಸ್ತಾಪಗಳಾದವು.

 

ರಾಜ್ಯಗಳ ಪುನರ್ವಿಂಗಡಣೆಯಾದ ನಂತರದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯ ಕರ್ನಾಟಕ- ತಮಿಳುನಾಡು ಉಭಯ ರಾಜ್ಯಗಳ ನಡುವೆ ಕಿಚ್ಚು ಹಚ್ಚುವ ವಿಷಯವಾಗಿ ಬಿಟ್ಟಿತು. ಎಪ್ಪತ್ತರ ದಶಕದ ಆರಂಭದಲ್ಲಿ ರಚಿಸಿದ ಕಾವೇರಿ ಸತ್ಯಶೋಧನಾ ಸಮಿತಿ ೧೯೭೨ರಲ್ಲಿ ಮಧ್ಯಂತರ ವರದಿಯನ್ನು, ೧೯೭೩ರಲ್ಲಿ ಅಂತಿಮವರದಿಯನ್ನು ಸಲ್ಲಿಸಿತು. ೧೯೭೪ರಲ್ಲಿ ಈ ವರದಿ ಆಧರಿಸಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಕಾವೇರಿ ಕಣಿವೆ ಪ್ರಾಧಿಕಾರ ರಚನೆ ಮಾಡುವ ಕರಡು ಸಿದ್ದಮಾಡಿತ್ತು.

 

೧೯೭೬ರಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಜಗಜೀವನ್ ರಾಮ್ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾಸಮಿತಿ ವರದಿಯನ್ನು ನದಿಪಾತ್ರದ ರಾಜ್ಯಗಳು ಒಪ್ಪಿಕೊಂಡವು. ಕರ್ನಾಟಕ ಹಾರಂಗಿ ಅಣೆಕಟ್ಟೆ ನಿರ್ಮಿಸಲು ಮುಂದಾದಾಗ ತಮಿಳುನಾಡು ತಕರಾರು ತೆಗೆಯಿತು. ೧೯೯೦ರಲ್ಲಿ ಕಾವೇರಿ ನ್ಯಾಯಾಧಿಕರಣ ರಚನೆಯಾಯ್ತು. ೨೦೦೭ರಲ್ಲಿ ನ್ಯಾಯಾಧಿಕರಣ ತಮಿಳುನಾಡಿಗೆ ೪೧೯ ಟಿಎಂಸಿ, ಕರ್ನಾಟಕಕ್ಕೆ ೨೭೦ ಟಿಎಂಸಿ, ಕೇರಳ ೩೦ ಮತ್ತು ಪುದುಚೇರಿ ೭ ಟಿಎಂಸಿ ನೀರನ್ನು ಹಂಚಿಕೆ ಮಾಡಿತು. ಮಳೆ ಕೊರತೆ ಆದಾಗಲೆಲ್ಲ ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತಲೇ ಇದೆ.

 

ವರ್ತಮಾನ

ಕಾವೇರಿ ನೀರು ಹಂಚಿಕೆಯಾದ ನಂತರವೂ ಕುಡಿಯುವ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬುದು ಕರ್ನಾಟಕದ ವಾದ. ಅದರಲ್ಲೂ ಬೆಂಗಳೂರಿಗೆ ಕುಡಿಯುವ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ದನಿ ಎತ್ತಿದವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಅದಕ್ಕಾಗಿ ಅವರು ಪಾದಯಾತ್ರೆಯನ್ನೂ ಮಾಡಿದ್ದರು. ಕರ್ನಾಟಕ ಸರ್ಕಾರ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಸುವ ಸಲುವಾಗಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.

