ಪುಟಗೋಸಿ ವಿಪಕ್ಷ ನಾಯಕ ಸ್ಥಾನಕ್ಕೆ ಮೈತ್ರಿ ಸರ್ಕಾರ ಬೀಳಿಸಿದ್ರು: ಸಿದ್ದು ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಮೈಸೂರು: ಪುಟಗೋಸಿ ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಹುನ್ನಾರ ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದರು.

ಪತ್ನಿ ಅನಿತಾ ಅವರೊಂದಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ನೇರ ಕಾರಣ. ವಿಪಕ್ಷ ನಾಯಕ ಸ್ಥಾನಕ್ಕೆ ಮೈತ್ರಿ ಸರ್ಕಾರ ಬೀಳಿಸಿದರು. ಈಗ ಬಿಎಸ್‌ವೈ ಭೇಟಿ ಮಾಡುವ ಹಿಂದೆ ಅಧಿಕಾರದ ಬಯಕೆಯಾಗಿದೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಅವರು ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಹಿಂದೆ ಅಧಿಕಾರಕ್ಕಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಹೋದರು. ಹೀಗೆ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಯಡಿಯೂರಪ್ಪ ಭೇಟಿ ಸಹಾ ಅದರ ಭಾಗವಾಗಿದೆ. ಹೇಗಾದರೂ ಸರಿ ಸಿದ್ದರಾಮಯ್ಯ ಅಧಿಕಾರ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದರು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹಾಗೂ ಬಿಎಸ್‌ವೈ ಭೇಟಿ ಬಗ್ಗೆ ಕೇಂದ್ರದ ನಾಯಕರಿಗೂ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಯಡಿಯೂರಪ್ಪರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ಐಟಿ ದಾಳಿ ಪ್ರಯೋಗ ಮಾಡಿದ್ದು, ಐಟಿ ದಾಳಿ ಹಿಂದೆ ಸ್ಪಷ್ಟವಾಗಿ ರಾಜಕೀಯ ಉದ್ದೇಶವಿದೆ. ಇದರ ಬಗ್ಗೆ ಯಾವುದೇ ಅನುಮಾನ ಇಲ್ಲವೆಂದರು.

× Chat with us