ಈ ಯೋಜನೆಗೆ ತಮಿಳುನಾಡು ಸಹಜವಾಗಿಯೇ ತಕಾರು ಎತ್ತಿದೆ. ತನ್ನ ಪಾಲಿನ ನೀರನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ ಎಂಬುದು ತಮಿಳುನಾಡಿನ ತಕರಾರಿಗೆ ಕಾರಣ. ವಾಸ್ತವವಾಗಿ ಕರ್ನಾಟಕ ವ್ಯರ್ಥವಾಗಿ ಮತ್ತು ಹಂಚಿಕೆ ಮಾಡಿದ್ದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಹರಿದುವ ಹೋಗುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ೪೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರ ನಿರ್ಮೀಸುವುದು ಮತ್ತು ಬೆಂಗಳೂರಿಗೆ ೪.೭೫ ಟಿಎಂಸಿ ಕುಡಿಯುವ ನೀರನ್ನು ಸರಬರಾಜುಮಾಡುವುದು ಯೋಜನೆಯ ಗುರಿ.

ವಾದ

ಉದ್ದೇಶಿತ ಮೇಕೆದಾಟು ಅಣೆಕಟ್ಟೆ ೬೭.೧೬ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಯೋಜನೆ. ಕರ್ನಾಟಕ ಬೆಂಗಳೂರಿನ ಕುಡಿಯುವ ನೀರಿನ ಯೋಜನೆಗಾಗಿ ೪.೭೫ ಟಿಎಂಸಿ ಬಳಸಿಕೊಂಡು, ವಿದ್ಯುತ್ ಉತ್ಪಾದಿಸಿದರೆ, ಉಳಿದ ನೀರೆಲ್ಲವೂ ತಮಿಳುನಾಡಿನ ಪಾಲೇ! ಕಾವೇರಿ ನ್ಯಾಯಾಧಿಕರಣದ ಆದೇಶದಂತೆಯೇ ನಮ್ಮ ಪಾಲಿನ ನೀರಿನ ಹಕ್ಕನ್ನು ಪಡೆಯಲು ಮೇಕೆದಾಟು ಯೋಜನೆ ಜಾರಿಗೊಳಿಸುತ್ತಿರುವುದಾಗಿ ಕರ್ನಾಟಕ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಬೇಕೆಂಬುದನ್ನು ಹಿಂದಿನಿಂದಲೂ ನ್ಯಾಯಾಧಿಕಾರಣವೂ ಒಪ್ಪಿದೆ. ಹೀಗಾಗಿ ಕುಡಿಯುವ ನೀರು ಯೋಜನೆಗೆ ತಮಿಳು ನಾಡಿನ ತಕರಾರಿಗೆ ಕಾನೂನಿನ ಬೆಂಬಲ ದಕ್ಕದು. ಆದರೆ, ನ್ಯಾಯಾಲಯದ ಮೆಟ್ಟಿಲು ಏರಿದರೆ ಯೋಜನೆ ವಿಳಂಬವಾಗಬಹುದುಷ್ಟೇ!

 

ವಿ(ತಂಡ)ವಾದ

೬೭.೧೬ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ನಿರ್ಮಿಸಿದರೆ ತಮಿಳುನಾಡು ರೈತರಿಗೆ ನೀರಿಲ್ಲದಂತಾಗುತ್ತದೆ ಎಂಬ ವಿತಂಡವಾದ ತಮಿಳುನಾಡು ಸರ್ಕಾರದ್ದು. ಕರ್ನಾಟಕ ಸಂಗ್ರಹಿಸಬಯಸಿರುವುದು ತಮಿಳುನಾಡಿಗೆ ಹಂಚಿಕೆಯಾಗಿರುವಷ್ಟು ನೀರು ಹರಿದ ನಂತರ ಹೆಚ್ಚುವರಿಯಾಗಿ ಹರಿಯುವ ನೀರು. ಅಷ್ಟೂ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಸಾಧ್ಯವೇ ಇಲ್ಲ. ಸಂಗ್ರಹಿಸಿದ್ದೆಲ್ಲವೂ ತಮಿಳುನಾಡಿಗೆ ಹರಿಯುತ್ತದೆ. ಆದರೂ ತಮಿಳುನಾಡು ತಕರಾರು ಎತ್ತುತ್ತಿದೆ.

 

ಬೆಂಗಳೂರಿಗೆ ೪.೭೫ ಟಿಎಂಸಿ ಕುಡಿಯುವ ನೀರಿನ ಅಗತ್ಯತೆಗಾಗಿ ೬೭.೧೬ ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ಯಾಕೆ ಕಟ್ಟಬೇಕು ಎಂಬುದು ತಮಿಳುನಾಡಿನ ಪ್ರತಿವಾದ. ಉದ್ದೇಶಿತ ಯೋಜನಾ ಪ್ರದೇಶವು ಬೆಂಗಳೂರಿನಿಂದ ದೂರವಿದೆ. ಹೀಗಾಗಿ ಕುಡಿಯುವ ನೀರಿನ ಕಾರಣ ಮುಂದಿಟ್ಟುಕೊಂಡು ಯೋಜನೆ ಅನುಷ್ಠಾನ ಮಾಡುವುದನ್ನು ಒಪುತ್ಪೃದಿಲ್ಲ ಎನ್ನುತ್ತಿದೆ. ಕೃಷ್ಣರಾಜಸಾಗರ ಅಣೆಕಟ್ಟೆ ದಾಟಿದ ನಂತರ ಕಾವೇರಿ ನೀರು ಪೂರ್ಣಪ್ರಮಾಣದಲ್ಲಿ ತಮಿಳುನಾಡು ಸೇರುತ್ತಿದೆ. ಕಬಿನಿ, ಶಿಂಷಾ, ಸುವರ್ಣಾವತಿ ನದಿಗಳೂ ಇದನ್ನು ಕೂಡಿಕೊಳ್ಳುತ್ತವೆ. ಮೇಕೆದಾಟು ಅಣೆಕಟ್ಟೆ ನಿರ್ಮಿಸಿದರೆ ನೀರಿನ ಹರಿವಿಗೆ ಅಡ್ಡಿ ಆಗುತ್ತದೆ ಎಂಬ ಕಾರಣಕ್ಕೂ ತಮಿಳು ನಾಡು ತಕರಾರು ಎತ್ತಿದೆ.

 

ರಾಜಕೀಯ

 

ಕರ್ನಾಟಕ ಸರ್ಕಾರ ೯,೦೦೦ ಕೋಟಿ ರುಪಾಯಿ ಅಂದಾಜು ವೆಚ್ಚಕ್ಕೆ ಯೋಜನಾವರದಿ ಸಿದ್ದಪಡಿಸಿದೆ. ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ಬೇಗ ಅನುಮೋದನೆ ಪಡೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯ. ಅದಕ್ಕಾಗಿ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದೆ. ಕರೋನ ಮೂರನೇ ಅಲೆ ಎದ್ದಿದೆ. ಈಗ ಪಾದಯಾತ್ರೆ ನಡೆಸಿದರೆ ಕರೋನಾ ನಿಯಂತ್ರಿಸಲು ಕಷ್ಟವಾಗುತ್ತದೆ ಎಂಬುದು ಆಡಳಿತಾರೂಢ ಬಿಜೆಪಿ ವಾದ. ಪಾದಯಾತ್ರೆಗೆ ಬಿಜೆಪಿಗಿಂತ ಜಾ.ದಳ ನಾಯಕ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ‘ಜನರಿಗೆ ಮಕ್ಮಲ್ ಟೋಪಿ ಹಾಕಲು ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಎಚ್.ಡಿ.ದೇವೇಗೌಡರು ಇದು ‘ಪೊಲಿಟಿಕಲ್ ಗಿಮಿಕ್’ ಎಂದೂ ಲೇವಡಿ ಮಾಡಿದ್ದಾರೆ. ‘ನಾವು ಪಾದಯಾತ್ರೆ ಮಾಡಿಯೇ ತೀರುತ್ತೇವೆ’ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ಈ ಕರೋನಾ, ಈ ರಾಜಕೀಯ, ಈ ವಾದ-ವಿವಾದಗಳ ನಡುವೆ ಮೇಕೆದಾಟು ಅಣೆಕಟ್ಟೆ ಯೋಜನೆ ಭವಿಷ್ಯ ಏನಾಗುತ್ತದೆಯೋ?

× Chat with us